Anamadheya Ashok Kumar.News

Wednesday, January 29, 2025

16

 

*ಫೆಬ್ರವರಿ 7 ರಂದು "ಅನಾಮಧೇಯ ಅಶೋಕ್ ಕುಮಾರ್” ಆಗಮನ* .

 

 *ಟೀಸರ್ ಹಾಗೂ ಟ್ರೇಲರ್ ಮೂಲಕ ಸದ್ದು ಮಾಡುತ್ತಿದೆ ಸಾಗರ್ ಕುಮಾರ್ ನಿರ್ದೇಶನದ ಹಾಗೂ ಕಿಶೋರ್ ಕುಮಾರ್ ಅಭಿನಯದ ಈ ಚಿತ್ರ* !

 

ಎಸ್‌ ಕೆ ಎನ್ ಫಿಲಂಸ್ ಲಾಂಛನದಲ್ಲಿ ನಿರ್ಮಲಾ ಕುಮಾರ್ ಹಾಗು ರಮ್ಯ ಸಾಗರ್ ಕುಮಾರ್ ನಿರ್ಮಿಸಿರುವ, ಕಿಶೋರ್ ಕುಮಾರ್ ಸಹ ನಿರ್ಮಾಣವಿರುವ ಹಾಗೂ ಸಾಗರ್ ಕುಮಾರ್ ನಿರ್ದೇಶನದ "ಅನಾಮಧೇಯ ಅಶೋಕ್ ಕುಮಾರ್" ಚಿತ್ರ ಫೆಬ್ರವರಿ 7 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಜನಪ್ರಿಯ ನಟ ಕಿಶೋರ್ ಕುಮಾರ್ ಹಾಗೂ "ಆಚಾರ್ & ಕೋ" ಚಿತ್ರದ ಹರ್ಷಿಲ್ ಕೌಶಿಕ್ ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಬಿಡುಗಡೆಯ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.

 

ಮೂಲತಃ ಐಟಿ ಉದ್ಯೋಗಿಯಾಗಿರುವ ನಾನು, ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಹಿರಿತೆರೆಯಲ್ಲಿ ಇದು ಮೊದಲ ಚಿತ್ರ. ದೇಶದಲ್ಲಿ ನಡೆದ ಕೆಲವು ಕ್ರೈಮ್ ಫಟನೆಗಳು ಹಾಗೂ ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ಬರೆದ ಪುಸ್ತಕ ಈ ಚಿತ್ರದ ಕಥೆಗೆ ಸ್ಪೂರ್ತಿ. ಇದು ಸಂಜೆ ಆರರಿಂದ ಬೆಳಗ್ಗೆ ಆರರವರೆಗೂ ನಡೆಯುವ ಕಥೆ. ಪ್ರಸಿದ್ದ ವಕೀಲರೊಬ್ಬರ ಕೊಲೆಯ ಸುತ್ತ ನಡೆಯುವ ಕಥೆಯೂ ಹೌದು. ಚಿತ್ರಕ್ಕೆ ನಾನೇ ಕಥೆ ಬರದಿದ್ದೇನೆ. ಚಿತ್ರಕಥೆಯನ್ನು ನಾನು ಹಾಗೂ ಬೆನ್ನಿ ಥಾಮಸ್ ಇಬ್ಬರೂ ಬರೆದಿದ್ದೇವೆ.  ಕಿಶೋರ್ ಕುಮಾರ್ ಪತ್ರಕರ್ತನ ಪಾತ್ರದಲ್ಲಿ ಹಾಗೂ ಹರ್ಷಿಲ್ ಕೌಶಿಕ್ ಸರ್ಕಲ್ ಇನ್ಸ್ ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಧೀಂದ್ರ ನಾಯರ್, ಕಾಂತರಾಜ್ ಕಡ್ಡಿಪುಡಿ, ವೀರೇಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಫೆಬ್ರವರಿ 7 ರಂದು ನಮ್ಮ ಚಿತ್ರ ತೆರೆಗೆ ಬರಲಿದೆ ಎಂದು ನಿರ್ದೇಶಕ ಸಾಗರ್ ಕುಮಾರ್ ತಿಳಿಸಿದರು.

ಸಾಗರ್ ಕುಮಾರ್ ಅವರು ಹೇಳಿದ ಕಥೆ ಇಷ್ಟವಾಯಿತು ಎಂದು ಮಾತನಾಡಿದ ನಟ ಕಿಶೋರ್ ಕುಮಾರ್, ನಾನು ಈ ಚಿತ್ರದಲ್ಲಿ ಪತ್ರಕರ್ತನಾಗಿ ಅಭಿನಯಿಸಿದ್ದೇನೆ‌‌. "ಅನಾಮಧೇಯ" ಎಂದರೆ ಹೆಸರಿಲ್ಲದವನು ಎಂದು. ನಮ್ಮ ಚಿತ್ರದಲ್ಲಿ "ಅನಾಮಧೇಯ ಅಶೋಕ್ ಕುಮಾರ್"ಯಾರು? ಎಂಬ ಗುಟ್ಟನ್ನು ನಿರ್ದೇಶಕರು ಬಿಟ್ಟುಕೊಟ್ಟಿಲ್ಲ. ಅದು ಯಾರು ಎಂಬುದನ್ನು ಚಿತ್ರ ನೋಡಿ ತಿಳಿದುಕೊಳ್ಳಬೇಕು. ಕನ್ನಡ ಚಿತ್ರರಂಗದ ಸದ್ಯದ ಪರಿಸ್ಥಿತಿ ತಮಗೆಲ್ಲಾ ಗೊತ್ತಿದೆ. ಆದರೂ ಚಿತ್ರಗಳ ನಿರ್ಮಾಣ ಹಾಗೂ ಬಿಡುಗಡೆ ಕಡಿಮೆ ಆಗಿಲ್ಲ. ಉತ್ತಮ ಕಂಟೆಂಟ್ ವುಳ್ಳ ಚಿತ್ರವನ್ನು ಪ್ರೇಕ್ಷಕ ಮೆಚ್ಚಿಕೊಳ್ಳವುದರಲ್ಲಿ ಯಾವುದೇ ಸಂದೇಹವಿಲ್ಲ. ಹೊಸತಂಡದ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು.

 

ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡ ನಟ ಹರ್ಷಿಲ್ ಕೌಶಿಕ್, ಕಿಶೋರ್ ಅವರ ಜೊತೆಗೆ ನಟಿಸಿದ್ದು ಖುಷಿಯಾಗಿದೆ ಎಂದರು.

 

ಚಿತ್ರದಲ್ಲಿ ನಟಿಸಿರುವ ವೀರೇಶ್, ಸುಷ್ಮ, ಗಗನ, ದೀಪಕ್ ಸಂಗೀತ ನಿರ್ದೇಶಕ ಆಜಾದ್, ಛಾಯಾಗ್ರಾಹಕ ಸುನೀಲ್ ಹೊನಳ್ಳಿ, ಸಂಕಲನಕಾರ ಯೇಸು ಹಾಗೂ ವಿತರಕರಾದ ಕುನಾಲ್ ಹಾಗೂ ರವಿಚಂದ್ರನ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.

Copyright@2018 Chitralahari | All Rights Reserved. Photo Journalist K.S. Mokshendra,