Eltuv Muthaa.News

Wednesday, June 11, 2025

20

 

*ಟೀಸರ್ ನಲ್ಲೇ ಮೋಡಿ ಮಾಡಿದ "ಎಲ್ಟು ಮುತ್ತಾ"* .                   

 

 *ಇದು ಸಾವಿಗೆ ಡೋಲು ಬಡೆಯುವವರ ಜೀವನದಲ್ಲಿ ನಡೆಯುವ ಘಟನೆ ಆಧರಿಸಿದ ಚಿತ್ರ* .

 

ಹೈ5 ಸ್ಟುಡಿಯೋಸ್ ಲಾಂಛನದಲ್ಲಿ ಸತ್ಯ   ಶ್ರೀನಿವಾಸನ್ ನಿರ್ಮಿಸಿರುವ, ರಾ.ಸೂರ್ಯ ಬರೆದು ನಿರ್ದೇಶಿಸಿರುವ ಹಾಗೂ ರಾ.ಸೂರ್ಯ - ಶೌರ್ಯ ಪ್ರತಾಪ್ ಪ್ರಮುಖಪಾತ್ರದಲ್ಲಿ ನಟಿಸಿರುವ "ಎಲ್ಟು ಮುತ್ತಾ" ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು. ಶೈಲಜಾ ವಿಜಯ್ ಕಿರಂಗದೂರ್, ಅಕ್ಷಯ್ ಗಂಗಾಧರ್ ಹಾಗೂ    ಎಲ್ ವೈ ರಾಜೇಶ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಟೀಸರ್ ಕುತೂಹಲ ಮೂಡಿಸಿದ್ದು, ಬಿಡುಗಡೆ ಆದ ಕ್ಷಣದಿಂದಲೇ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆ ಪಡೆಯುತ್ತಿದೆ. ಟೀಸರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

 

"ಎಲ್ಟು ಮುತ್ತಾ", ಸಾವಿಗೆ ಡೋಲು ಹೊಡೆಯುವವರ ಸುತ್ತಲ್ಲಿನ ಕಥೆ. "ಎಲ್ಟು ಮುತ್ತಾ" ಅಂದರೆ ಎರಡು ಪಾತ್ರಗಳು. ಎಲ್ಟು ಪಾತ್ರದಲ್ಲಿ ನಾನೇ ಕಾಣಿಸಿಕೊಂಡಿರುವುದರ ಜೊತೆಗೆ ಈ ಚಿತ್ರವನ್ನು ನಿರ್ದೇಶನ ಮಾಡಿದ್ದೇನೆ ಎಂದು ನಿರ್ದೇಶಕ ರಾ ಸೂರ್ಯ ಹೇಳಿದರು ಅಲ್ಲದೇ ಮುತ್ತಾ ಪಾತ್ರದಲ್ಲಿ ಶೌರ್ಯ ಪ್ರತಾಪ್ ಅಭಿನಯಿಸಿದ್ದಾರೆ. ನವೀನ್ ಪಡೀಲ್, ಕಾಕ್ರೋಜ್ ಸುಧೀ, ಯಮುನ ಶ್ರೀನಿಧಿ ಅವರಂತಹ ಅನುಭವಿ ಕಲಾವಿದರ ಜೊತೆಗೆ ಬಹುತೇಕ ನೂತನ ಪ್ರತಿಭೆಗಳು ಈ ಚಿತ್ರದಲ್ಲಿ ನಟಿಸಿದ್ದಾರೆ. ಇದೊಂದು ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ನವೀಲು ಹಾಗೂ ಸರ್ಪದ ನಡುವೆ ನಡೆಯುವ ಸಂಘರ್ಷದ ಕಥೆಯೂ ನಮ್ಮ ಚಿತ್ರದ ಕಥೆಗೆ ಸ್ಪೂರ್ತಿ. ತನ್ನ ಕುಣಿತದಿಂದ ಎಲ್ಲರ ಗಮನ ಸೆಳೆಯುವ ಮುಗ್ದ ಸ್ವಭಾವದ ನವೀಲು,‌ ಕೆರಳಿದರೆ ಕಾಳಿಂಗ ಸರ್ಪವನ್ನು ಕೊಲ್ಲುತ್ತದೆ. ಇದನ್ನೇ ನಾವು ಪಾತ್ರಗಳ ಮೂಲಕ ಹೇಳಿದ್ದೇವೆ. ಇದು ಕೊಡಗು ಭಾಗದಲ್ಲಿ ನಡೆಯುವ ಕಥೆ. ಹೆಚ್ಚಿನ ಚಿತ್ರೀಕರಣ ಕೊಡಗಿನಲ್ಲೇ ಆಗಿದೆ. ಸಂಭಾಷಣೆ ಕೂಡ ಮಡಿಕೇರಿ ಕನ್ನಡ ಭಾಷೆಯಲ್ಲೇ ಇರುತ್ತದೆ ಎಂದು ನಿರ್ದೇಶಕ ರಾ.ಸೂರ್ಯ ತಿಳಿಸಿದರು.

ನಾನು ಮೂಲತಃ ಐಟಿ ಉದ್ಯೋಗಿ. ವೈಲ್ಡ್ ಫೊಟೊಗ್ರಾಫಿ ನನ್ನ ಹವ್ಯಾಸಿ. ನನ್ನ ತಂದೆ ಶ್ರೀನಿವಾಸನ್ ತಮಿಳು ಚಿತ್ರರಂಗದಲ್ಲಿ ವಿತರಕರಾಗಿದ್ದರು. ಸಿನಿಮಾ ನಿರ್ಮಾಣ ನನ್ನ ಆಸೆ. ಅದು ಈಗ ಈಡೇರಿದೆ.  ಹೈ5 ಸ್ಟುಡಿಯೋಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ.‌ ಚಿತ್ರೀಕರಣಕ್ಕೂ ಮುನ್ನ ನಾವು ಅನೇಕ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೆವು. ಚಿತ್ರತಂಡದ ಪ್ರತಿಯೊಬ್ಬರಿಗೂ ಆರೋಗ್ಯ ಹಾಗೂ ಜೀವವಿಮೆ ಮಾಡಿಸಿದ್ದೆವು. ನಮ್ಮಿಂದ ಯಾರಿಗೂ ತೊಂದರೆ ಆಗಬಾರದು ಎಂಬ ಉದ್ದೇಶವಷ್ಟೇ. ದೇವರ ದಯೆಯಿಂದ ಸಣ್ಣ‌ ಅಡಚಣೆಯೂ ಆಗದೆ ನಮ್ಮ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ  ಬಿಡುಗಡೆ ಹಂತ ತಲುಪಿದೆ. ಜುಲೈ ಅಂತ್ಯದಲ್ಲಿ ಚಿತ್ರ ತೆರೆಗೆ ಬರಲಿದೆ. ಅದಕ್ಕೂ ಮುನ್ನ ಹಾಡುಗಳು ಹುಬ್ಬಳ್ಳಿಯಲ್ಲಿ ಹಾಗೂ ಟ್ರೇಲರ್ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ. Ace 22 ಪ್ರೊಡಕ್ಷನ್ ನ‌ ಪವೀಂದ್ರ ಮುತ್ತಪ್ಪ ಈ ಚಿತ್ರದ ಬಿಡುಗಡೆಗಾಗಿ ನಮ್ಮ ಜೊತೆಯಾಗಿದ್ದಾರೆ. ಚಿತ್ರತಂಡದ ಸಹಕಾರದಿಂದ ಒಂದೊಳ್ಳೆ ಚಿತ್ರ ಮೂಡಿಬಂದಿದೆ ಎಂದರು ಸತ್ಯ ಶ್ರೀನಿವಾಸನ್.

 

ನಾನು ಕಲಾವಿದ ಆಗುವುದು ನನ್ನ ತಂದೆಗೆ ಇಷ್ಟವಿರಲಿಲ್ಲ. ಹಾಗೆ ಆಯಿತು.‌ ನಮ್ಮ ತಂದೆಯ ಇಚ್ಚೆಯಂತೆ ಓದಿ ಒಳ್ಳೆಯ ಸ್ಥಾನಕ್ಕೆ ಬಂದು ಈಗ ನಟ ಆಗಿದ್ದೀನಿ. ನನ್ನ ಹಾಗೂ ನನ್ನ ತಂದೆ ಇಬ್ಬರ ಆಸೆಯೂ ಈಡೇರಿದೆ. ಮುತ್ತಾ ನನ್ನ ಪಾತ್ರದ ಹೆಸರು. ನಟನಾಗಷ್ಟೇ ಅಲ್ಲದೆ ಸಹ ನಿರ್ದೇಶಕನಾಗಿ ಹಾಗೂ ಸಹ ಬರಹಗಾರನಗೂ ಕಾರ್ಯ ನಿರ್ವಹಿಸಿದ್ದೇನೆ ಎಂದು ನಟ ಶೌರ್ಯ ಪ್ರತಾಪ್ ಹೇಳಿದರು.

 

ಒಳ್ಳೆಯ ತಂಡದ ಜೊತೆಗೆ ಕೆಲಸ ಮಾಡಿದ ಖುಷಿ ಇದೆ‌. ಅಲೆಕ್ಸ್ ಚಟ್ವಾ ನನ್ನ ಪಾತ್ರದ ಹೆಸರು ಎಂದರು ಕಾಕ್ರೋಜ್ ಸುಧೀ.

 

ನಾನು ಸಂಗೀತ ನಿರ್ದೇಶಕನಾಗಲೂ ಗುರುಗಳಾದ ಸಂಗೀತ ಕಟ್ಟಿ ಹಾಗೂ ರವಿ ಬಸ್ರೂರ್ ಅವರು ಕಾರಣ. ಈ ಚಿತ್ರದಲ್ಲಿ ಐದು ಹಾಡುಗಳಿದೆ ಎಂದು ಸಂಗೀತ ನಿರ್ದೇಶಕ ಪ್ರಸನ್ನ ಕೇಶವ ತಿಳಿಸಿದರು‌.

 

ನಾಯಕಿ ಪ್ರಿಯಾಂಕ ಮಲಾಲಿ,  Ace 22 ಪ್ರೊಡಕ್ಷನ್ ನ ಪವೀಂದ್ರ ಮುತ್ತಪ್ಪ ಕೋಪದಿರ, ಕಾರ್ಯಕಾರಿ ನಿರ್ಮಾಪಕ ಹಾಗೂ ನಟ ರುಹಾನ್ ಆರ್ಯ ಹಾಗೂ ಧನು ದೇವಯ್ಯ ಮುಂತಾದವರು "ಎಲ್ಟು ಮುತ್ತಾ" ಚಿತ್ರದ ಕುರಿತು ಮಾತನಾಡಿದರು.

 

Copyright@2018 Chitralahari | All Rights Reserved. Photo Journalist K.S. Mokshendra,