ಐಎಎಸ್ ಯುವ ರೈತ
‘ಬಂಗಾರದ ಮನುಷ್ಯ’ ಸಿನಿಮಾವನ್ನು ನೆನಪು ಮಾಡಿಕೊಂಡರೆ ಡಾ.ರಾಜ್‌ಕುಮಾರ್ ನಟಿಸಿದ್ದ ‘ರಾಜೀವ’ ಪಾತ್ರ ಕಣ್ಣ ಮುಂದೆ ಬರುತ್ತದೆ. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ಸಿದ್ದಗೊಂಡಿದೆ. ಯುವ ರೈತರ ಕತೆಯಾಗಿದೆ. ಈಗಾಗಲೇ ಬೆಳೆನಾಶ ಹಾಗೂ ಸಾಲಬಾಧೆಯಿಂದ ಸಾಕಷ್ಟು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಂತಹ ಸೂಕ್ಷ ವಿಚಾರಗಳನ್ನು ತೆಗೆದುಕೊಂಡು ದೃಶ್ಯರೂಪದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಕಥನಾಯಕ ಐಎಎಸ್ ಮಾಡಿ ಪಟ್ಟಣದಿಂದ ಹಳ್ಳಿಗೆ ಬರುತ್ತಾನೆ. ಅಲ್ಲಿ ನಡೆಯುತ್ತಿರುವ ಅನಾಚಾರಗಳನ್ನು ಕಂಡು ಖೇದಗೊಳ್ಳುತ್ತಾನೆ. ನಂತರ ಹಳ್ಳಿಗಳನ್ನು ತೊರೆದು ಸಿಟಿಗೆ ಬರುತ್ತಿರುವ ಯುವಕರ ಮನಸ್ಸನ್ನು ಬದಲಿಸಿ ಇಲ್ಲಿಯೇ ಇದ್ದು ಕೃಷಿಯಲ್ಲಿ ತೊಡಗಿಕೊಳ್ಳಲು ಯಾವ ರೀತಿ ಹೋರಾಡುತ್ತಾನೆ ಎನ್ನುವುದು ತಿರುಳಾಗಿದೆ. ಮಂಡ್ಯಾ, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.
ನಾಯಕನಾಗಿ ಮಯೂರ್‌ಪಟೇಲ್ ರಿಲಾಂಚ್ ಎನ್ನುವಂತೆ ೨೫,೪೦ ಮತ್ತು ೬೦ ವರ್ಷದವರಾಗಿ ಮೂರು ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ ಅಕ್ಷತಾಶಾಸ್ತ್ರೀಗೆ ಹತ್ತನೆ ಸಿನಿಮಾವಾಗಿದೆ. ಉಳಿದಂತೆ ನಿಹಾರಿಕಾ, ಶಂಕರ್‌ಅಶ್ವತ್,ಬಸವರಾಜು, ರಾಮಯ್ಯ ಮುಂತಾದವರು ನಟಿಸಿದ್ದಾರೆ. ಶೇಖರ್‌ಸೋವರ್ ಸಾಹಿತ್ಯದ ಆರು ಹಾಡುಗಳಿಗೆ ರೋಹಿತ್‌ಸೋವರ್ ಸಂಗೀತ ಸಂಯೋಜಿಸಿದ್ದಾರೆ. ಈ ಪೈಕಿ ಒಂದು ಗೀತೆಗೆ ಮಯೂರ್‌ಪಟೇಲ್ ಧ್ವನಿಯಾಗಿದ್ದಾರೆ. ಸಂಕಲನ ವಿಜಯ್‌ಸೋವರ್, ನೃತ್ಯ ವರ್ಧನ್, ಸಂಭಾಷಣೆ ಕಾಕೋಳುರಾಮಯ್ಯ, ಛಾಯಾಗ್ರಹಣ ಆನಂದ್‌ಇಳಯರಾಜ ನಿರ್ವಹಿಸಿದ್ದಾರೆ. ರಚನೆ, ನಿರ್ಮಾಣ ಜಿ.ಎಂ.ರಮೇಶ್ ಇವರೊಂದಿಗೆ ಕಿರಣ್.ಕೆ ಸಹ ಹಣ ಹೂಡಿದ್ದಾರೆ. ಫ್ಲೈಯಿಂಗ್ ಕಿಂಗ್ ಮಂಜು ನಿರ್ದೇಶನ ಮಾಡಿರುವ ಚಿತ್ರವು ಶುಕ್ರವಾರದಂದು ಬಿಡುಗಡೆಯಾಗುತ್ತಿದೆ.