ಚಿತ್ರ: ಮನರೂಪ
ತಾರಾಗಣ: ದಿಲೀಪ್ ಗೌಡ, ನಿಶಾ ಬಿ ಆರ್, ಆರ್ಯನ್, ಅನುಷಾ ರಾವ್, ಶಶಾಂಕ್
ನಿರ್ದೇಶನ: ಕಿರಣ್ ಹೆಗ್ಡೆ
ನಿರ್ಮಾಣ: ಕಿರಣ್ ಹೆಗ್ಡೆ
ಕಾಲೇಜ್ ನಲ್ಲಿ ಸ್ನೇಹಿತರಾಗಿದ್ದ ಐದು ಮಂದಿಯ ತಂಡವಾಗಿ ಮತ್ತೆ ಜತೆಯಾಗಿ ಒಂದು ಪ್ರಯಾಣ ಆರಂಭಿಸುತ್ತಾರೆ. ಅದು ಪಶ್ಚಿಮ ಘಟ್ಟಗಳ ಕಡೆಗಿನ ಪಯಣ. ಆ ಕಾಡೊಳಗೆ ತನ್ನದೊಂದು ಹೊಸ ಯೋಜನೆಯನ್ನು ತೆರೆದಿಡುವ ಆಸೆ ಗೌರವ್ (ದಿಲೀಪ್ ಗೌಡ)ನದ್ದಾಗಿರುತ್ತದೆ. ಸಂಜೆ ಸ್ವಲ್ಪ ಯಕ್ಷಗಾನ ನೋಡಿಕೊಂಡು ಕಾಡಿನಲ್ಲೇ ವಾಸವಾಗಲು ಹೊರಟವರಿಗೆ ಒಂದು ಅಪಾಯ ಕಾದಿರುತ್ತದೆ. ರಾತ್ರಿ ಮಲಗಿ ಮುಂಜಾನೆ ಎದ್ದೇಳುವಾಗ ಅವರಲ್ಲಿ ಪೂರ್ಣ(ನಿಶಾ ಬಿ.ಆರ್) ಮತ್ತು ಶರವಣ(ಶಿವ ಬಿ.ಕೆ) ಎಂಬ ಇಬ್ಬರು ನಾಪತ್ತೆಯಾಗಿರುತ್ತಾರೆ. ಅವರಿಬ್ಬರನ್ನು ಗೌರವ್ ಜತೆಗೆ ಉಜ್ವಲ(ಅನುಷಾ ರಾವ್) ಮತ್ತು ಶಶಾಂಕ್(ಆರ್ಯನ್) ಕೂಡ ಸೇರಿಕೊಂಡು ಹುಡುಕುತ್ತಾರೆ. ಬಳಿಕ ಮೂವರು ಮೂರು ದಾರಿಗಳನ್ನು ಹಿಡಿಯುತ್ತಾರೆ. ಆದರೆ ಅವರಿಗೆ ಪತ್ತೆಯಾದ ಸ್ನೇಹಿತರ ಬದಲಾಗಿ ಅವರನ್ನು ಮರೆಯಲ್ಲಿ ನಿಂತು ಕಾಡುವ ಮೂರು ಮಂದಿ ಎದುರಾಗುತ್ತಾರೆ. ಅವರು ಯಾರು? ಯಾಕೆ ಹಾಗೆ ಮಾಡುತ್ತಾರೆ? ಕಾಣೆಯಾದ ಸ್ನೇಹಿತರು ಏನಾಗುತ್ತಾರೆ ಎನ್ನುವುದನ್ನು ತಿಳಿಯಬೇಕಾದರೆ ಚಿತ್ರ ನೋಡಬೇಕು.
ಭಯಪಡಿಸುತ್ತಲೇ ನಮಗೆ ಇದುವರೆಗೆ ಪರಿಚಯವಿರದ ಕ್ರೌರ್ಯದ ಒಂದು ಲೋಕವನ್ನು ಅನಾವರಣಗೊಳಿಸಿದ್ದಾರೆ ನಿರ್ದೇಶಕ ಕಿರಣ್ ಹೆಗ್ಡೆ.
ಕ್ರೌರ್ಯ ತುಂಬಿಕೊಂಡ ಸೈಕೋಪಾತ್ ಖಳರ ಬಗ್ಗೆ ಬಹಳ ಹಿಂದಿನಿಂದಲೇ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ತೋರಿಸಿಕೊಟ್ಟಿದ್ದಾರೆ. ಆದರೆ ತಮ್ಮ ಸೈಕೋಪಾತ್ ಬುದ್ಧಿಯನ್ನು ಸಾಮಾಜಿಕಜಾಲತಾಣಗಳ ಮೂಲಕ ದುಡ್ಡಾಗಿ ಪರಿವರ್ತಿಸುತ್ತಿರುವ ಸಂಗತಿಯನ್ನು ಇತ್ತೀಚೆಗೆ ಕನ್ನಡದ ಒಂದೆರಡು ಸಿನಿಮಾಗಳು ಕೂಡ ಹೇಳಿವೆ. ಆದರೆ ನಿರೂಪಣೆಯ ವಿಚಾರಕ್ಕೆ ಬಂದರೆ ಅವೆಲ್ಲಕ್ಕಿಂತ ವಿಭಿನ್ನವಾಗಿ ನಿಲ್ಲುವ ಸಿನಿಮಾ ಮನರೂಪ. ಅದಕ್ಕೆ ಪ್ರಮುಖ ಕಾರಣ ಚಿತ್ರದ ಛಾಯಾಗ್ರಹಣದ ಹೊಣೆ ಹೊತ್ತಿರುವ ಗೋವಿಂದ ರಾಜ್. ಅವರ ಛಾಯಾಗ್ರಹಣದಲ್ಲಿ ಕಾಡೊಳಗಿನ ಪ್ರತಿ ದೃಶ್ಯವೂ ಫ್ರೇಮ್ ಹಾಕಿದ ಜೀವಂತ ಚಿತ್ರಗಳಂತೆ ಸುಂದರ. ಸರ್ವಣ್ಣ ಅವರ ಸಂಗೀತ ಮತ್ತು ನಾಗರಾಜ್ ಹುಲಿವಾನ ಅವರು ಸೌಂಡ್ ಡಿಸೈನ್ ಮಾಡಿರುವ ರೀತಿಗೆ ಪ್ರೇಕ್ಷಕರು ಕೂಡ ಕಾಡೊಳಗೆ ಸೇರಿಕೊಂಡ ಹಾಗೆ ಬೆಚ್ಚಿ ಬೀಳುವುದು ಖಚಿತ. ನಟನೆಯ ವಿಚಾರಕ್ಕೆ ಬಂದರೆ ಬಹಳಷ್ಟು ನವ ಪ್ರತಿಭೆಗಳೇ ತುಂಬಿರುವ ಈ ಚಿತ್ರ ಭವಿಷ್ಯದ ಭರವಸೆಯ ಕಲಾವಿದರನ್ನು ಚಿತ್ರರಂಗಕ್ಕೆ ನೀಡಿದೆ ಎನ್ನಬಹುದು.
ಕಾಡಿನ ಸೌಂದರ್ಗಳನ್ನಷ್ಟೇ ಕಂಡು ಅಲ್ಲಿ ಕಾಲ ಕಳೆಯಲು ಹೊರಡುವವರು ಅಲ್ಲಿ ಪ್ರಾಣಿಗಳಿಗಿಂತಲೂ ಕ್ರೂರಿಗಳಾದ ಮನುಷ್ಯರು ಇರಬಹುದೆನ್ನುವ ಎಚ್ಚರಿಕೆಯನ್ನು ಚಿತ್ರ ನೀಡಿದೆ. ಅದೇ ವೇಳೆ ತಂದೆ ತಾಯಿಯ ನಿಜವಾದ ಕಾಳಜಿ ದೊರೆಯದೇ ಹೋಗುವ ಮಕ್ಕಳು ಯಾವ ಮಟ್ಟಿಗೆ ಕೆಟ್ಟವರಾಗುತ್ತಾರೆ ಎನ್ನುವುದನ್ನು ಕೂಡ ಚಿತ್ರದ ಪಾತ್ರಗಳಲ್ಲಿ ತೋರಿಸಲಾಗಿದೆ. ಒಟ್ಟಿನಲ್ಲಿ ಮನವನ್ನು ಕಾಡುವ, ಮನಕಲಕುವ ಒಂದಷ್ಟು ರೂಪ ವಿರೂಪಗಳಿರುವ ಚಿತ್ರ ಖಂಡಿತವಾಗಿ ಹೊಸ ಪ್ರಯತ್ನ ಎಂದು ಹೇಳಬಹುದು. ಪಾತ್ರವಾಗಲು ಕಲಾವಿದರು ಮತ್ತು ಆ ಪಾತ್ರಗಳನ್ನು ಚಿತ್ರೀಕರಿಸಲು ತಂತ್ರಜ್ಞರು ತೆಗೆದುಕೊಂಡಿರುವ ರಿಸ್ಕ್ ನಿಜಕ್ಕೂ ಶ್ಲಾಘನೀಯ.
ಮನರೂಪ ಚಿತ್ರ ನೋಡಿದವರಿಗೆ ಒಂದು ಸಿನಿಮಾದ ಜತೆಗೆ ಒಂದು ಪ್ರವಾಸದ ಅನುಭವ ಕೂಡ ಆಗುವುದು ಸಹಜ. ಅದು ಹೇಗೆ ಎನ್ನುವುದನ್ನು ಚಿತ್ರಮಂದಿರಕ್ಕೆ ಹೋಗಿ ನೋಡಿದರೆ ಚಂದ.