ಭಾಷಾಭಿಮಾನ ಮತ್ತು ಅಪರಾಧಗಳ ನಡುವಿನ ಆಕರ್ಷಕ ಕತೆ
ಚಿತ್ರ: ಕನ್ನಡ್ ಗೊತ್ತಿಲ್ಲ
ತಾರಾಗಣ: ಹರಿಪ್ರಿಯಾ, ಸುಧಾರಾಣಿ, ಧರ್ಮಣ್ಣ, ಮಜಾ ಟಾಕೀಸ್ ಪವನ್
ನಿರ್ದೇಶನ: ಮಯೂರ ರಾಘವೇಂದ್ರ
ನಿರ್ಮಾಣ: ಕುಮಾರ ಕಂಠೀರವ
ನಮ್ಮ ದಕ್ಷಿಣದ ರಾಜ್ಯಗಳಲ್ಲಿ ಆಯಾ ರಾಜ್ಯಗಳ ಮಂದಿಗೆ ತಮ್ಮ ಭಾಷಾ ಪ್ರೇಮ ಎಷ್ಟರಮಟ್ಟಿಗೆ ಇವೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹಾಗಾಗಿಯೇ ಪ್ರತಿಯೊಂದು ರಾಜ್ಯಗಳ ಗಡಿಭಾಗಗಳಿಗೆ ಬಂದಾಗ ಮತ್ತೊಂದು ರಾಜ್ಯದ ಭಾಷೆಯ ಪಸರಿಸುವಿಕೆ ಹೆಚ್ಚಾಗಿ ಇರುತ್ತದೆ. ಆದರೆ ಕರ್ನಾಟಕದ ವಿಚಾರಕ್ಕೆ ಬಂದಾಗ ಬೆಂಗಳೂರಿನಂಥ ರಾಜ್ಯದ ರಾಜಧಾನಿಯಲ್ಲೇ `ಕನ್ನಡ್ ಗೊತ್ತಿಲ್ಲ’ ಎಂದು ಹೇಳುವ ಮೂಲಕ ರಾಜ್ಯದ ಭಾಷೆಯನ್ನೇ ಸರಿಯಾಗಿ ಉಚ್ಚರಿಸದ ಪರಭಾಷೀಯರ ಸಂಖ್ಯೆ ಅಧಿಕವಾಗಿರುವುದನ್ನು ಕಾಣುತ್ತೇವೆ. ಅವರಿಗೆ ಎಚ್ಚರಿಕೆ ಮೂಡಿಸುವ ಮಾದರಿಯಲ್ಲಿ ಸುದ್ದಿಯಾಗಿರುವ ಚಿತ್ರ ಇದು. ಅದೇ ಎಚ್ಚರಿಕೆಯನ್ನು ಮನದಲ್ಲಿ ಬೆಳೆಸುತ್ತಾ ಸಾಗುವ ಕತೆ ಕೊನೆಯಲ್ಲಿ ಒಂದು ವಿಶೇಷ ತಿರುವಿನ ಮೂಲಕ ವಿಭಿನ್ನ ಹಾದಿ ಪಡೆಯುತ್ತದೆ.
ಒಬ್ಬ ಕ್ಯಾಬ್ ಡ್ರೈವರ್ ಕಾರಿನಲ್ಲಿ ಪಯಣಿಸುವ ಪರಭಾಷಾ ಪ್ರಿಯರು ಒಬ್ಬೊಬ್ಬರಾಗಿ ನಾಪತ್ತೆಯಾಗುತ್ತಾ ಹೋಗುತ್ತಾರೆ. ಅದಕ್ಕೂ ಮೊದಲು ಆ ಕ್ಯಾಬ್ ಡ್ರೈವರ್ ಗುಪ್ತವಾಗಿ ಆತನ ಫೊಟೋ ತೆಗೆದಿರಿಸಿರುತ್ತಾನೆ. ಆದರೆ ಆಮೇಲೆ ಏನಾಯಿತು? ಕ್ಯಾಬ್ ಡ್ರೈವರ್ ಅವರನ್ನು ಏನು ಮಾಡುತ್ತಾನೆ ಎನ್ನುವ ಪ್ರಶ್ನೆಗೆ ಉತ್ತರವನ್ನು ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ನೀಡಲಾಗಿದೆ. ಕನ್ನಡ ಗೊತ್ತಿಲ್ಲದಿರುವುದೇ ಅವರು ಕಾಣೆಯಾಗಲು ಕಾರಣ ಎಂದುಕೊಂಡವರಿಗೆ ಹೊಸತೊಂದು ತಿರುವಿನ ತಿರುಳನ್ನು ನೀಡುವ ಮೂಲಕ ನಿರ್ದೇಶಕ ಮಯೂರ ರಾಘವೇಂದ್ರ ಅಚ್ಚರಿ ಮೂಡಿಸಿದ್ದಾರೆ. ಚಿತ್ರವನ್ನು ನಿರ್ದೇಶಿಸುವ ಜತಗೆ ಹರ್ಷವರ್ಧನ ಎನ್ನುವ ಎಸಿಪಿ ಪಾತ್ರವನ್ನು ನಿಭಾಯಿಸಿದ್ದಾರೆ ಮಯೂರ ರಾಘವೇಂದ್ರ. ಆದರೆ ಚಿತ್ರದಲ್ಲಿ ಪ್ರಮುಖ ತನಿಖಾಧಿಕಾರಿ ಶ್ರುತಿ ಚಕ್ರವರ್ತಿಯಾಗಿ ಎಂಟ್ರಿಯಾಗುತ್ತಾರೆ ಹರಿಪ್ರಿಯಾ. ಅವರ ತನಿಖೆ ಹೇಗೆ ಸಾಗುತ್ತದೆ ಎನ್ನುವುದು ಮತ್ತು ಕೊನೆಗೆ ಎಲ್ಲಿ ಬಂದು ನಿಲ್ಲುತ್ತದೆ ಎನ್ನುವುದೇ ಚಿತ್ರದ ಹೈಲೈಟ್.
ಸ್ಪೆಷಲ್ ಇಂಟಲಿಜನ್ಸ್ ಆಫೀಸರ್ ಆಗಿ ಹರಿಪ್ರಿಯ ಎಂದಿನಂತೆ ಆಕರ್ಷಕ ನಟನೆ ನೀಡಿದ್ದಾರೆ. ನಿರ್ದೇಶಕ ಮಯೂರ ರಾಘವೇಂದ್ರ ನಟನಾಗಿ ಕೂಡ ಪ್ರಥಮ ಚಿತ್ರವಾದರೂ ಪೊಲೀಸ್ ಪಾತ್ರಕ್ಕೆ ಹೊಂದಿಕೊಂಡಂತೆ ಕಾಣಿಸುತ್ತಾರೆ. ಮುಖ್ಯವಾಗಿ ಅತಿಥಿ ಪಾತ್ರದಂತೆ ಬಂದು ಹೋಗುವ ಸುಧಾರಾಣಿ ಯುನಿಫಾರ್ಮ್ ಇಲ್ಲದೆಯೂ ಪೊಲೀಸ್ ಖದರ್ ತೋರಿಸಿದ್ದಾರೆ. ಕ್ಯಾಬ್ ಡ್ರೈವರ್ ಆಗಿ ಧರ್ಮಣ್ಣ ತಮ್ಮ ಹಿಂದಿನ ಚಿತ್ರಗಳಿಗಿಂತ ವಿಭಿನ್ನ ಪಾತ್ರವನ್ನು ನಿಭಾಯಿಸಿದ್ದಾರೆ. ಮಜಾ ಟಾಕೀಸ್ ಪವನ್ ಅವರ ಪಾತ್ರದ ಪ್ರಾಮುಖ್ಯತೆ ಚಿತ್ರದ ಕೊನೆಯಲ್ಲಿ ತೆರೆದುಕೊಳ್ಳುತ್ತದೆ. ಚಿತ್ರದ ಹಾಡುಗಳು, ಮೈ ರೋಮಾಂಚನಗೊಳಿಸುವ ಸಂಗೀತದ ಮೂಲಕ ಸಂಗೀತ ನಿರ್ದೇಶಕ ನಕುಲ್ ಅಕುಲ್ ಅಭ್ಯಂಕರ್ ಮನ ಸೆಳೆಯುತ್ತಾರೆ. ಗಾಯಕಿ ಸ್ಪರ್ಶಾ ಸೇರಿದಂತೆ ಒಂದಷ್ಟು ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ ಕಲಾವಿದರು ಕೂಡ ತಮ್ಮ ಪಾತ್ರಗಳ ವೈವಿಧ್ಯತೆಯಿಂದಾಗಿ ನೆನಪಲ್ಲಿ ಉಳಿಯುತ್ತಾರೆ. ಮೊದಲ ಪ್ರಯತ್ನದಲ್ಲಿ ನಿರ್ದೇಶಕರು ಒಳ್ಳೆಯ ಚಿತ್ರವನ್ನೇ ನೀಡಿದ್ದಾರೆ ಎಂದು ಧೈರ್ಯದಿಂದ ಹೇಳಬಹುದು. ಕನ್ನಡದ ಮೇಲೆ ಅಭಿಮಾನ ಇರುವ ಪ್ರತಿಯೊಬ್ಬರು ಕೂಡ ನೋಡಿ ಸಂತಸ ಪಡೆಯಬಹುದಾದ ಸಿನಿಮಾ ಕನ್ನಡ್ ಗೊತ್ತಿಲ್ಲ.