ನಕ್ಕು ನಗಿಸುವ ಬ್ರಹ್ಮಚಾರಿ
ಅವನು ಸರ್ಕಾರಿ ನೌಕರ. ಅವಳು ಲೇಖಕಿ. ಎರಡು ಕಡೆಯಿಂದ ಒಪ್ಪಿದ ಮದುವೆಯ ನಂತರ ಮೊದಲ ಅನುಭವದಲ್ಲಿ ಏನೇನು ಆಗುತ್ತದೆ ಎಂದು ತಿಳಿ ಹಾಸ್ಯದ ಮೂಲಕ ಹೇಳುವುದೇ ‘ಬ್ರಹ್ಮಚಾರಿ’ ಚಿತ್ರದ ಒಂದು ಏಳೆಯ ಕತೆಯಾಗಿದೆ. ಹಾಗಂತ ಡಬ್ಬಲ್ ಮೀನಿಂಗ್ ಸಂಭಾಷಣೆಗಳು ಅತಿರೇಕವಾಗಿರದೆ, ದೃಶ್ಯಗಳು ಮುಜಗರ ತರದೆ ಶುದ್ದ ಮನರಂಜನೆಯಿಂದ ಕೂಡಿರುವುದು ಪ್ಲಸ್ ಪಾಯಿಂಟ್ ಆಗಿದೆ. ಅಷ್ಟಕ್ಕೂ ದಾಂಪತ್ಯ ಬದುಕಿಗೆ ಅಡ್ಡಿಯಾಗಿದ್ದ ಆ ಸಮಸ್ಯೆಯಾದರೂ ಏನು? ಅದಕ್ಕೆ ಅವನು ಏನು ಮಾಡುತ್ತಾನೆ. ಇತ್ಯಾದಿ, ಇತ್ಯಾದಿ ವಿವರ ತಿಳಿಯಲು ಸಿನಿಮಾ ನೋಡಬೇಕು.
ಬಾಂಬೆ ಮಿಠಾಯಿ, ಡಬ್ಬಲ್ ಇಂಜಿನ್ ನಿರ್ದೇಶನ ಮಾಡಿರುವ ಚಂದ್ರಮೋಹನ್ ಈ ಬಾರಿಯೂ ಕಾಮಿಡಿಯನ್ನು ತೆಗೆದುಕೊಂಡು ಯಶಸ್ವಿಯಾಗಿದ್ದಾರೆ. ತಾಳಿಕಟ್ಟಿದ ನಂತರ ಏನೆಲ್ಲಾ ಪೀಕಲಾಟಗಳಿಗೆ ಸಿಲುಕಿದ, ಅದರಿಂದಾಗಿ ಎಂತಹ ಕಷ್ಟಗಳನ್ನು ಏದುರಿಸಬೇಕಾಗಿ ಬಂತು ಎನ್ನುವುದನ್ನು ಭರಪೂರ ಹಾಸ್ಯದ ಮೂಲಕ ತೋರಿಸಲಾಗಿದೆ. ನಾಯಕ ನೀನಾಸಂ ಸತೀಶ್ ಅವರಿಗೆ ಕಾಮಿಡಿ ಪಾತ್ರ ಹೊಸದೇನಲ್ಲ. ರಾಮು ಪಾತ್ರಧಾರಿಯಾಗಿ ಸುಲಲಿತವಾಗಿ ಅಭಿನಯಿಸಿರುವುದು ತೆರೆ ಮೇಲೆ ಕಾಣಿಸುತ್ತದೆ. ನಾಯಕಿ ಅದಿತಿಪ್ರಭುದೇವ ಬಿಂದಾಸ್ ಆಗಿ ನಟಿಸಿ, ಹಾಡಿಗೆ ಜಬರ್‌ದಸ್ತ್ ಹೆಜ್ಜೆ ಹಾಕಿದ್ದಾರೆ. ಗೆಳಯರುಗಳಾಗಿ ಶಿವರಾಜ್.ಕೆ.ಆರ್.ಪೇಟೆ, ಅಶೋಕ್, ಸೈಕಲಾಜಿ ವೈದ್ಯರಾಗಿ ದತ್ತಣ್ಣ, ಅಚ್ಯುತಕುಮಾರ್ ನಗಿಸಿದರೆ, ಪದ್ಮಜರಾವ್ ಮುಗ್ದ ಅಮ್ಮನಾಗಿ ಇಷ್ಟವಾಗುತ್ತಾರೆ. ಪಾತ್ರಧಾರಿಗಳಿಗೆ ನಗು ತರಿಸದೆ, ನೋಡುಗರಿಗೆ ಬಾಯಿ ತೆರೆಯುವಂತೆ ಮಾಡುತ್ತದೆ. ಮೂರು ಹಾಡುಗಳಿಗೆ ಧರ್ಮವಿಶ್ ಸಂಗೀತದಲ್ಲಿ ಚೇತನ್‌ಕುಮಾರ್ ಸಾಹಿತ್ಯದ ‘ಹಿಡಿಕೋ ತಡ್‌ಕೋ’ ಡ್ಯುಯೆಟ್ ಗೀತೆಯು ಕೇಳಲು ನೋಡಲು ಹಿತ ಕೊಡುತ್ತದೆ. ಕಾಶಿನಾಥ್ ಚಿತ್ರಗಳ ಪ್ರೇರಣೆಯಿಂದ ಕತೆ ಬರೆದು ನಿರ್ಮಾಣ ಮಾಡಿರುವ ಉದಯ್.ಕೆ.ಮಹ್ತಾ ಪ್ರೇಕ್ಷಕರಿಗೆ ಸಾಂಸರಿಕ ಸಿನಿಮಾ ಕೊಟ್ಟಿದ್ದಾರೆ ಎನ್ನಬಹುದು.
***೧/೨