ರಾಜತಂತ್ರ: ದೇಶಾಭಿಮಾನದ ಮಂತ್ರ
ಚಿತ್ರ: ರಾಜ ತಂತ್ರ
ತಾರಾಗಣ: ರಾಘವೇಂದ್ರ ರಾಜ್ ಕುಮಾರ್
ನಿರ್ದೇಶನ: ಪಿವಿಆರ್ ಸ್ವಾಮಿ
ನಿರ್ಮಾಣ: ವಿಶ್ವಂ ಡಿಜಿಟಲ್ ಮೀಡಿಯಾ ಪ್ರೈ. ಲಿಮಿಟೆಡ್
ರಾಘವೇಂದ್ರ ರಾಜ್ ಕುಮಾರ್ ಅವರು ವಿಭಿನ್ನ ಪಾತ್ರದಲ್ಲಿ ನಾಯಕರಾಗಿ ಕಾಣಿಸಿಕೊಂಡಿರುವ ಚಿತ್ರ ರಾಜತಂತ್ರ. ಈ ಸಿನಿಮಾದಲ್ಲಿ ಪ್ರಸ್ತುತ ಕಾಲಘಟ್ಟದ ಸಮಸ್ಯೆಗಳಾದ ಡ್ರಗ್ಸ್ ದಂಧೆ ಮತ್ತುಅದಕ್ಕೆ ಕುಮ್ಮಕ್ಕು ನೀಡುವ ರಾಜಕೀಯ ವ್ಯವಸ್ಥೆಯನ್ನು ಬಯಲುಗೊಳಿಸಲಾಗಿದೆ.
`ರಾಜತಂತ್ರ’ ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ಅವರದ್ದು ನಿವೃತ್ತ ಸೈನಿಕ ರಾಜಾರಾಮ್ ಪಾತ್ರ. ಯುದ್ಧದಲ್ಲಿ ಗಾಯಗೊಂಡು ವಿಶ್ರಾಂತಿಯಲ್ಲಿರುವ ಈ ನಿವೃತ್ತ ಕ್ಯಾಪ್ಟನ್ ದೇಶ ಸೇವೆಗೆ ವಿರಾಮ ನೀಡುವುದೇ ಇಲ್ಲ. ಹಾಗಾಗಿಯೇ ದೇಶದೊಳಗಿನ ಅಪರಾಧಗಳನ್ನು ತಡೆಯುವ ಪ್ರಯತ್ನ ಮಾಡುತ್ತಿರುತ್ತಾನೆ. ಈ ಸಂದರ್ಭದಲ್ಲಿ ತನ್ನ ಮನೆಯಲ್ಲಿ ಕೆಲಸ ಮಾಡುವ ಮಹಿಳೆಯ ಮಗನೇ ಡ್ರಗ್ಸ್ ದಂಧೆಯಲ್ಲಿ ತೊಡಗಿಕೊಂಡಿದ್ದಾನೆ ಎನ್ನುವ ಸತ್ಯ ಆತನಿಗೆ ಅರಿವಾಗುತ್ತದೆ. ಆಗ ಕ್ಯಾಪ್ಟನ್ ರಾಜಾರಾಮ್ ಕೈಗೊಳ್ಳುವ ಕ್ರಮ ಏನು? ಆ ದಂಧೆ ಮನೆಕೆಲಸದ ಮಹಿಳೆಯ ಮನೆಯ ತನಕ ತಲುಪಿದ್ದು ಹೇಗೆ? ಅದರ ಮೂಲ ಬೇರು ಎಲ್ಲಿದೆ ಎನ್ನುವುದನ್ನು ಹುಡುಕುತ್ತಾ ಸಾಗುವಾಗ ಸಿಗುವ ಕತೆಯೇ ರಾಜತಂತ್ರ.
ಚಿತ್ರರಂಗದಲ್ಲಿ `ಅಮ್ಮನ ಮನೆ’ ಚಿತ್ರದ ಮೂಲಕ ಎರಡನೇ ಇನ್ನಿಂಗ್ಸ್ ಶುರು ಮಾಡಿರುವ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ದೊರಕಿರುವ ಅದ್ಭುತವಾದ ಪಾತ್ರ ಇದು. ಕತೆಗಾರ ಮಲ್ಲಿಕಾರ್ಜುನ್ ಅವರು ರಾಘಣ್ಣನಿಗೆಂದೇ ಹೆಣೆದ ಕತೆ ಇದು ಎನ್ನಬಹುದು. ಹಾಗಾಗಿ ಪ್ರತಿಯೊಂದು ದೃಶ್ಯದಲ್ಲಿಯೂ ರಾಘವೇಂದ್ರ ರಾಜ್ ಕುಮಾರ್ ಮತ್ತು ರಾಜ್ ಕುಮಾರ್ ಅಭಿಮಾನಿಗಳು ಮೆಚ್ಚುವ ರೀತಿಯಲ್ಲೇ ಚಿತ್ರ ಸಾಗುತ್ತದೆ. ಸೈನಿಕರ ಮೇಲೆ ಇರುವ ಅಭಿಮಾನದಿಂದ ರಾಘಣ್ಣನ ಮನೆಯಲ್ಲಿ ಕೆಲಸಕ್ಕೆ ಸೇರಿಕೊಳ್ಳುವ ಮಹಿಳೆಯಾಗಿ ಹಿರಿಯ ನಟಿ ಭವ್ಯಾ ನಟಿಸಿದ್ದಾರೆ. ಅವರಿಗೆ ದೊಡ್ಡ ಅವಕಾಶಗಳೇನೂ ಇಲ್ಲ. ಆದರೆ ಸಿಕ್ಕ ಪಾತ್ರದಲ್ಲಿ ಆತ್ಮೀಯವಾಗುವಂತೆ ನಟಿಸಿದ್ದಾರೆ. ದೊಡ್ಡಣ್ಣ ನಟಿಸಿರುವ ರಾಜಕಾರಣಿಯ ಪಾತ್ರ ಚಿತ್ರದ ಮತ್ತೊಂದು ಹೈಲೈಟ್. ಉಳಿದಂತೆ ನೀನಾಸಂ ಅಶ್ವಥ್, ಶಂಕರ್ ಅಶ್ವಥ್ ಮೊದಲಾದವರು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಎರಡೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಶ್ರೀನಿವಾಸ ಮೂರ್ತಿ ನೆನಪಲ್ಲಿ ಉಳಿಯುತ್ತಾರೆ.
ಪಿವಿ ಆರ್ ಸ್ವಾಮಿಯವರಿಗೆ ಇದು ಮೊದಲ ನಿರ್ದೇಶನದ ಚಿತ್ರ. ಆದರೆ ಛಾಯಾಗ್ರಾಹಕರಾಗಿ ಅವರಿಗೆ ಇರುವ ಅನುಭವ ಇದು ಚೊಚ್ಚಲ ಚಿತ್ರವೆನ್ನುವ ಭಾವನೆ ಮೂಡಿಸುವುದೇ ಇಲ್ಲ. ಹಾಗಾಗಿಯೇ ಸಿನಿಮಾ ನೋಡಿಸಿಕೊಂಡು ಹೋಗುತ್ತದೆ. ಹೊಡೆದಾಟದ ಸನ್ನಿವೇಶಗಳನ್ನು ಆಕರ್ಷಕವಾಗಿ ತೆಗೆಯಲಾಗಿದೆ. ಯುವಜನತೆ ದೇಶದ ಬಗ್ಗೆ ನೀಡಬೇಕಾದ ಕಾಳಜಿ, ಸೈನಿಕ ಮತ್ತು ರೈತರ ಕುರಿತಾದ ಅಭಿಮಾನ ಹೇಗಿರಬೇಕು ಎನ್ನುವುದನ್ನು ತೋರಿಸಿರುವಂಥ ಸಿನಿಮಾ ಇದು. ಸನ್ನಿವೇಶವೊಂದರಲ್ಲಿ ರಾಜ್ ಕುಮಾರ್ ಅವರ ಸಿನಿಮಾದ ಒಂದು ದೃಶ್ಯವೂ ಮಿಂಚಿ ಮರೆಯಾಗುತ್ತದೆ. ಒಟ್ಟಿನಲ್ಲಿ ಡಾ.ರಾಜ್ ಕುಮಾರ್ ಅಭಿಮಾನಿಗಳು ನೋಡಲೇಬೇಕಾದ ಸಿನಿಮಾ ಇದು.