Ondu Ganteya Kathe.Film Review

Friday, March 19, 2021

893

 

ಒಂದು ಗಂಟೆಯ ಸುತ್ತ ಎರಡು ಗಂಟೆಯ ಹಾಸ್ಯ!

 

ಚಿತ್ರ: ಒಂದು ಗಂಟೆಯ ಕತೆ

ತಾರಾಗಣ: ಅಜಯ್ ರಾಜ್, ಶನಯಾ ಕತ್ವೆ

ನಿರ್ದೇಶನ: ದ್ವಾರ್ಕಿ ರಾಘವ

ನಿರ್ಮಾಣ: ಕಶ್ಯಪ್ ದಕೋಜು

 

 

ಒಂದು ಗಂಟೆಯ ಕತೆ ಎನ್ನುವ ಹೆಸರು ಕೇಳಿದರೆ ಬಹುಶಃ ಈ ಚಿತ್ರ ಒಂದೇ ಗಂಟೆಯಲ್ಲಿ ಮುಗಿದು ಹೋಗುವುದೇನೋ ಎಂದು ಅನಿಸುವುದು ಸಹಜ. ಆದರೆ ಚಿತ್ರದ ಟ್ರೇಲರ್ ನೋಡಿದವರು, ಪೋಸ್ಟರ್ ಗಮನಿಸಿದವರಿಗೆ ಇದೊಂದು ವಯಸ್ಕರ ಚಿತ್ರ ಎನ್ನುವ ಅರಿವು ಇರುತ್ತದೆ. ಹಾಗಾಗಿ ಗಂಟೆಯ ನಂಟು ಸೊಂಟದ ಕೆಳಗಿನವರೆಗೂ ಸಾಗುವ ಬಗ್ಗೆ ಚಿತ್ರ ವಿವರವಾಗಿಯೇ ತೋರಿಸಿದೆ.

 

ಮದುವೆಯ ಮಾತು ನೀಡಿ, ಮೈ ಸುಖ ಪಡೆದು ಬಳಿಕ ಕೈ ಕೊಟ್ಟು ಪಾರಾಗುವುದು ಯುವಜನತೆಯಲ್ಲಿ ಸಾಮಾನ್ಯ ಎನ್ನುವ ಮಟ್ಟಿಗೆ ಹೆಚ್ಚಾಗುತ್ತಿದೆ. ಅದರಲ್ಲಿಯೂ ನಗರದ ಹುಡುಗರು ಇದನ್ನು ಲಿವಿಂಗ್ ಟುಗೆದರ್ ಹೆಸರಲ್ಲಿ ಮಜಾ ಮಾಡುತ್ತಿದ್ದಾರೆ. ಅಂಥ ಹುಡುಗರಿಗೆ ಹುಡುಗಿಯೊಬ್ಬಳು ಎಚ್ಚರಿಕೆ ನೀಡಿದಂಥ ಒಂದು ನೈಜ ಘಟನೆಯನ್ನು ಆಧಾರವಾಗಿಸಿ ಈ ಚಿತ್ರ ಮಾಡಿರುವುದಾಗಿ ನಿರ್ದೇಶಕರು ತಿಳಿಸಿದ್ದರು. ಒಂದು ದಿನದಲ್ಲಿ ನಡೆಯುವ ಈ ಘಟನೆಯನ್ನು ವಯಸ್ಕರೆಲ್ಲ ತಮ್ಮ ಮನಸಿಗೆ ತೋಚಿದ ರೀತಿಯಲ್ಲಿ ಎಂಜಾಯ್ ಮಾಡುವಂತೆ ಚಿತ್ರ ತಯಾರು ಮಾಡಲಾಗಿದೆ.

ಚಿತ್ರದಲ್ಲಿ ಅಜಯ್ ರಾಜ್ ಅವರನ್ನು ನಾಯಕ ಎನ್ನುವುದಕ್ಕಿಂತ ಕೇಂದ್ರ ಪಾತ್ರಧಾರಿ ಎನ್ನುವುದೇ ಸೂಕ್ತ. ಯಾಕೆಂದರೆ ಇದು ಅವರ ಪಾತ್ರದ ಗಂಟೆಯ ಸುತ್ತಲೂ ಗಿರಕಿ ಹೊಡೆಯುವ ಕತೆ. ಯಾವ ಬಾಲಿವುಡ್ ನಟನಿಗೂ ಕಡಿಮೆ ಇರದ ಮೈಕಟ್ಟು, ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ ಅಜಯ್. ಅವರಿಗೆ ನೀಡಲಾದ ಸಂಭಾಷಣೆಗಳು ಮತ್ತು ಅವುಗಳನ್ನು ಅವರು ಉಚ್ಚರಿಸಿರುವ ರೀತಿ ಎಲ್ಲವೂ ಮನರಂಜನಾತ್ಮಕವಾಗಿದೆ. ಚಿತ್ರದ ನಾಯಕಿಯಾಗಿ, ಮೋಸ ಹೋಗಿ ಪ್ರತಿಕಾರ ನಡೆಸುವ ಯುವತಿಯಾಗಿ ಶನಯಾ ಕತ್ವೆ ನಟನೆ ಅಮೋಘ. ಆರಂಭದ ದೃಶ್ಯಗಳಲ್ಲಿ ಶನಯಾಗಿಂತ ಮತ್ತೋರ್ವ ನಟಿ ಸ್ವಾತಿ ಶರ್ಮಾ ಅವರು ಆಕರ್ಷಕವಾಗಿ ಕಾಣುತ್ತಾರೆ. ಆದರೆ ಶನಯಾ ಅವರ ಪಾತ್ರದ ವ್ಯಾಪ್ತಿ ವಿರಹ, ಕಾಳಜಿ, ಆತಂಕಗಳನ್ನು ದಾಟಿ ಪ್ರತೀಕಾರ ಮತ್ತು ಸಂತೃಪ್ತಿ, ಸಮಾಧಾನಗಳಲ್ಲಿ ವೈವಿಧ್ಯತೆ ಮೂಡಿಸುವಾಗ ಇಷ್ಟವಾಗುತ್ತಾರೆ. ಕಾನೂನನ್ನು ಕೈಗೆ ತೆಗೆದುಕೊಳ್ಳುವ ನಿಷ್ಕರುಣಿಯ ಪಾತ್ರವಾದರೂ ಪ್ರೇಕ್ಷಕರು ಆಕೆಯ ಪರವಾಗಿ ನಿಲ್ಲುವಂತೆ ಮಾಡುವ ಶಕ್ತಿ ಆ ಪಾತ್ರಕ್ಕೆ ಇದೆ.

 

ಕಳೆದು ಹೋದ ಗಂಟೆಯ ಭವಿಷ್ಯವನ್ನು ಕೈಯ್ಯಲ್ಲಿರಿಸಿಕೊಂಡು ಚಿತ್ರದುದ್ದಕ್ಕೂ ಪ್ರೇಕ್ಷಕರನ್ನು ನಗಿಸುವ ವೈದ್ಯರಾಗಿ ಪ್ರಕಾಶ್ ತೂಮಿನಾಡ್ ನಟಿಸಿದ್ದಾರೆ. ಅಜಯ್ ರಾಜ್ ಅವರ ತಾಯಿಯಾಗಿ ಚಂದ್ರಕಲಾ ಮೋಹನ್ ನಟಿಸಿದ್ದಾರೆ. ತಂದೆಯಾಗಿ ಪಾಪ ಪಾಂಡು ಖ್ಯಾತಿಯ ಚಿದಾನಂದ್ ಅವರು ಮಗನ ತಪ್ಪುಗಳಿಗೆ ತಾವು ಕೂಡ ಕಾರಣ ಎನ್ನುವಂಥ ಪಾತ್ರವನ್ನು ನಿಭಾಯಿಸಿದ್ದಾರೆ. ಆ ಭಾವವನ್ನು ತಮಾಷೆಯಾಗಿಯೇ ದಾಟಿಸಿರುವುದು ನಿರ್ದೇಶಕರ ಜಾಣ್ಮೆಗೆ ಉದಾಹರಣೆ. ಅಜಯ್ ರಾಜ್ ಸಹೋದರನಾಗಿ ಮತ್ತು ಇನ್ನೊಂದು ಪಾತ್ರದಲ್ಲಿ ಸಿಲ್ಲಿಲಲ್ಲಿ ಆನಂದ್ ಅವರ ಅಭಿನಯ ಆಕರ್ಷಕ. ಪ್ರಶಾಂತ್ ಸಿದ್ಧಿ, ಎಂ.ಎನ್ ಲಕ್ಷ್ಮೀದೇವಿ ಅವರ ಪಾತ್ರಗಳು ಕೂಡ ನಗಿಸುವಲ್ಲಿ ಯಶಸ್ವಿಯಾಗುತ್ತವೆ.

ಸೂರ್ಯಕಾಂತ್ ಅವರ ಛಾಯಾಗ್ರಹಣ ತುಂಬ ಚೆನ್ನಾಗಿ ಮೂಡಿ ಬಂದಿದೆ. ಸಾಮಾನ್ಯವಾಗಿ ಸಿನಿಮಾಗಳ ಸಂದೇಶ ಯಾರಿಗೆ ತಲುಪಬೇಕಾಗಿದೆಯೋ ಅವರು ಸಿನಿಮಾ ನೋಡದಿರುವ ಸಾಧ್ಯತೆ ಅಧಿಕವಾಗಿರುತ್ತದೆ. ಆದರೆ ಇದೊಂದು ವಯಸ್ಕರ  ಚಿತ್ರವಾಗಿರುವ ಕಾರಣ ಸರಿಯಾದ ಕಡೆಗೆ ತಲುಪಲಿರುವುದರಲ್ಲಿ ಸಂದೇಹವಿಲ್ಲ.

Copyright@2018 Chitralahari | All Rights Reserved. Photo Journalist K.S. Mokshendra,