`ಆಕ್ಟ್1978'ನಲ್ಲಿದೆ ಕಲಾವಿದರ ಅದ್ಭುತವಾದ ಆಕ್ಟಿಂಗ್..!
ಚಿತ್ರ ವಿಮರ್ಶೆ
ಚಿತ್ರ: ಆಕ್ಟ್1978
ತಾರಾಗಣ: ಯಜ್ಞಾ ಶೆಟ್ಟಿ, ಶ್ರುತಿ, ಸಂಚಾರಿ ವಿಜಯ್
ನಿರ್ದೇಶನ: ಮಂಸೋರೆ
ನಿರ್ಮಾಣ: ದೇವರಾಜ್ ಆರ್
ಹೊಸ ಸಿನಿಮಾ ಬಿಡುಗಡೆಗೆ ದೇಶವೇ ಭಯಪಡುತ್ತಿದೆ. ಇಂಥ ಸಂದರ್ಭದಲ್ಲಿ ಕರ್ನಾಟಕದಲ್ಲಿ ಧೈರ್ಯದಿಂದ ಮುನ್ನುಗ್ಗಿದ ಚಿತ್ರತಂಡ Act 1978. ಚಿತ್ರತಂಡ ಈ ವಿಚಾರದಲ್ಲಿ ತೋರಿಸಿದ ಧೈರ್ಯದಂತೆಯೇ ಚಿತ್ರದೊಳಗಿನ ಕತೆಯೂ ಕೂಡ ಸಾಮಾನ್ಯರಲ್ಲಿ ಅಷ್ಟೇ ಧೈರ್ಯ ತುಂಬಬೇಕಾದ ವಿಚಾರಗಳನ್ನು ಹೊರಗೆ ತಂದಿದೆ.
ಸರ್ಕಾರಿ ಕಚೇರಿಯೊಂದು ಸಾಮಾನ್ಯರನ್ನು ಯಾವ ಮಟ್ಟಕ್ಕೆ ಕಾಡುತ್ತದೆ ಎನ್ನುವುದನ್ನು ಈ ಸಿನಿಮಾ ಎಳೆ ಎಳೆಯಾಗಿ ಬಿಡಿಸಿ ಹೇಳುತ್ತದೆ. ಗೀತಾ ಎಂಬ ಗರ್ಭಿಣಿ ವಿಧವೆ ತನ್ನ ಸರಕಾರಿ ತನ್ನ ತಂದೆಯ ಸಾವಿನಿಂದ ಸಿಗಬೇಕಾದ ಸರ್ಕಾರಿ ಪರಿಹಾರವನ್ನು ಪಡೆಯಲು ಕಚೇರಿಗೆ ಹೋಗುತ್ತಾಳೆ. ನಿರಂತರವಾದ ಭೇಟಿಯಲ್ಲಿ ಆಕೆಗೆ ಅಧಿಕಾರ ಶಾಹಿಗಳ ಭ್ರಷ್ಟಾಚಾರ ಎಷ್ಟು ಕ್ರೂರವಾಗಿದೆ ಎನ್ನುವುದು ಅರಿವಾಗುತ್ತದೆ. ಅದಕ್ಕಾಗಿ ಆಕೆ ತೆಗೆದುಕೊಳ್ಳಬಯಸುವ ಪ್ರತಿಕಾರದ ಕತೆಯನ್ನೇ ಚಿತ್ರ ಹೇಳುತ್ತದೆ.
ಸರ್ಕಾರಿ ಕಚೇರಿಯಲ್ಲಿನ ಭ್ರಷ್ಟಾಚಾರವನ್ನು ಹೇಳುತ್ತಲೇ ಸಾಕಷ್ಟು ಥ್ರಿಲ್ಲಿಂಗ್ ಸಂದರ್ಭವನ್ನು ಸೃಷ್ಟಿಸಿರುವ ಚಿತ್ರ ಇದು. ಆದರೆ ಹಾಗಿದ್ದರೂ ಸಾಮಾನ್ಯರ ಬದುಕಿಗೆ ಹೊಂದಿಕೊಂಡಂತೆ ಕತೆ ಸಾಗುವುದು ಚಿತ್ರದ ವಿಶೇಷ. ನಿರ್ದೇಶಕ ಮಂಸೋರೆ ಎಂದರೆ ಹರಿವು, ನಾತಿ ಚರಾಮಿ ಮೊದಲಾದ ರಾಷ್ಟ್ರಮಟ್ಟದ ಚಿತ್ರಗಳನ್ನು ನೀಡಿದವರು ಎನ್ನುವುದು ಎಲ್ಲರಿಗೂ ಗೊತ್ತು. ಹಾಗಾಗಿ ಈ ಚಿತ್ರದ ಬಗ್ಗೆಯೂ ಸಹಜವಾದ ನಿರೀಕ್ಷೆಗಳಿವೆ. ಆ ನಿರೀಕ್ಷೆಗಳನ್ನು ಪೂರೈಸುವ ಮಟ್ಟದಲ್ಲಿ ಸಿನಿಮಾ ಕೂಡ ಇದೆ ಎಂದು ಧೈರ್ಯದಿಂದ ಹೇಳಬಹುದು. ಇದು ಪ್ರಶಸ್ತಿಯನ್ನು ಮಾತ್ರ ಪಡೆಯುವಂಥ ಚಿತ್ರವಲ್ಲ, ಜೊತೆಗೆ ಚಿತ್ರಮಂದಿರದಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣಬಲ್ಲ ಸಿನಿಮಾ. ಬಹುಶಃ ಆ ಧೈರ್ಯದಿಂದಲೇ ಚಿತ್ರತಂಡ ಇಂಥ ಪರಿಸ್ಥಿತಿಯಲ್ಲಿಯೂ ಸಿನಿಮಾವನ್ನು ಬಿಡುಗಡೆ ಮಾಡುವ ಧೈರ್ಯ ತೋರಿಸಿದೆ ಎನ್ನಬಹುದು.
ಸಾಮಾನ್ಯ ಹೆಣ್ಣೊಬ್ಬಳು ರೊಚ್ಚಿಗೆದ್ದರೆ ಹೇಗಿರುತ್ತದೆ ಎನ್ನುವುದನ್ನು ಚಿತ್ರದ ನಾಯಕಿ ಯಜ್ಞಾಶೆಟ್ಟಿಯವರು ತಮ್ಮ ನಟನೆಯ ಮೂಲಕ ತೋರಿಸಿಕೊಟ್ಟಿದ್ದಾರೆ. ಚಿತ್ರದಲ್ಲಿ ನಾಯಕ ಎನ್ನುವ ಪಾತ್ರ ಇಲ್ಲವಾದರೂ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ಚಿತ್ರದ ಮತ್ತೊಂದು ಪ್ರಮುಖ ಭಾಗವಾಗಿದ್ದಾರೆ. ಕ್ಲೈಮ್ಯಾಕ್ಸ್ ಸಂದರ್ಭದಲ್ಲಿ ಪ್ರವೇಶಿಸುವ ಸಂಚಾರಿ ವಿಜಯ್ ಅವರದು ಕೂಡ ಪ್ರಮುಖ ಪಾತ್ರ. ಉಳಿದಂತೆ ಕನ್ನಡ ಚಿತ್ರರಂಗದ ಪ್ರಮುಖ ಕಲಾವಿದರಾದ ಶ್ರುತಿ, ಅವಿನಾಶ್, ಅಚ್ಯುತ್ ಕುಮಾರ್, ದತ್ತಣ್ಣ, ಬಲರಾಜ್ ವಾಡಿ, ಅಶ್ವಿನ್ ಹಾಸನ್, ಶೋಭರಾಜ್ ಹೀಗೆ ಹಲವಾರು ಕಲಾವಿದರು ತುಂಬಿಕೊಂಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಚಿತ್ರದುದ್ದಕ್ಕೂ ಮೌನವಾಗಿಯೇ ಇದ್ದುಕೊಂಡು ಕೊನೆಯಲ್ಲಿ ಮಾತನಾಡುವ ಬಿ ಸುರೇಶ್ ಅವರ ಪಾತ್ರವೂ ಕಾಡುತ್ತದೆ. ಸಿನಿಮಾದಲ್ಲಿ ಬರುವ ಎಲ್ಲ ಪಾತ್ರಗಳು ಕೂಡ ಒಂದಲ್ಲ ಒಂದು ಕಡೆ ಗುರುತಿಲ್ಪಡುವುದು ಮತ್ತು ಪ್ರೇಕ್ಷಕರ ನೆನಪಲ್ಲಿ ಉಳಿಯುವುದು ವಿಶೇಷ. ಹಾಗಾಗಿ ಈ ವರ್ಷದಲ್ಲಿ ಬಿಡುಗಡೆಯಾದ ಬೆರಳೆಣಿಕೆಯ ಚಿತ್ರಗಳಲ್ಲಿ ಇದು ದೊಡ್ಡ ಮಟ್ಟದ ಸ್ಥಾನ ಪಡೆಯಲಿರುವುದು ಖಂಡಿತ.