Naanonthara.Film Review.

Friday, December 18, 2020

1010

ನಾನೊಂಥರ: ಇದೊಂಥರಾ ವಿಭಿನ್ನ ಸಿನಿಮಾ

 

ಚಿತ್ರ: ನಾನೊಂಥರ

ತಾರಾಗಣ: ತಾರಕ್, ರಕ್ಷಿಕಾ, ದೇವರಾಜ್

ನಿರ್ದೇಶನ: ಯು ರಮೇಶ್ 

ನಿರ್ಮಾಣ: ಡಾ. ಜಾಕ್ಲಿನ್ ಫ್ರಾನ್ಸಿಸ್

 

ತಾಯಿ ಪ್ರೀತಿ ಸಿಗದ ಮಗನೊಬ್ಬ ತಂದೆಯ ಮುದ್ದಿನಿಂದ ಬೆಳೆದು ಸಮಾಜಕ್ಕೆ ಹೇಗೆ ಸವಾಲು ಹಾಕುತ್ತಾನೆ ಎನ್ನುವುದು ಚಿತ್ರದ ಒನ್ ಲೈನ್ ಕತೆ. ಆದರೆ ಆತನ ಸವಾಲುಗಳು ಆತನದೊಬ್ಬನದೇ ಅಲ್ಲ; ಪ್ರಸ್ತುತ ಸಮಾಜದಲ್ಲಿ ಎಲ್ಲರಿಗೂ ಎದುರಿಸಬೇಕಾದ ಸಮಸ್ಯೆಗಳಾಗಿರುತ್ತವೆ. ಅವುಗಳ ಬಗ್ಗೆ ಎಚ್ಚರಿಸುವ ನಾಯಕ ಒಬ್ಬ ಕುಡುಕ ಆಗಿರುತ್ತಾನೆ ಎನ್ನುವುದೇ ವಿಶೇಷ. ಆತ ಯಾಕೆ ಕುಡುಕನಾದ? ಮತ್ತು ಯಾವ ರೀತಿ ಬದಲಾಗುತ್ತಾನೆ ಎನ್ನುವುದೇ ಚಿತ್ರದ ಸಾರ.

 

ಸಿನಿಮಾದ ಆರಂಭವೇ ಬಾರ್ ಒಂದರಿಂದ ಶುರುವಾಗುತ್ತದೆ. ಅಲ್ಲಿ ಚಿತ್ರದ ನಾಯಕ ತಾರಕ್ ಕುಡಿಯುತ್ತಿರುತ್ತಾನೆ. ಆತ ನಿತ್ಯ ಬಾರ್‌ಗೆ ಬರುತ್ತಿರುತ್ತಾನೆ ಎನ್ನುವುದು ಸಂಭಾಷಣೆಗಳಿಂದ ಸಾಬೀತಾಗುತ್ತದೆ. ಪ್ರತಿ ಬಾರಿ ಎಣ್ಣೆ ಹೊಡೆದಾಗಲೂ ಆತ ಏನಾದರೊಂದು ಸಹಾಯ ಮಾಡುವ ಗುಣ ಹೊಂದಿರುತ್ತಾನೆ. ಒಮ್ಮೆ ಸಾಂಸಾರಿಕ ನೆಮ್ಮದಿಗೆ ಸಲಹೆ ನೀಡಿದರೆ ಮತ್ತೊಮ್ಮೆ ಪ್ರೇಮಿಗಳ ಪ್ರೀತಿಗೆ ಸಲಹೆ ನೀಡುತ್ತಾನೆ. ಮತ್ತೊಮ್ಮೆ ಪೊಲೀಸರಿಗೆ ಸಲಹೆ  ನೀಡಿದರೆ ಮಗದೊಮ್ಮೆ ವೈದ್ಯರಿಗೂ ಬುದ್ಧಿ ಹೇಳುತ್ತಾನೆ. ವಿಶೇಷ ಏನೆಂದರೆ ಈತನ ಸಲಹೆ ಒಮ್ಮೆಯೂ ಕುಡುಕನ ಮಾತಾಗಿ ಅನಿಸುವುದಿಲ್ಲ. ಅದಕ್ಕೆ ಕಾರಣ ತಾರಕ್ ಬಿಟ್ಟಿ ಸಲಹೆ ನೀಡಿ ಮುಂದ ಹೋಗುವವನಲ್ಲ. ತಾನೇ ಅವರಿಗೆ ಸಹಾಯಕ್ಕೆ ಮುಂದಾಗಿ, ಆ ಸಹಾಯ ಪೂರ್ತಿಯಾದ ಬಳಿಕ ಜವಾಬ್ದಾರಿಯುತವಾಗಿ ಆಡುವ ಮಾತುಗಳು ಅವು. ಹಾಗಾಗಿಯೇ ಆತನ ಮಾತುಗಳು ಹಲವರ ಮನ ಪರಿವರ್ತನೆಗೆ ಕಾರಣವಾಗುತ್ತವೆ. ಅಥವಾ ಒಂದು ಕ್ಷಣ ಆ ಬಗ್ಗೆ ಆಲೋಚಿಸುವಂತೆ ಮಾಡುತ್ತದೆ

ನಾಯಕನ ಸ್ಫೂರ್ತಿದಾಯಕವಾದ ಇಂಥ ಕೆಲಸಗಳನ್ನು ಮೆಚ್ಚಿದ ಯುವ ವೈದ್ಯೆಯೋರ್ವಳು ಆತನನ್ನು ಪ್ರೀತಿಸತೊಡಗುತ್ತಾಳೆ. ಅವಳ ಸನಿಹವೆಂದರೆ ತಾರಕ್‌ಗೂ ಇಷ್ಟವಾಗುತ್ತದೆ. ಆಕೆಯೊಂದಿಗೆ ಆಕೆ ಕರೆದೊಯ್ಯುವ ಅನಾಥೆ ಅಜ್ಜಿಯ ಬಳಿಗೂ ಹೋಗಿ ಸ್ನೇಹ ಸಂಪಾದಿಸುತ್ತಾನೆ. ಆದರೆ ಒಂದು ಹಂತದಲ್ಲಿ ಆಕೆಯೂ ತಾರಕ್‌ನನ್ನು ಅಪಾರ್ಥ ಮಾಡಿಕೊಂಡು ಬಿಡುತ್ತಾಳೆ. ಸಾಮಾನ್ಯವಾಗಿ ಬ್ರೇಕ್ ಅಪ್ ಆದಮೇಲೆ ಕುಡಿತದ ಚಟಕ್ಕೆ ಬೀಳುವ ನಾಯಕನನ್ನು ನೋಡಿರುತ್ತೇವೆ. ಆದರೆ ಮೊದಲೇ ಕುಡುಕನಾಗಿರುವ ನಾಯಕ ಆಕೆ ದೂರ ಮಾಡಿದಾಗ ಏನು ಮಾಡುತ್ತಾನೆ ಎನ್ನುವುದೇ ಚಿತ್ರದ ಪ್ರಮುಖ ಟ್ವಿಸ್ಟ್. ಇದರ ಜೊತೆಯಲ್ಲೇ ಫ್ಲ್ಯಾಷ್ ಬ್ಯಾಕ್ ಕತೆಯೂ ಸೇರಿದಂತೆ ಒಂದಷ್ಟು ಹೊಡೆದಾಟದ ಸನ್ನಿವೇಶಗಳು ಕೂಡ ಚಿತ್ರದಲ್ಲಿವೆ. ಹಾಗಾಗಿ ಸಿನಿಮಾ ಆಸಕ್ತಿಯಿಂದ ನೋಡಿಸಿಕೊಂಡು ಹೋಗುತ್ತದೆ.

 

ಮೊದಲ ಬಾರ್ ದೃಶ್ಯದಲ್ಲೇ ಒಂದು ಎಣ್ಣೆ ಹಾಡು ಕೂಡ ಇದೆ. ಸಂಗೀತ ನಿರ್ದೇಶಕ ಸಾಮ್ಯುಯೆಲ್ ಸಂಗೀತಕ್ಕೆ ತಾಳ ಹಾಕುವಂತೆ ಇದೆ. ಅಲ್ಲಿಂದಲೇ ದೃಶ್ಯ ಕಳೆಗಟ್ಟುತ್ತಾ ಹೋಗುತ್ತದೆ. ಚುರುಕಾದ ಸಂಭಾಷಣೆಗಳು ಚಿತ್ರದ ಮತ್ತೊಂದು ಆಕರ್ಷಕ ಅಂಶ. ಈ ಎಲ್ಲ ಪಾಸಿಟಿವ್ ಅಂಶಗಳನ್ನು ಬಳಸಿಕೊಂಡು ನಾಯಕ ತಾರಕ್ ತಾನು ಕನ್ನಡದ ಭರವಸೆಯ ನಾಯಕನಾಗಬಲ್ಲೆ ಎನ್ನುವ ಸೂಚನೆ ನೀಡಿದ್ದಾರೆ. ನಾಯಕನ ತಂದೆಯಾಗಿ ದೇವರಾಜ್ ಮತ್ತು ತಮ್ಮನಾಗಿ ಜೈಸನ್ ಗಮನಾರ್ಹ ಪಾತ್ರ  ನಿರ್ವಹಿಸಿದ್ದಾರೆ. ಚಿತ್ರದ ನಾಯಕಿಯಾಗಿ ರಕ್ಷಿಕಾ ವೈದ್ಯೆಯ ಪಾತ್ರದಲ್ಲಿ ಅರಳು ಕಂಗಳ ಮುದ್ದು ಬೆಡಗಿಯಾಗಿ ಮನ ಸೆಳೆಯುತ್ತಾರೆ. ನಿಜ ಜೀವನದಲ್ಲಿ ವೃತ್ತಿಪರ ವೈದ್ಯೆಯಾಗಿರುವ ಜಾಕ್ಲಿನ್ ಅವರು ಚರ್ಚ್ ನಲ್ಲಿ ಮದರ್ ಆಗಿ ಕಾಣಿಸಿಕೊಂಡು ಮಾತೃಹೃದಯಿಯಾಗಿ ಮನಸೂರೆ ಮಾಡುತ್ತಾರೆ. ಖಳ ನಾಯಕನ ಇಂಟ್ರಡಕ್ಷನ್‌ ವೇಳೆ ವಿನುಮನಸು ನೀಡಿರುವ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತದೆ. ಎಲ್ಲೋ ಒಂದಷ್ಟು ಕುಡಿತದ ಸನ್ನಿವೇಶಗಳಿಗೆ ಕಡಿವಾಣ ಹಾಕಬಹುದಿತ್ತು ಮತ್ತು ಛಾಯಾಗ್ರಹಣ ಇನ್ನಷ್ಟು ಸುಧಾರಿಸಬೇಕಿತ್ತು ಎನ್ನುವ ಅಂಶಗಳನ್ನು ಹೊರತು ಪಡಿಸಿದರೆ ಇದು ಸಂಸಾರ ಸಮೇತ ನೋಡಬಹುದಾದ ಒಂದು ವಿಭಿನ್ನ ಸಿನಿಮಾ ಎನ್ನಬಹುದು.

 

Copyright@2018 Chitralahari | All Rights Reserved. Photo Journalist K.S. Mokshendra,