ನಗುವಿನ ಬೆಳಕಲ್ಲಿ ಹೊಸಬಗೆ ಕಣ್ಣೋಟ..!
ಚಿತ್ರ: ಸಖತ್
ನಿರ್ದೇಶನ: ಸಿಂಪಲ್ ಸುನಿ
ನಿರ್ಮಾಣ: ಕೆವಿಎನ್ ಪ್ರೊಡಕ್ಷನ್ಸ್
ತಾರಾಗಣ: ಗಣೇಶ್, ನಿಶ್ವಿಕಾ ನಾಯ್ಡು, ಸುರಭಿ, ಸಾಧುಕೋಕಿಲ ಮೊದಲಾದವರು.
ಅಂಧನ ಕುರಿತಾದ ಚಿತ್ರವಾದರೂ ಚಿತ್ರ ನೋಡುವುದರ ನಡುವೆ ಒಂದು ಕ್ಷಣ ಕೂಡ ಮೈಮರೆಯದಷ್ಟು ಅಂದವಾಗಿದೆ ಸಿನಿಮಾ. ಎನ್ನುವಲ್ಲಿಗೆ ಸಖತ್ ಹೆಸರಿಗೆ ತಕ್ಕಂತೆ ಮನೋರಂಜನೆ ನೀಡಿದೆ ಎಂದು ಸಾಬೀತಾದ ಹಾಗಾಯಿತು. ಆದರೆ ಯಾವೆಲ್ಲ ಕಾರಣಕ್ಕೆ ಮನೋರಂಜನೀಯ ಚಿತ್ರ ಎನ್ನುವುದಕ್ಕೆ ಒಂದೆರಡು ಸ್ಯಾಂಪಲ್ ಮತ್ತು ಸೂಚನೆಯನ್ನಷ್ಟೇ ಇಲ್ಲಿ ನೀಡಬಹುದು. ಯಾಕೆಂದರೆ ಇದು ಚಿತ್ರ ಮಂದಿರದಲ್ಲಿ ನೋಡಬೇಕಾದ ಸಿನಿಮಾ.
ಚಿತ್ರದಲ್ಲಿ ಬಾಲು ಒಬ್ಬ ಅನಾಥ ಹುಡುಗ. ಆತ ಆರ್ಕೆಸ್ಟ್ರಾದಲ್ಲಿ ಅಂಧನಂತೆ ಅಭಿನಯಿಸಿ ಹಾಡುವ ಗಾಯಕ. ಆದರೆ ಬೆಂಗಳೂರಲ್ಲಿ ನಡೆಯುವ ರಿಯಾಲಿಟಿ ಶೋ ಒಂದರ ನಿರೂಪಕಿಯೊಬ್ಬಳ ಮೇಲೆ ವಿಪರೀತ ಪ್ರೇಮ. ಆದರೆ ರಿಯಾಲಿಟಿ ಶೋಗೆ ಆಯ್ಕೆಯಾಗಬೇಕಾದರೆ ಪ್ರತಿಭೆಗಿಂತ ದೈಹಿಕ ನ್ಯೂನತೆಯೂ ಮುಖ್ಯವಾಗುತ್ತದೆ ಎನ್ನುವುದನ್ನು ಮನಗಂಡು ದೃಷ್ಟಿಹೀನನಂತೆ ಸ್ಪರ್ಧೆಗೆ ಬರುತ್ತಾನೆ. ಹಾಗೆ ಸ್ಪರ್ಧೆಗೆ ಆಯ್ಕೆಯಾದ ಮೇಲೆ ನಡೆಯುವ ಘಟನೆಗಳೇ ಬೇರೆ. ಆ ಘಟನೆಗಳೇನು? ಬಾಲುವಿನ ಕಣ್ಮುಂದೆ ನಡೆಯುವ ಕೊಲೆ ಯಾರದು? ಅಂಧನಾಗಿದ್ದರೂ ಅದಕ್ಕೆ ಬಾಲು ಹೇಗೆ ಸಾಕ್ಷಿಯಾಗಿ ಪರಿಗಣಿಸಲ್ಪಡುತ್ತಾನೆ ಎನ್ನುವ ರೋಮಾಂಚಕಾರಿ ಘಟನೆಗಳನ್ನು ಪರದೆಯ ಮೇಲೆ ನೋಡುವುದೇ ಸೊಗಸು.
ಬಾಲುವಾಗಿ ಗಣೇಶ್ ಎಂದಿನಂತೆ ಮನರಂಜನೆಗೆ ಮೀಸಲು. ಜೊತೆಗೆ ಅಂಧನಾಗಿ ಬರುವ ಒಂದೆರಡು ಪ್ರಮುಖ ದೃಶ್ಯಗಳು ಪ್ರೇಕ್ಷಕರ ಮನಸು ಕರಗಿಸುವಂತೆ ನಟಿಸಿದ್ದಾರೆ. ಹಾಡುಗಳಲ್ಲಿ ಕೂಡ ಎಂದಿನ ಗಣೇಶ್ ಟಚ್ ಎದ್ದು ಕಾಣುತ್ತವೆ. ಸುನಿ ನಿರ್ದೇಶನದ ಸಿನಿಮಾ ಎಂದಮೇಲೆ ಸಂಭಾಷಣೆಯಲ್ಲಿನ ಆಕರ್ಷಣೆಗೆ ಕೊರತೆಯೇ ಇಲ್ಲ. ಅದೇ ಸಂದರ್ಭದಲ್ಲಿ ಭಾವನಾತ್ಮಕ ವಿಚಾರಗಳನ್ನು ಕೂಡ ಮಾತುಗಳ ಮೂಲಕ ತಲುಪಿಸುವಲ್ಲಿ ಸುನಿಯ ಲೇಖನಿ ಯಶಸ್ವಿಯಾಗಿದೆ. ರಿಯಾಲಿಟಿ ಶೋ ನಿರ್ದೇಶಕನಾಗಿ ಗಿರೀಶ್ ಶಿವಣ್ಣ ಮತ್ತು ವಕೀಲರಾಗಿ ರಂಗಾಯಣ ರಘು ನೀಡಿದ ಅಭಿನಯ ಆಕರ್ಷಕ. ಉಳಿದಂತೆ ಕುರಿ ಪ್ರತಾಪ್ ಮತ್ತು ಧರ್ಮಣ್ಣ ಮೊದಲಾದ ಕಲಾವಿದರು ಇದ್ದರೂ ಅವರನ್ನು ಮೀರಿಸುವ ಹಾಸ್ಯವನ್ನು ನಾಯಕನಿಂದಲೇ ತೆಗೆಸಿರುವುದು ವಿಶೇಷ.
ಚಿತ್ರದಲ್ಲಿ ಇಬ್ಬರು ನಾಯಕಿಯರು. ನವನಟಿ ಸುರಭಿ ನೀಡಿರುವ ನಟನೆ ಪಾತ್ರಕ್ಕೆ ತಕ್ಕಂತೆ ಇದೆ. ನಿಶ್ವಿಕಾ ನಾಯ್ಡು ಅಂಧೆಯ ಪಾತ್ರಕ್ಕೆ ಅಂದ ತಂದುಕೊಟ್ಟಿದ್ದಾರೆ ಎಂದರೆ ತಪ್ಪಲ್ಲ. ಗಣೇಶ್ ಪುತ್ರ ವಿಹಾನ್ ನಟನೆ ಕಂಡರೆ ಆತನಲ್ಲಿ ಒಬ್ಬ ಕಲಾವಿದ ಇದ್ದಾನೆ ಎಂದು ಸುಲಭದಲ್ಲಿ ಅರ್ಥಮಾಡಿಕೊಳ್ಳಬಹುದು! ಒಟ್ಟಿನಲ್ಲಿ ಬಹಳ ಸಮಯದ ಬಳಿಕ ಕೌಟುಂಬಿಕ ಮನರಂಜನೆ ನೀಡುವಂಥ ಒಂದು ಚಿತ್ರ ತೆರೆಗೆ ಬಂದಿದೆ ಎನ್ನಬಹುದು.