ಕಾಲೇಜ್ ಅಂಗಳದಲ್ಲಿ ಸ್ನೇಹ ಪ್ರೀತಿ
ಎಲ್ಲಾ ಸಂಬಂದಗಳಿಗಿಂತ ಸ್ನೇಹ ಸಂಬಂದ ದೊಡ್ಡದು ಎಂಬುದನ್ನು ‘ಬಡ್ಡೀಸ್’ ಚಿತ್ರದಲ್ಲಿ ಹೇಳಿದ್ದಾರೆ. ಕಾಲೇಜು, ಪ್ರೀತಿ, ಶ್ರೀಮಂತ ಕುಟುಂಬ, ಅನಾಥ ಸ್ನೇಹಿತರು ಹೀಗೆ ಇಷ್ಟು ಪಾತ್ರಗಳ ಸುತ್ತ ಇಂದಿನ ಹುಡುಗ ಹುಡುಗಿಯರಿಗೆ ಹೇಳಬೇಕಾದ ಕಥೆಯನ್ನು ನಿರ್ದೇಶಕ ಗುರುತೇಜ್‌ಶೆಟ್ಟಿ ಸಮರ್ಪಕವಾಗಿ ನಿರೂಪಿಸಿದ್ದಾರೆ. ಕಥಾನಾಯಕ ದೊಡ್ಡ ಬ್ಯುಸಿನೆಸ್‌ಮ್ಯಾನ್ ಪುತ್ರ. ಚಿಕ್ಕವನಿದ್ದಾಗೇ ಅಮ್ಮನನ್ನು ಕಳೆದುಕೊಂಡು ಏಕಾಂಗಿಯಾದೆ ಎಂಬ ಕೊರಗಿನಲ್ಲಿರುತ್ತಾನೆ. ಅದನ್ನು ನೀಗಿಸಲು ಅಪ್ಪನು ಮೂವರು ಅನಾಥ ಹುಡುಗರನ್ನು ಮಗನ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡುತ್ತಾನೆ. ಅಲ್ಲಿಂದ ಪುಟ್ಟ ಮನಸ್ಸು ಖುಷಿಯಾಗುತ್ತದೆ. ಮುಂದೆ ಎಲ್ಲರೂ ಕಾಲೇಜು ಸೇರುತ್ತಾರೆ. ಗೆಳಯರ ಎಲ್ಲಾ ಖರ್ಚು ವೆಚ್ಚಗಳನ್ನು ಆತನೆ ನೋಡಿಕೊಳ್ಳುತ್ತಿರುತ್ತಾನೆ.
ಹೀಗೆ ಸಾಗುವ ಕಥೆಯಲ್ಲಿ ಬಾಲ್ಯದ ಗೆಳತಿ ಕಥಾನಾಯಕಿ ಎಂಟ್ರಿಯಾಗುತ್ತದೆ. ಇಬ್ಬರ ನಡುವೆ ಪ್ರೀತಿ ಹುಟ್ಟುತ್ತದೆ. ಪ್ರೀತಿಗೆ ಒಪ್ಪಿ ನಿಶ್ಚಿತಾರ್ಥ ನಡೆಯುತ್ತದೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗಲು ನಿರ್ಣಯಿಸುತ್ತಾರೆ. ಮುಂದಿನ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುವ ಸ್ನೇಹಿತರಿಗೆ ಚಿಂತೆ ಕಾಡುತ್ತದೆ. ಅದಕ್ಕೊಂದು ಕೆಟ್ಟ ನಿರ್ಧಾರಕ್ಕೆ ಬಂದು ಸ್ನೇಹಿತನನ್ನೆ ಕಿಡ್ನಾಪ್ ಮಾಡಿ ಹಣದ ಬೇಡಿಕೆ ಇಡುತ್ತಾರೆ. ಇದರಿಂದ ಅವರುಗಳ ಕಾರ್ಯ ಸಪಲವಾಯಿತೆ. ಪ್ರೀತಿ ಏನಾಯಿತು ಎಂಬುದನ್ನು ತಿಳಿಯಲು ಚಿತ್ರಮಂದಿರಕ್ಕೆ ಬರಬೇಕು.
ಮೊದಲ ಭಾಗವು ಖುಷಿಯಿಂದ ಹೋದರೆ, ವಿರಾಮದ ನಂತರ ಥ್ರಿಲ್ಲರ್ ರೂಪದಲ್ಲಿ ಬಿಚ್ಚಿಕೊಳ್ಳುತ್ತದೆ. ಅಲ್ಲಿಂದ ನಾಯಕ ಪೋಲೀಸ್, ಹಾಗೂ ಅಪರಾಧಿಗಳ ಆಟ ಶುರುವಾಗುತ್ತದೆ. ಕಿರಣ್‌ರಾಜ್ ನಾಯಕನಾಗಿ ಡ್ಯಾನ್ಸ್ ಫೈಟ್‌ನಲ್ಲಿ ಸೈ ಅನಿಸಿಕೊಂಡಿದ್ದಾರೆ. ನಾಯಕಿ ಸಿರಿಪ್ರಹ್ಲಾದ್ ಚೆಂದ ಕಾಣುತ್ತಾರೆ. ಸಂಗೀತಕ್ಕಿಂತ ಹಿನ್ನಲೆ ಶಬ್ದ ಕೆಲಸವನ್ನು ನಿರ್ವಹಿಸಿರುವ ಜ್ಯೂಡೋಸ್ಯಾಂಡಿ ನೆನಪಿನಲ್ಲಿ ಉಳಿಯುತ್ತಾರೆ. ಗೋಪಾಲಕೃಷ್ಣದೇಶಪಾಂಡೆ ಅವರ ಅಭಿನಯ ನೋಡುವುದೇ ಮಜಾ ಕೊಡುತ್ತದೆ. ಮೊದಲ ಪ್ರಯತ್ನದಲ್ಲೇ ಭಾರತಿಶೆಟ್ಟಿ ನಿರ್ಮಾಪಕಿಯಾಗಿ ಗೆಲುವು ಸಾಧಿಸಿದ್ದಾರೆ ಎನ್ನಬಹುದು. ಚಿತ್ರವನ್ನು ಒಮ್ಮೆ ನೋಡಲು ಅಡ್ಡಿಯಿಲ್ಲ.
***