ಕಾಲೇಜು ಕಾರಿಡಾರ್ದಲ್ಲಿ ಸ್ನೇಹ-ಪ್ರೀತಿ
ಸ್ನೇಹಕ್ಕಾಗಿ ಪ್ರೀತಿಯನ್ನು ತ್ಯಾಗ ಮಾಡುವ ಚಿತ್ರಗಳು ಸಾಕಷ್ಟು ಬಂದಿದೆ. ಆದರೆ ‘ಓ ಮೈ ಲವ್’ ಚಿತ್ರದಲ್ಲಿ ಇವರೆಡು ಇದ್ದರೂ ಭಿನ್ನವಾಗಿ ತೋರಿಸಿರುವುದು ಪ್ಲಸ್ ಪಾಯಿಂಟ್ ಆಗಿದೆ. ಕಾಲೇಜು ಹುಡುಗರ ಮೋಜು ಮಸ್ತಿಯಲ್ಲಿ ನವಿರಾದ ಪ್ರೀತಿ ಅರಳುತ್ತದೆ. ಇದಕ್ಕೆ ಸ್ನೇಹ ಅಡ್ಡ ಬರುತ್ತದೆ. ಕೆಲಸದ ನಿಮಿತ್ತ ಹೊರಗೆ ಬೇಕಾದ ಕಾರಣ ಅಣ್ಣನು ತಂಗಿಯ ರಕ್ಷಣೆಗಾಗಿ ಗೆಳಯನನ್ನು ಕೇಳಿಕೊಳ್ಳುತ್ತಾನೆ. ಅವನು ಎಲ್ಲಾ ರೀತಿಯಲ್ಲಿ ಸೇಫ್ ಮಾಡುವಾಗ ಅವಳು ಅವನಲ್ಲಿ ಅನುರಕ್ತಳಾಗುತ್ತಾಳೆ. ಆತನು ಗೆಳೆಯನಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿರುತ್ತಾನೆ. ಇದರ ಮಧ್ಯೆ ದುರುಳರ ಗ್ಯಾಂಗ್‌ವೊಂದು ಇವಳನ್ನು ಹುಡುಕುತ್ತಿರುತ್ತದೆ. ಒಂದು ಕಡೆ ಫ್ರೆಂಡ್‌ಶಿಪ್, ಮತ್ತೊಂದು ಕಡೆ ಲವ್. ಇವರೆಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾನೆ? ಗ್ಯಾಂಗ್‌ನವರು ಈಕೆಯನ್ನು ಹುಡುಕಲು ಕಾರಣವೇನು? ಕೊನೆಗೆ ಎರಡು ಮನೆಕಡೆಯಿಂದ ಪ್ರೀತಿಗೆ ಯಾವ ರೀತಿ ಸ್ಪಂದನೆ ಸಿಗುತ್ತದೆ. ಇವೆಲ್ಲಾಕ್ಕೂ ಉತ್ತರ ಚಿತ್ರ ನೋಡಿದರೆ ತಿಳಿಯುತ್ತದೆ.
ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಸ್ಮೈಲ್‌ಶ್ರೀನು ನೋಡುಗರ ಮೆಂಟಾಲಿಟಿಯನ್ನು ಅರ್ಥ ಮಾಡಿಕೊಂಡಿರುವುದರಿಂದ ಅಂತಹುದೆ ಸನ್ನಿವೇಶಗಳನ್ನು ಸೃಷ್ಟಿಸಿದ್ದಾರೆ. ಅಲ್ಲದೆ ಬಿ,ಸಿ ಕೇಂದ್ರದವರು ಇಷ್ಟಪಡುವ ಜಬರ್‌ದಸ್ತ್ ಸಾಹಸ ದೃಶ್ಯಗಳನ್ನು ಸೇರಿಸಿರುವುದರಿಂದ ಎಲ್ಲಾ ವರ್ಗದ ಪ್ರೇಕ್ಷಕರು ಇಷ್ಟಪಡುವಂತಹ ಸಿನಿಮಾ ಮಾಡಿದ್ದಾರೆ. ಸುಂದರ ಕಥೆಯನ್ನು ಬರೆದಿರುವ ಜಿ.ರಾಮಾಂಜಿನಿ ಚಿತ್ರರಂಗಕ್ಕೆ ಒಳ್ಳೆಯ ಕಥೆಗಾರ ಸಿಕ್ಕಂತೆ ಆಗಿದೆ. ಶಶಿಕುಮಾರ್ ಪುತ್ರ ಅಕ್ಷಿತ್‌ಶಶಿಕುಮಾರ್ ನಾಯಕನಾಗಿ ಅಪ್ಪನಂತೆ ಡ್ಯಾನ್ಸ್, ಫೈಟ್, ಅಭಿನಯದಲ್ಲಿ ಸೈ ಅನಿಸಿಕೊಂಡಿದ್ದಾರೆ. ನಾಯಕಿ ಕೀರ್ತಿಕಲ್ಕರೆ ನೋಡಲು ಚೆಂದಕಾಣಿಸುತ್ತಾರೆ. ವಿರಾಮದ ನಂತರ ಬರುವ ಎಸ್.ನಾರಾಯಣ್ ಗಂಭೀರ ನಟನೆ, ಅಲ್ಲಲ್ಲಿ ನಗಿಸುವ ಸಾಧುಕೋಕಿಲ, ಖಳನಾಗಿ ದೇವಗಿಲ್, ಗೆಳೆಯನ ಪಾತ್ರ ಮಾಡಿರುವ ಪೃಥ್ವಿ, ಸಂಗೀತ, ಯಶಾ, ಪವಿತ್ರಾಲೋಕೇಶ್, ಸಿಲ್ಲಿಲಲ್ಲಿ ಆನಂದ್, ಟೆನ್ನಿಸ್‌ಕೃಷ್ಣ ಇವರೆಲ್ಲರೂ ಸಿಕ್ಕ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಂಡಿದ್ದಾರೆ. ಚರಣ್‌ಅರ್ಜುನ್ ಸಂಗೀತದಲ್ಲಿ ಎರಡು ಹಾಡುಗಳು ಕೇಳಬಲ್. ಹಾಲೇಶ್ ಛಾಯಾಗ್ರಹಣ ಕಣ್ಣಿಗೆ ತಂಪು ಕೊಡುತ್ತದೆ. ಪಕ್ಕಾ ಕಮರ್ಷಿಯಲ್ ಚಿತ್ರವಾಗಿರುವುದರಿಂದ ಪೈಸಾ ವಸೂಲ್ ಎನ್ನಬಹುದು.