ಮನರಂಜನೆಯ ಮೂಲಕ ಶಿಕ್ಷಣ
ಓದುವ ಮಕ್ಕಳಿಗೆ ಶಿಕ್ಷಣ ನೇರವಾಗಿ ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಇದರಿಂದ ಅವರು ಓದಿನಲ್ಲಿ ಹಿಂದಿರುತ್ತಾರೆ. ಅದೇ ಮನರಂಜನೆ ಮೂಲಕ ಶಿಕ್ಷಣವನ್ನು ಹೇಳಿದಾಗ ತಲೆ ಒಳಗೆ ಹೋಗುತ್ತದೆ. ಇಂತಹುದೇ ಅಂಶಗಳನ್ನು ತೆಗೆದುಕೊಂಡು ‘ನಹೀ ಜ್ಞಾನೇನ ಸದೃಶಂ’ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಕಥೆಯಲ್ಲಿ ಅದೊಂದು ಪ್ರೌಡಶಿಕ್ಷಣ ಶಾಲೆ. ಅಲ್ಲಿಗೆ ಗಣಿತ ಹೇಳಿಕೊಡುವ ಶಿಕ್ಷಕರೊಬ್ಬರು ಬರುತ್ತಾರೆ. ಕ್ಲಾಸಿನಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡದೆ ಹೋ ವರ್ಕ್‌ನ್ನು ಪೋಷಕರಿಗೆ ನೀಡಿ, ಮಕ್ಕಳಿಗೆ ಸಿನಿಮಾ ನೋಡಲು ಹುರುದುಂಬಿಸುತ್ತಾರೆ. ಇದರಿಂದ ಪೋಷಕರು ಹಾಗೂ ಸಿಬ್ಬಂದಿಯಿಂದ ಅಪವಾದಗಳನ್ನು ಎದುರಿಸುವ ಪ್ರಸಂಗ ಒದಗಿಬರುತ್ತದೆ. ಮುಂದೆ ಎಲ್ಲರೂ ಬಂದು ಶಿಕ್ಷಕನ ಮೇಲೆ ಗಂಭೀರ ಆರೋಪ ಮಾಡುತ್ತಾರೆ. ಇಂತಹ ಅಪಾರ್ಥಗಳನ್ನು ದೂರ ಮಾಡಲು ಅವರು ಬಿಗ್‌ಬಾಸ್‌ನಲ್ಲಿ ನೀಡುವಂತೆ ಮಕ್ಕಳಿಗೆ ಎರಡು ದಿನದ ಟಾಸ್ಕ್‌ನ್ನು ಕೊಡುತ್ತಾರೆ. ಅದರಲ್ಲಿ ಆಟದ ಜೊತೆಗೆ ಜ್ಘಾನದ ಮಹತ್ವವನ್ನು ತಿಳಿಸುವ ಉದ್ದೇಶ ಆಗಿರುತ್ತದೆ. ಕೊನೆಗೆ ಆಟದಿಂದ ಪಾಠ ಎನ್ನುವ ಹಾಗೆ ಮಕ್ಕಳು ಟಾಸ್ಕ್‌ನ್ನು ಯಾವ ರೀತಿ ಮಾಡುತ್ತಾರೆ. ಅಂತಿಮವಾಗಿ ಅವರಿಗೆ ಆಗುವ ಅನುಕೂಲಗಳು ಏನೇನು ಎಂಬುದನ್ನು ಚಿತ್ರ ನೋಡಿದಾಗ ತಿಳಿಯುತ್ತದೆ.
ಸುಮಾರು ನೂರಕ್ಕೂ ಹೆಚ್ಚು ಮಕ್ಕಳು ಅಭಿನಯಿಸಿದ್ದು ಅದರಲ್ಲಿ ಮುಖ್ಯವಾಗಿ ವೇದಿಕಾ, ಅಬಪಾಲಿ, ಮಹೇಶ್.ಎಸ್.ಪಿ, ಬೆಟ್ಟೇಶ್, ಲಿಂಗೇಶ್, ಶ್ರೀನಿಧಿ, ಗಗನ ಇವರೊಂದಿಗೆ ಹಿರಿಯ ಕಲಾವಿದರುಗಳಾದ ಅರುಣಾಬಾಲರಾಜ್, ಮಹೇಶ್, ವಾಸುದೇವಮೂರ್ತಿ, ರಾಘವೇಂದ್ರನಾಯಕ್ ಮುಂತಾದವರು ನಟಿಸಿದ್ದಾರೆ. ನಿರ್ದೇಶನ, ನಿರ್ಮಾಣ ಹಾಗೂ ಗಣಿತ ಮಾಸ್ಟರ್ ಆಗಿ ಕಾಣಿಸಿಕೊಂಡಿರುವ ರಾಮ್‌ಗೆ ಮೊದಲ ಚಿತ್ರವಾದರೂ ಸೈಕಲ್ ಒಡೆಯದೆ ಸಲೀಸಾಗಿ ಮೂರು ಜವಬ್ದಾರಿಗಳನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಪ್ರಮೋದ್‌ಮರವಂತೆ ಸಾಹಿತ್ಯದ ಎರಡು ಹಾಡುಗಳಿಗೆ ಸಂಗೀತ ಸಂಯೋಜಿಸಿರುವ ಅರ್ಜುನ್‌ರಾಮ್ ಕೆಲಸ ಮೆಚ್ಚುವಂತಿದೆ. ಸಂಡೂರು, ಬಳ್ಳಾರಿ ಸುತ್ತಮುತ್ತಲಿನ ಸ್ಥಳಗಳನ್ನು ಸುಂದರವಾಗಿ ಕಿರಣ್.ಸಿ.ಹೆಚ್.ಎಂ ಸೆರೆ ಹಿಡಿದಿರುವುದು ಇದಕ್ಕೆ ಪೂರಕವಾಗಿದೆ. ಮುಗ್ದ ಮನಸ್ಸಿನ ಮಕ್ಕಳಿಗೆ ಹೇಳಿ ಮಾಡಿಸಿದಂತ ಚಿತ್ರವೆನ್ನಬಹುದು.
****