ಒಂದು ಕೊಲೆಯ ಸುತ್ತ
ಒಂದು ಮರ್ಡರ್ ಮಿಸ್ಟರಿಯನ್ನು ಹೀಗೂ ತನಿಖೆ ಮಾಡಬಹುದೆಂದು ‘ಮರ್ದಿನಿ’ ಚಿತ್ರದಲ್ಲಿ ಚೆನ್ನಾಗಿ ತೋರಿಸಲಾಗಿದೆ. ಕಥಾ ನಾಯಕಿ ಪೋಲೀಸ್ ಇನ್ಸ್‌ಪೆಕ್ಟರ್ ಮರ್ದಿನಿ ಚಿಕ್ಕಮಗಳೂರಿಗೆ ವರ್ಗವಾಗಿ ಬಂದ ಕೆಲವೇ ದಿನಗಳಲ್ಲಿ ಜಾಹ್ಮವಿ ಎಂಬ ಹುಡುಗಿಯ ಕೊಲೆಯಾಗುತ್ತದೆ. ಹಾಗಾಗಿ ಕೊಲೆಗಾರರನ್ನು ಪತ್ತೆ ಹಚ್ಚುವುದು ಆಕೆಗೆ ಸವಾಲು ಆಗುತ್ತದೆ. ಆ ಕೊಲೆಯ ರೂವಾರಿಯನ್ನು ಹುಡುಕುವ ಹಾದಿಯಲ್ಲಿ ಹಲವಾರು ತಿರುವುಗಳು ಎದುರಾಗುತ್ತದೆ. ಪ್ರಕರಣ ಅಂದ ಮೇಲೆ ಬರುವ ರಾಜಕೀಯ ಹಸ್ತಕ್ಷೇಪ, ಪ್ರಭಾವಿ ವ್ಯಕ್ತಿಗಳ ಕುಮ್ಮಕ್ಕು ಇದ್ಯಾವುದಕ್ಕೂ ಹೆದರದೆ ಅದೆಲ್ಲವನ್ನು ಬದಿಗಿಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡಲು ಮುಂದಾಗುತ್ತಾಳೆ. ಕೊನೆಯಲ್ಲಿ ರೋಚಕ ಹಂತಕ್ಕೆ ಬಂದು ನಿಲ್ಲುತ್ತದೆ. ಮಹಿಳಾ ಪ್ರಧಾನ ಕಥೆಯ ಸಿನಿಮಾದಲ್ಲಿ ಆಕೆಯು ಹೇಗೆ ದಕ್ಷತೆಯಿಂದ ಕಾರ್ಯನಿರ್ವಹಿಸಿ ಆರೋಪಿಗಳನ್ನು ಯಾವ ರೀತಿ ಪತ್ತೆ ಹಚ್ಚುತ್ತಾಳೆ ಎಂಬುದನ್ನು ಹೇಳಲಾಗಿದೆ. ಅಷ್ಟಕ್ಕೂ ಮರ್ಡರ್ ಆದ ಹುಡುಗಿ ಯಾರು? ಯಾವ ಕಾರಣಕ್ಕೆ ಕೊಲೆ ಮಾಡಲಾಯಿತು. ಆ ಕೊಲೆಯ ಸೂತ್ರಧಾರಿ ಯಾರು? ಇವೆಲ್ಲಕ್ಕೂ ಉತ್ತರ ಚಿತ್ರಮಂದಿರದಲ್ಲಿ ಸಿಗುತ್ತದೆ.
ರಿತನ್ಯಹೂವಣ್ಣ ಮೊದಲ ಚಿತ್ರದಲ್ಲಿ ಬಿಂದಾಸ್ ಆಗಿ ಅಭಿನಯಿಸಿ, ಕೆಲವೊಂದು ದೃಶ್ಯದಲ್ಲಿ ಮಾಲಾಶ್ರೀ ನೆನಪಿಸುತ್ತಾರೆ. ಉಳಿದಂತೆ ಇಂಚರಾ, ಮನೋಹರ್, ಅಕ್ಷಯ್‌ಗೌಡ, ಅಂಕಿತ್, ಅನೂಪ್ ತಮಗೆ ನೀಡಿರುವ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನಿರ್ದೇಶಕ ಕಿರಣ್‌ಕುಮಾರ್ ಚೆಂದದ ಸನ್ನಿವೇಶಗಳನ್ನು ಸೃಷ್ಟಿಸಿ ಕುತೂಹಲ ಬರುವಂತೆ ಮಾಡುವಲ್ಲಿ ಸಪಲರಾಗಿದ್ದಾರೆ. ಹಿತನ್‌ಹಾಸನ್ ಹಿನ್ನಲೆ ಸಂಗೀತ ಚಿತ್ರಕ್ಕೆ ಪೂರಕವಾಗಿದೆ. ಅರುಣ್‌ಸುರೇಶ್ ಕ್ಯಾಮಾರ ಕೈಚಳಕ ಸಿನಿಮಾಕ್ಕೆ ಹೊಸ ರೂಪ ಕೊಟ್ಟಿದೆ. ಆಕ್ಷನ್, ಮರ್ಡರ್ ಮಿಸ್ಟರಿ ಕಥೆಯನ್ನು ಇಷ್ಟಪಡುವವರಿಗೆ ಇದು ಖಂಡಿತವಾಗಿಯೂ ಪೈಸಾ ವಸೂಲ್ ಚಿತ್ರವೆಂದು ಹೇಳಬಹುದು. ನಿರ್ಮಾಪಕಿ ಶ್ರೀಮತಿ ಭಾರತಿಜಗ್ಗಿ ಪ್ರಥಮ ಪ್ರಯತ್ನದಲ್ಲೆ ಉತ್ತಮ ಚಿತ್ರವನ್ನು ಜನರಿಗೆ ನೀಡಿದ್ದಾರೆ.
****