ಫ್ಯಾಮಿಲಿ ಡ್ರಾಮಾದಲ್ಲಿ ಪ್ರೀತಿಯ ಕಲರವ
ಶ್ರೀಮಂತರ ಮಗ ಕಾಲೇಜಿಗೆ ಸೇರಿದರೆ ಬಿಂದಾಸ್ ಆಗಿರುತ್ತಾನೆ. ಅವನಿಗೆ ಕಷ್ಟದ ಅರಿವಾಗುವುದು ಬೇರೆ ಕಡೆಗೆ ಒಬ್ಬಂಟಿಯಾಗಿ ಬದುಕು ಸಾಗಿಸಿದರೆ ಮಾತ್ರ ಎಂಬುದನ್ನು ‘ವಾಸಂತಿ ನಲಿದಾಗ’ ಚಿತ್ರದಲ್ಲಿ ಹೇಳಲಾಗಿದೆ. ಕಥೆಯಲ್ಲಿ ಶ್ರೀಮಂತ ದಂಪತಿಗೆ ಮಗು ಹುಟ್ಟಿದಾಕ್ಷಣ ಅದೃಷ್ಟ ಖುಲಾಯಿಸುತ್ತದೆ. ಇದರಿಂದ ಇಬ್ಬರು ಮಗನನ್ನು ಪ್ರೀತಿಯಿಂದ ಯಾವುದಕ್ಕೂ ಕಡಿಮೆ ಮಾಡದೆ ಬೆಳೆಸುತ್ತಾರೆ. ಆತ ಕಾಲೇಜಿಗೆ ಹೋದಾಗಲೂ ಎಲ್ಲದಕ್ಕೂ ಸ್ವಾತಂತ್ರ ಕೊಡುತ್ತಾರೆ. ಇದರಿಂದ ಮಗನು ಕುಡಿತ, ಪ್ರೀತಿಯ ಬಲೆಗೆ ಬೀಳುತ್ತಾನೆ. ಇವನನ್ನು ಸರಿದಾರಿಗೆ ತರಲು ಅಪ್ಪ ಒಂದು ಷರತ್ತು ವಿಧಿಸುತ್ತಾರೆ. ನಾನು ಓದಿದಂತ ಕಾಲೇಜಿನಲ್ಲಿ ಯಾವುದೇ ಸೌಕರ್ಯಗಳು ಇರುವುದಿಲ್ಲ. ಅಲ್ಲಿ ಒಂದು ವರ್ಷ ವ್ಯಾಸಾಂಗ ಮಾಡಿಕೊಂಡು ಬಂದರೆ, ನೀನು ಗೆದ್ದಂತೆ ಎನ್ನುತ್ತಾರೆ. ಅಪ್ಪನ ಛಾಲೆಂಜ್‌ನ್ನು ಸ್ವೀಕರಿಸಿ ದೂರದ ಸ್ಥಳಕ್ಕೆ ಹೋಗುತ್ತಾನೆ. ಅಲ್ಲಿ ನಡೆಯುವುದಾದರೂ ಏನು? ಕೊನೆಗೆ ಗೆಲ್ಲುತ್ತಾನಾ ಸೋಲುತ್ತಾನಾ ಎಂಬುದು ಸಿನಿಮಾದ ಒಂದು ಏಳೆಯ ಸಾರಾಂಶವಾಗಿದೆ.
ರೋಹಿತ್‌ಶ್ರೀಧರ್ ನಾಯಕನಾಗಿ ಪ್ರಥಮ ಚಿತ್ರದಲ್ಲೆ ಭರವಸೆಯ ನಟನೆಂದು ಸಾಬೀತು ಪಡಿಸಿಕೊಂಡಿದ್ದಾರೆ. ನಟನೆ, ಡ್ಯಾನ್ಸ್, ಫೈಟ್ ಎಲ್ಲದರಲ್ಲೂ ಮಿಂಚಿದ್ದಾರೆ. ನಾಯಕಿಯರಾದ ಜೀವಿತವಸಿಷ್ಠ ಮತ್ತು ಭಾವನಾಶ್ರೀನಿವಾಸ್ ಅವಕಾಶ ಹೊಸದಾಗಿದ್ದರೂ ಕ್ಯಾಮಾರ ಮುಂದೆ ಸಲೀಸಾಗಿ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಪೋಷಕರಾಗಿ ಸಾಯಿಕುಮಾರ್-ಸುಧಾರಾಣಿ, ನಗಿಸಲು ಸಾಧುಕೋಕಿಲ, ಗೆಳೆಯರಾಗಿ ಮಂಜುಪಾವಗಡ, ಧನಂಜಯ, ಕುರಿರಂಗ, ಲೆಕ್ಚರರ್ ಆಗಿ ರಘುರಾಮನಕೊಪ್ಪ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ರವೀಂದ್ರವೆಂಶಿ ನಿರ್ದೇಶನದಲ್ಲಿ ಪ್ರೀತಿಯ ದೃಶ್ಯಗಳು ನವಿರಾಗಿ ಮೂಡಿಬಂದಿದೆ. ಒಂದೆರಡು ಹಾಡುಗಳು, ಛಾಯಾಗ್ರಹಣ ಕೆಲಸ ಸಿನಿಮಾವನ್ನು ಅಂದಗಾಣಿಸುವಂತೆ ಮಾಡಿದೆ. ಒಮ್ಮೆ ವಾಸಂತಿಯನ್ನು ನೋಡಲು ಅಡ್ಡಿಯೇನಿಲ್ಲ.
***