Thimayya & Thimayya.Reviews

Friday, December 02, 2022

245

ತಾತ ಮೊಮ್ಮಗನ ಭಾವನೆಗಳ ಪಯಣ

       ನಾವು ಅಂದುಕೊಂಡಂತೆ ಜೀವನ ಸಾಗಿಸುವುದು ಸುಲಭ. ಅದರಂತೆ ಸಂಬಂದಗಳು ಮನುಷ್ಯನನ್ನು ಭಾವನಾ ಜೀವಿಯನ್ನಾಗಿಸುತ್ತದೆ. ಸರಿದು ಹೋದ ಕಾಲದಲ್ಲಿ ಮರೆಯಾದ ಸುಂದರ ನೆನಪುಗಳನ್ನು ಹುಡುಕಿ ತಂದುಕೊಡುವ ಚಿತ್ರ ‘ತಿಮ್ಮಯ್ಯ ಅಂಡ್ ತಿಮ್ಮಯ್ಯ’ ಎಂದು ಹೇಳಬಹುದು. ತನ್ನ ಕುಟುಂಬದ ಆಸ್ತಿಯನ್ನು ಮಾರಿ ಲವರ್ ಜೊತೆ ಫಾರಿನ್‌ಗೆ ಹೋಗುವ ಹಂಬಲದಲ್ಲಿದ್ದ ಜ್ಯೂ.ತಿಮ್ಮಯ್ಯ(ದಿಗಂತ್)ನನ್ನು ವಾಪಸ್ಸು ಕರೆತರುವ ಸೀನಿಯರ್ ತಿಮ್ಮಯ್ಯ (ಅನಂತ್‌ನಾಗ್). ಹೀಗೆ ತಾತ ಮೊಮ್ಮಗನ ಮೇಲೆ ಶುರುವಾಗುವ ಕಥೆಯು ನೋಡುಗರನ್ನು ಭಾವನಾ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ.

      ಕಫೆ ಅಂದರೆ ಹೋಟೆಲ್ ಆಗಿರುವುದಿಲ್ಲ. ಎಲ್ಲರು ಕಲೆತು ಹರಟೆ ಹೊಡೆಯುವ ಸ್ಥಳ. ಬೆಂಗಳೂರು ಕಫೆ ಹಲವರನ್ನು ಸೆಳೆದಿರುತ್ತದೆ. ಅದರಲ್ಲಿ ಸೀನಿಯರ್ ತಿಮ್ಮಯ್ಯ ಕೂಡ ಒಬ್ಬರಾಗಿರುತ್ತಾರೆ. ಹಠಮಾರಿ ಸ್ವಭಾವದವರಾಗಿ ಅಂದುಕೊಂಡಿದ್ದನ್ನು ಮಾಡಿಯೇ ತೀರಿಸುವ ಛಾತಿಯುಳ್ಳವರು. ಆದರೆ ಮೊಮ್ಮಗ ಇದಕ್ಕೆ ವಿರುದ್ದ ದಿಕ್ಕಿನಲ್ಲಿ ನಡೆಯುವವನು. ಈ ಕಥೆಯ ಮರುಸ್ಥಾಪನೆಯ ದಾರಿಯಲ್ಲಿ ಬಿಚ್ಚಿಕೊಳ್ಳುವ ಸವಿನೆನಪುಗಳು ಮನಸಿಗೆ ಖುಷಿ ಕೊಡುತ್ತದೆ. ಮೊದಲರ್ಧ ನಗುವಿನಲ್ಲಿ ಸಾಗಿಸಿದರೆ, ವಿರಾಮದ ನಂತರ ಬರುವ ದೃಶ್ಯಗಳು ಸೆಂಟಿಮೆಂಟ್ ಆಗಿ ರೂಪುಗೊಳ್ಳುತ್ತದೆ. ನಿರ್ದೇಶಕ ಸಂಜಯ್‌ಶರ್ಮ ಮೊದಲ ಪ್ರಯತ್ನದಲ್ಲೆ ಪ್ರೇಕ್ಷಕರ ನಾಡಿ ಮಿಡಿತವನ್ನು ತಿಳಿದಂತೆ ಕಾಣುವುದರಿಂದ ಅಂತಹ ಸನ್ನಿವೇಶಗಳನ್ನು ತೋರಿಸಿದ್ದಾರೆ.

        ಈ ಹಿಂದೆ ಬಂದಂತ ಚಿತ್ರಗಳಲ್ಲಿ ಅನಂತ್‌ನಾಗ್, ದಿಗಂತ್ ಜೋಡಿ ಇದರಲ್ಲಿ ಮುಂದುವರೆದಿದ್ದು, ತುಸು ಜಾಸ್ತಿಯೇ ಇದೆ. ಅನಂತ್‌ನಾಗ್ ನಟನೆ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯಾಗುತ್ತದೆ. ಇನ್ನು ದಿಗಂತ್ ಹುಡುಗಾಟಿಕೆ ಹಾಗೂ ಗಂಭೀರ ಪಾತ್ರವಾಗಿ ಅಭಿನಯಿಸಿದ್ದಾರೆ. ಗ್ಲಾಮರ್ ಲುಕ್‌ದಲ್ಲಿ ಐಂದ್ರಿತಾರೈ, ಉಳಿದಂತೆ ಶುಭ್ರಅಯ್ಯಪ್ಪ, ಪ್ರಕಾಶ್‌ತುಮ್ಮಿನಾಡು ತಮಗೆ ನೀಡಿದ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.  ಅನೂಪ್‌ಸೀಳನ್ ಸಂಗೀತ ಮುದ ಕೊಡುತ್ತದೆ. ಒಟ್ಟಾರೆ ತಿಮ್ಮಯ್ಯಾಸ್ ಎಲ್ಲರನ್ನು ನಗಿಸುತ್ತಾ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ.

****

 

Copyright@2018 Chitralahari | All Rights Reserved. Photo Journalist K.S. Mokshendra,