ಬಾಂಡ್ ರವಿ ಕಿಮ್ಮತ್ತು, ಕರಾಮತ್ತು
‘ಬಾಂಡ್ ರವಿ’ ಚಿತ್ರದಲ್ಲಿ ಆತನೊಬ್ಬ ಪುನೀತ್‌ರಾಜ್‌ಕುಮಾರ್ ಅಭಿಮಾನಿ. ದುಡ್ಡು ಸಿಗುತ್ತದೆ ಅಂದರೆ ಯಾವುದೇ ಕೆಲಸಕ್ಕೂ ಹಿಂದು ಮುಂದೆ ನೋಡದೆ ಎಂಟ್ರಿ ಕೊಡುತ್ತಾನೆ. ಕಾರ್ಪೋರೇಟರ್ ಈತನಿಗೆ ಡೀಲ್ ಕೊಟ್ಟು ತನ್ನೆಲ್ಲ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿರುತ್ತಾನೆ. ಒಮ್ಮೆ ಕೊಲೆಯ ಆರೋಪವನ್ನು ತನ್ನ ಮೇಲೆ ಹಾಕಿಕೊಂಡು, ಜೈಲ್ ಸೇರುತ್ತಾನೆ. ಅಲ್ಲಿ ಕಾರ್ಪೋರೇಟರ್ ಕಡೆಯವನು ಅಂತ ರಾಜಮರ್ಯಾದೆ ಸಿಗುತ್ತಿರುತ್ತದೆ. ಅಲ್ಲದೆ ಮೊಬೈಲ್ ಇರುತ್ತದೆ. ಹುಡುಗಿಯೊಬ್ಬಳು ಸಾಲ ಬೇಕೇ ಅಂತ ಕಾಲ್ ಮಾಡುತ್ತಾಳೆ. ಆಕೆ ಮಾಡಿದ ಒಂದು ಕರೆ ರವಿಯ ಜೀವನದ ದಿಕ್ಕನ್ನೇ ಬದಲಿಸುತ್ತದೆ. ಹೀಗೆ ಪ್ರತಿ ಬಾರಿ ಫೋನ್‌ನಲ್ಲಿ ಇಬ್ಬರು ಮಾತನಾಡುತ್ತಲೇ ಪ್ರೀತಿ ಚಿಗುರುತ್ತದೆ. ಅವನು ಜೈಲಿನಲ್ಲಿರುವುದು ತಿಳಿದಿದ್ದರೂ ಲವ್ ಮಾಡುತ್ತಾಳೆ. ಆಕೆಯ ಪ್ರೀತಿಗೆ ಮನಸೋತು ತನ್ನೆಲ್ಲ ದುರಳ ಕೆಲಸಗಳನ್ನು ತ್ಯಜಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬಾಳಲು ನಿರ್ಧರಿಸಿ ದೂರದ ಊರಿಗೆ ಹೋಗಿ ಬದುಕು ಆರಂಭಿಸುತ್ತಾನೆ.
ಇತ್ತ ಕಾರ್ಪೋರೇಟರ್ ಕೊಲೆಯಾಗುತ್ತದೆ. ಅದರ ಆರೋಪ ಇವನ ಮೇಲೆ ಬಂದು ಬಂದಿಸುತ್ತಾರೆ. ಮುಂದೆ ನಡೆಯುವುದೇ ಒಂದು ಭಯಂಕರ ತಿರುವು. ರವಿ ರೌಡಿ ಅಂತ ತಿಳಿದಿದ್ದರೂ ಇವನನ್ನೆ ಏಕೆ ಲವ್ ಮಾಡುತ್ತಾಳೆ. ಕೊಲೆಯ ಆರೋಪ ಹೊತ್ತ ರವಿಯ ಜೀವನ ಮುಂದೇನು ಆಯಿತು. ಇವೆಲ್ಲವೂ ಕುತೂಹಲಕಾರಿಯಾಗಿ ಒಂದೊಂದಾಗಿ ತೆರೆದುಕೊಳ್ಳುತ್ತದೆ. ಅದು ಏನೆಂಬುದನ್ನು ಚಿತ್ರಮಂದಿರದಲ್ಲಿ ತಿಳಿಯಬೇಕು.
ನಾಯಕ ಪ್ರಮೋದ್ ಶೀರ್ಷಿಕೆ ಹೆಸರಿನಲ್ಲಿ ಬಿಂದಾಸ್ ಆಗಿ ಅಭಿನಯಿಸಿರುವುದರಿಂದ ಚಿತ್ರರಂಗಕ್ಕೆ ಮಾಸ್ ಹೀರೋ ಸಿಕ್ಕಂತೆ ಆಗಿದೆ. ನಾಯಕಿ ಕಾಜಲ್‌ಕುಂದರ್ ಚೆಂದ ಕಾಣಿಸುತ್ತಾರೆ. ಕಾರ್ಪೋರೇಟರ್ ಆಗಿ ಶೋಭರಾಜ್, ರೌಡಿಯಾಗಿ ರವಿಕಾಳೆ ಗಮನ ಸೆಳೆಯುತ್ತಾರೆ. ಮನೋಮೂರ್ತಿ ಸಂಗೀತದಲ್ಲಿ ಎರಡು ಹಾಡುಗಳು ಕೇಳಬಲ್. ನಿರ್ದೇಶಕ ಪ್ರಜ್ವಲ್.ಪಿ ಪ್ರಥಮ ಪ್ರಯತ್ನದಲ್ಲೆ ಅವರ ಶ್ರಮ ಪರದೆ ಮೇಲೆ ಕಾಣಿಸುತ್ತದೆ. ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣ ಪರವಾಗಿಲ್ಲ. ಮಾಸ್ ಅಂಶಗಳನ್ನು ಇಷ್ಟಪಡುವವರಿಗೆ ಇದು ಹೇಳಿ ಮಾಡಿಸಿದಂತ ಚಿತ್ರ ಎನ್ನಬಹುದು.
***