ದುರುಳರಿಗೆ ಖೆಡ್ಡಾ ತೋಡುವ ರಾಣ*****
ಮೂರು ವರ್ಷಗಳ ನಂತರ ಶ್ರೇಯಸ್‌ಮಂಜು ಅಭಿನಯದ ‘ರಾಣ’ ಚಿತ್ರವು ಕಮರ್ಷಿಯಲ್ ಅಂಶಗಳನ್ನು ಒಳಗೊಂಡಿದೆ. ಕಥೆಯಲ್ಲಿ ಆತ ಮಧ್ಯಮ ವರ್ಗದ ಕುಟುಂಬದವನು. ಪೋಲೀಸ್ ಆಗಿ ಸಮಾಜಕ್ಕೆ ಸೇವ ಸಲ್ಲಿಸುವ ಕನಸು ಹೊಂದಿರುತ್ತಾನೆ. ತರಭೇತಿಗಾಗಿ ಬೆಂಗಳೂರಿಗೆ ಬಂದಿರುತ್ತಾನೆ. ಯಾರೂ ಸಂಬಂದಿಕರಿಲ್ಲದ ಕಾರಣ ಸ್ನೇಹಿತರ ರೂಂನಲ್ಲೆ ಉಳಿದುಕೊಳ್ಳುತ್ತಾನೆ. ಟ್ರಾವೆಲ್ಸ್ ಆಫೀಸೊಂದಕ್ಕೆ ಸೇರಿ ಬಿಡುವಿನ ವೇಳೆಯಲ್ಲಿ ಟ್ಯಾಕ್ಸಿ ಓಡಿಸುತ್ತಿರುತ್ತಾನೆ. ಇನ್ನೇನು ಪೋಲೀಸ್ ಆಗೇಬಿಟ್ಟರು ಎನ್ನುವ ಹೊತ್ತಿಗೆ ಹುಟ್ಟಿಕೊಳ್ಳುವ ತಿರುವು. ರೌಡಿಗಳೊಂದಿಗೆ ಸೆಣಸಾಟ. ಯಾರೋ ಮಾಡಿದ ಕೊಲೆಗೆ ಈತ ತಲೆ ಕೊಡುವ ಪರಿಸ್ಥಿತಿ ಎದುರಾಗುತ್ತದೆ. ಸಹಾಯ ಮಾಡಲು ಹೋಗಿ ಆರೋಪಿ ಅನಿಸಿಕೊಳ್ಳುತ್ತಾನೆ. ಇದರ ನಡುವೆ ಸ್ನೇಹಿತನ ಸಾವು, ಮುಂದೇನು ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕು.
ನಾಯಕ ಶ್ರೇಯಸ್‌ಮಂಜು ಎರಡನೆ ಚಿತ್ರದಲ್ಲಿ ಅನುಭವಿ ಕಲಾವಿದರಂತೆ ನಟಿಸಿರುವುದು ಪ್ಲಸ್ ಪಾಯಿಂಟ್ ಆಗಿದೆ. ಅವರ ಫರ್‌ಫಾರ್ಮನ್ಸ್, ಸಾಹಸ, ಡ್ಯಾನ್ಸ್ ಸೇರಿದಂತೆ ಎಲ್ಲವನ್ನು ಸಲೀಸಾಗಿ ಮಾಡಿ ಮುಗಿಸಿದ್ದಾರೆ. ನಾಯಕಿ ರೀಷ್ಮನಾಣಯ್ಯ ಚೆಂದ ಕಾಣಿಸುತ್ತಾರೆ. ಒಂದು ಹಾಡಿಗೆ ಜಬರ್‌ದಸ್ತ್ ಹೆಜ್ಜೆ ಹಾಕಿರುವುದು ಸಂಯುಕ್ತಹೆಗಡೆ. ನೋಡುಗರಿಗೆ ಇಷ್ಟವಾಗುವಂತೆ ಚಿತ್ರವನ್ನು ಕಟ್ಟಿಕೊಟ್ಟಿರುವುದು ನಿರ್ದೇಶಕ ನಂದಕಿಶೋರ್. ಚಂದನ್‌ಶೆಟ್ಟಿ ಸಾಹಿತ್ಯ ರಚಿಸಿ, ಸಂಗೀತ ಒದಗಿಸಿರುವ ಹಾಡುಗಳಲ್ಲಿ ‘ಗಲ್ಲಿಬಾಯ್ ನೀನು ಪೇಟೆಗರ್ಲ್ ನಾನು’ ಗೀತೆ ಆಲಿಸುವಂತಿದೆ. ಪ್ರಶಾಂತ್‌ರಾಜಪ್ಪ ಸಂಭಾಷಣೆ, ಶೇಖರ್‌ಚಂದ್ರ ಛಾಯಾಗ್ರಹಣ, ರವಿವರ್ಮ ಸಾಹಸ ಇಲ್ಲವು ಭರ್ಜರಿಯಾಗಿ ಮೂಡಿಬಂದಿದೆ. ಆಕ್ಷನ್ ಚಿತ್ರಗಳನ್ನು ಇಷ್ಟಪಡುವ ಮಂದಿಗೆ ಇದು ಪೈಸಾವಸೂಲ್ ಎನ್ನಬಹುದು.