ಪ್ರೀತಿಯ ಹಾದಿಯಲ್ಲಿ ದಿಲ್ಪಸಂದ್*****
‘ದಿಲ್‌ಪಸಂದ್’ ಎನ್ನುವುದು ಬೇಕರಿಯಲ್ಲಿ ಸಿಗುವ ತಿನುಸು. ಸಿನಿಮಾದ ಟೈಟಲ್ ಇದೇ ಆಗಿರುವುದರಿಂದ ತಿನ್ನಲು ರುಚಿ ಸಿಗುವಷ್ಟೇ ಚಿತ್ರವು ಸಿಗುತ್ತದೆ. ಸಂತೋಷ್ (ಕೃಷ್ಣ) ಏಳನೇ ಕ್ಲಾಸಲ್ಲಿ ಮದುವೆ ಆಗ್ತೀನಿ ಅಂತ ಹೊರಟು ಅಪ್ಪನಿಂದ ಬರೆ ಹಾಕಿಸಿಕೊಂಡಿದ್ದು, ಅದರ ಕಹಿ ನೆನಪು ಅವನನ್ನು ಹುಡುಗಿಯರ ಸಂಗ ಮಾಡದಂತೆ ತಡೆಯುತ್ತದೆ. ಆದರೆ ಹುಡುಗಿಯೊಬ್ಬಳ ಹುಡುಕಾಟ ಆತನ ಬದುಕನ್ನೇ ಬದಲಿಸುತ್ತೆ. ಆಕೆ ಯಾರು, ಅವಳ ಹಿನ್ನಲೆ, ಅವಳ್ಯಾಕೆ ಇವನನ್ನು ಟಾರ್ಗೆಟ್ ಮಾಡುತ್ತಾಳೆ, ಇದರ ಪರಿಣಾಮ ಏನಾಗುತ್ತೆ ಅನ್ನೋದು ಒಂದು ಏಳೆಯ ಸಾರಾಂಶವಾಗಿದೆ. ನಿರ್ದೇಶಕ ಶಿವತೇಜಸ್ ಪ್ರೀತಿ, ರೋಮಾನ್ಸ್, ಹಾಡು, ಫೈಟು, ಸೆಂಟಿಮೆಂಟ್ ಎಲ್ಲವನ್ನು ಸೇರಿಸಿರುವುದರಿಂದ ಎಲ್ಲರೂ ಕುಳಿತು ನೋಡುವಂತ ಚಿತ್ರವನ್ನು ಮಾಡಿದ್ದಾರೆ ಎನ್ನಬಹುದು. ಆಟ ತುಂಟಾಟದ ನಡುವೆ ಜೀವನ ಪಾಠಕ್ಕೂ ಜಾಗ ಕಲ್ಪಿಸಲಾಗಿದೆ, ಅದರಿಂದ ಕ್ಲೈಮಾಕ್ಸ್ ಎಂಥವರನ್ನು ಕಾಡುತ್ತದೆ. ಇಂತಹ ಪ್ರಯತ್ನದಲ್ಲಿ ನಿರ್ದೇಶಕರು ಗೆದ್ದಿದ್ದಾರೆ ಎನ್ನಬಹುದು.
ಸಹಜ ಅಭಿನಯದಿಂದ ನಾಯಕ ಕೃಷ್ಣ ಇಷ್ಟವಾಗುತ್ತಾರೆ. ನಿಶ್ವಿಕಾನಾಯ್ಡು, ಮೇಘಾಶೆಟ್ಟಿ ಇಬ್ಬರಿಗೂ ಸಮಾನ ಅವಕಾಶ ಸಿಕ್ಕಿದೆ. ಸಾಧುಕೋಕಿಲ, ರಂಗಾಯಣರಘು ಸೇರಿದಂತೆ ಅನೇಕ ಕಲಾವಿದರುಗಳ ಹಾಸ್ಯ ನಗು ತರಿಸುತ್ತದೆ. ಅರ್ಜುನ್‌ಜನ್ಯಾ ಹಾಡುಗಳಲ್ಲಿ ಎರಡು ಕೇಳಬಲ್. ಜ್ಯೂಡಸ್ಯಾಂಡಿ ಹಿನ್ನಲೆ ಸಂಗೀತ, ಶೇಖರ್‌ಚಂದ್ರ ಛಾಯಾಗ್ರಹಣ ಇದಕ್ಕೆ ಪೂರಕವಾಗಿದೆ. ತ್ರಿಕೋನ ಪ್ರೀತಿ ಕತೆಯಲ್ಲಿ ಸಂದೇಶದ ಜತೆಗೆ ಮನರಂಜನೆಯನ್ನು ಸವಿಯಬಹುದು.