ಅವತಾರಪುರುಷನಾಗಿ ಪ್ರಜ್ವಲ್ದೇವರಾಜ್*****
ನಾಯಕ ಪ್ರಜ್ವಲ್‌ದೇವರಾಜ್ ‘ಅಬ್ಬರ’ ಚಿತ್ರದಲ್ಲಿ ಮೂರು ಗೆಟಪ್‌ಗಳನ್ನು ಹಾಕಿಕೊಂಡಂತೆ, ಸರಿಸಮನಾಗಿ ಮೂವರು ನಾಯಕಿಯನ್ನು ಒಲಿಸಿಕೊಳ್ಳುತ್ತಾನೆ. ಅವರುಗಳ ಜೊತೆಗೆ ಮಾತುಕತೆ, ಹಾಡು, ಡ್ಯಾನ್ಸ್, ಹಾಸ್ಯ ಎಲ್ಲವು ಸೇರಿಕೊಂಡಿರುತ್ತದೆ. ಈ ಬಾರಿ ಮಾಸ್ ಆಗಿ ಮಿಂಚಿದ್ದಾರೆ. ಅರಿಯದೆ ತಪ್ಪು ಮಾಡಿದ ಅವನ ತಂದೆ ಅದನ್ನು ಸರಿಪಡಿಸಲು ಮತ್ತೋಂದು ತಪ್ಪು ಮಾಡುತ್ತಾನೆ. ಅದನ್ನು ಮಗನಾದವನು ಹೇಗೆ ಸರಿಪಡಿಸುತ್ತಾನೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಕಥೆಯಲ್ಲಿ ಅವನು ಸೂಪರ್ ಮ್ಯಾನ್ ಅಗುತ್ತಾನೆ. ಬಾಬಾ ಅವತಾರ ತಾಳುತ್ತಾನೆ. ಅದಕ್ಕೆಲ್ಲಾ ಕಾರಣ ೨೫ ವರ್ಷಗಳ ಹಿಂದಿನ ಸೇಡು ಆಗಿರುತ್ತದೆ. ಒಬ್ಬನೇ ವ್ಯಕ್ತಿ ಇಷ್ಟೆಲ್ಲಾ ಅವತಾರವೆತ್ತಿ ಎದುರಾಳಿಗಳಿಗೆ ಹೇಗೆ ಅವಾಂತರ ಮಾಡುತ್ತಾನೆ ಅನ್ನೋದು ಸಿನಿಮಾ ನೋಡಿದಾಗ ತಿಳಿಯುತ್ತದೆ.
ಸಾಹಿತಿ ಹಾಗೂ ನಿರ್ದೇಶಕ ರಾಮ್‌ನಾರಾಯಣ್ ನೋಡುಗರಿಗೆ ಇಷ್ಟವಾಗುವಂತಹ ಸನ್ನಿವೇಶಗಳನ್ನು ಸೃಷ್ಟಿಸಲು ಎಷ್ಟು ಶ್ರಮಪಟ್ಟಿದ್ದಾರೆಂಬುದು ತೆರೆ ಮೇಲೆ ಕಾಣಿಸುತ್ತದೆ. ಚಿತ್ರದಲ್ಲಿ ನಾಲ್ಕಾರು ಖಳನಾಯಕರು, ಎಣಿಸಲಾಗದಷ್ಟು ಪೋಷಕ ಪಾತ್ರಗಳು ಹೀಗೆ ಬೃಹತ್ ಕಲಾವಿದರ ಅಬ್ಬರ ಒಂದಡೆಯಾದರೆ, ಅದಕ್ಕೆ ತಕ್ಕಂತೆ ಒಂದರ ನಂತರ ಸಾಹಸಗಳು, ಮಸ್ತ್ ಡೈಲಾಗ್‌ಗಳು, ಜಬರ್‌ದಸ್ತ್ ಹಾಡುಗಳು ಇವೆಲ್ಲವು ಮತ್ತೋಂದು ಕಡೆ ಕಂಡುಬರುತ್ತದೆ. ಪ್ರಜ್ವಲ್‌ದೇವರಾಜ್ ಇಡೀ ಸಿನಿಮಾವನ್ನು ಆವರಿಸಿಕೊಂಡಿರುವುದರಿಂದ ಇವರ ಮಯ ಅಂತ ಹೇಳಬಹುದು. ನಾಯಕಿಯರಾದ ನಿಮಿತಾರತ್ನಾಕರ್, ಲೇಖಾಚಂದ್ರ ಮತ್ತು ರಾಜಶ್ರೀಪೊನ್ನಪ್ಪ ಚೆಂದ ಕಾಣಿಸುತ್ತಾರೆ. ಖಳರುಗಳಾಗಿ ರವಿಶಂಕರ್, ಶೋಭರಾಜ್, ಕೋಟೆಪ್ರಭಾಕರ್ ನೀಡಿದ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಮಾಸ್ ಪ್ರೇಕ್ಷಕರಿಗೆ ಹೇಳಿ ಮಾಡಿಸಿದಂತ ಚಿತ್ರವಾಗಿದೆ.