ಮದುವೆಯಾಗುವ ಹುಡುಗನ ಕಥೆ ವ್ಯಥೆ
‘ಮಿ.ಬ್ಯಾಚುಲರ್’ ಸಿನಿಮಾ ಹೇಳುವಂತೆ ಕಥಾನಾಯಕ ಚಿಕ್ಕವಯಸ್ಸಿನಲ್ಲೇ ಮದುವೆಯ ಬಗ್ಗೆ ಕನಸು ಕಟ್ಟಿಕೊಂಡಿರುತ್ತಾನೆ. ನೌಕರಿ ಇದ್ದರೆ ಮದುವೆ ಮಾಡಿಕೊಂಡು ನೆಮ್ಮದಿಯಾಗಿ ಜೀವನ ನಡೆಸಬಹುದು. ನನ್ನ ದೃಷ್ಟಿಯಲ್ಲಿ ಇದೊಂದು ಸಂಭ್ರಮ, ಸುಖಿಜೀವನ ಎನ್ನುವುದು ಆತನ ಗುರಿಯಾಗಿರುತ್ತದೆ ಆದರೆ ಮನೆಯಲ್ಲಿ ಕೆಲಸ ಸಿಕ್ಕವಷ್ಟೇ ಮದುವೆ ಮಾತು ಎನ್ನುತ್ತಿರುತ್ತಾರೆ. ಬಾರ್‌ನಲ್ಲಿ ಕೂತು ಮಾಲೀಕನ ಬಳಿ ತನ್ನ ನೋವನ್ನು ಹೇಳಿಕೊಳ್ಳುತ್ತಾನೆ. ಇವರ ಐಡಿಯಾದಂತೆ ಬ್ರೋಕರ್ ಮೊರೆ ಹೋಗುತ್ತಾನೆ. ಮುಂದೆ ಆಲ್ಬಮ್‌ದಲ್ಲಿದ್ದ ಹುಡುಗಿಯೊಬ್ಬಳನ್ನು ಇಷ್ಟಪಡುತ್ತಾನೆ. ಅಲ್ಲಿ ಭೇಟಿಯಾದ ಹುಡುಗಿ ನನಗೆ ವರ್ಜಿನ್ ಬೇಡ. ಅದನ್ನು ಕಳೆದುಕೊಂಡು ಬಂದರೆ ಒಪ್ಪಿಕೊಳ್ಳುವುದಾಗಿ ತಿಳಿಸುತ್ತಾಳೆ.
ಆಕೆಯ ಮಾತಿನಂತೆ ಅದನ್ನು ಕಳೆದುಕೊಳ್ಳಲು ಹೋಗಿ ಹಲವು ಫಜೀತಿಗೆ ಸಿಲುಕಿಕೊಳ್ಳುತ್ತಾನೆ. ಇದಕ್ಕೂ ಒಂದು ಪೂರ್ವಜರ ಶಾಪ ಕಾಡುತ್ತಿರುತ್ತದೆ. ಹೀಗೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಹೋಗಿ ನೋವನ್ನು ಅನುಭವಿಸುತ್ತಾನೆ. ಮುಂದೆ ವಾಹಿನಿಯಲ್ಲಿ ಕೆಲಸ ಮಾಡುವ ಪಲ್ಲವಿ ಒಂದು ಘಟನೆಯಲ್ಲಿ ಪರಿಚಯವಾಗಿ ಅದು ಪ್ರೀತಿಗೆ ತಿರುಗುತ್ತದೆ. ಇನ್ನೇನು ನಿಶ್ಚಿತಾರ್ಥ ಮಾಡಿಕೊಳ್ಳಬೇಕು ಎನ್ನುವಷ್ಟರಲ್ಲಿ ಮತ್ತೋಂದು ಎಡವಿಟ್ಟಿಗೆ ಬೀಳುತ್ತಾನೆ. ಕೊನೆಗೆ ಇಬ್ಬರನ್ನು ಎದುರಿಸಿ ಯಾರಿಗೆ ತಾಳಿ ಕಟ್ಟುತ್ತಾನೆ ಎನ್ನುವುದೇ ಚಿತ್ರದ ತಿರುಳು.
ಡಾರ್ಲಿಂಗ್‌ಕೃಷ್ಣ ಸಹಜ ಅಭಿನಯದಿಂದ ಎಲ್ಲರಿಗೂ ಇಷ್ಟವಾಗುತ್ತಾರೆ. ಜತೆಗೆ ಆಕ್ಷನ್‌ದಲ್ಲೂ ಮಿಂಚಿದ್ದಾರೆ. ನಾಯಕಿ ನಿಮಿತಾರತ್ನಾಕರ್ ಮುದ್ದಾಗಿ ಕಾಣಿಸುತ್ತಾರೆ. ಅತಿಥಿಯಾಗಿ ಕಾಣಿಸಿಕೊಂಡಿರುವ ಮಿಲನನಾಗರಾಜ್ ಪರವಾಗಿಲ್ಲ. ನಗಿಸಲು ಸಾಧುಕೋಕಿಲ, ಗಿರಿ, ಚಿಕ್ಕಣ್ಣ, ಖಳನಾಗಿ ಅಯ್ಯಪ್ಪ, ತಾಯಿಯಾಗಿ ಪವಿತ್ರಾಲೋಕೇಶ್ ಇವರೆಲ್ಲರೂ ಸಿನಿಮಾಗೆ ಸಾಥ್ ನೀಡಿದ್ದಾರೆ. ಮಣಿಕಾಂತ್‌ಕದ್ರಿ ಸಂಗೀತ ಕೆಲವೊಂದು ಕಡೆ ಗಮನ ಸೆಳೆದಿದೆ. ಹೀಗೆ ಆಕ್ಷನ್, ಹಾಸ್ಯ ಎರಡನ್ನು ಬೆರೆಸಿರುವ ನಿರ್ದೇಶಕ ರೆಡ್ಡಿಬಂಡಾರು ಶ್ರಮ ವಹಿಸಿರುವುದು ಪರದೆ ಮೇಲೆ ಕಾಣಿಸುತ್ತದೆ. ಮಿಲಿಂದ್ ರಾಸೊ ಸಿನಿಮಾಸ್ ಮತ್ತು ಶ್ರೀಚಂದ್ರ ಪ್ರೊಡಕ್ಷನ್ಸ್ ಸಂಸ್ಥೆಯು ಬಂಡವಾಳ ಹೂಡಿದೆ.