ದೆವ್ವದ ಜತೆ ನಟ ಭಯಂಕರನ ಆಟಗಳು
ಬಿಗ್ ಬಾಸ್ ವಿಜೇತ ಪ್ರಥಮ್ ನಟಿಸಿ ನಿರ್ದೇಶನ ಮಾಡಿರುವ ‘ನಟ ಭಯಂಕರ’ ಸಿನಿಮಾವು ಪ್ರಸ್ತುತ ಚಿತ್ರರಂಗದ ಒಳ ಹೊರಗುಗಳನ್ನು ತೆರೆದಿಡುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಬಹುದು. ಕಥೆಯಲ್ಲಿ ಅವನೊಬ್ಬ ಸೂಪರ್ ಸ್ಟಾರ್ ನಾಯಕ. ಅಭಿನಯಿಸಿದ ಚಿತ್ರಗಳೆಲ್ಲವೂ ಯಶಸ್ವಿಯಾಗಿದ್ದರಿಂದ ಸಹಜವಾಗಿ ನಿರ್ದೇಶಕರು, ನಿರ್ಮಾಪಕರು ಇವರ ಕಾಲ್‌ಶೀಟ್ ಪಡೆಯಲು ಬರುತ್ತಿರುತ್ತಾರೆ. ಆದರೆ ಈತ ಸ್ವಲ್ಪಮಟ್ಟಿಗೆ ತಿಕ್ಕಲು ಸ್ವಭಾವದವನು. ಹೆಚ್ಚು ಕಡಿಮೆಯಾದರೂ ತನ್ನೊಂದಿಗೆ ಚಿತ್ರ ಮಾಡುವ ತಂಡದವರನ್ನು ತನ್ನ ಕುಚೇಷ್ಟೆಯಿಂದ ಹೈರಾಣಾಗಿಸದೆ ಬಿಡಲಾರ. ಮುಂದೆ ಎಲ್ಲರಿಂದ ಹೊಗಳಿಸಿಕೊಂಡರೆ, ಅದೇ ಹಿಂದಿನಿಂದ ಎಲ್ಲರೂ ಶಾಪ ಹಾಕುವವರೇ ಹೆಚ್ಚು. ಇಂಥವನಿಗೆ ಕುರುಡಿ ದೆವ್ವದ ಕೈಯಲ್ಲಿ ಸಿಕ್ಕಿಹಾಕಿಕೊಂಡರೆ ಏನಾಗಬೇಡ ಎಂಬುದನ್ನು ಹಾಸ್ಯದ ಮೂಲಕ ತೋರಿಸುವ ಪ್ರಯತ್ನ ಮಾಡಲಾಗಿದೆ. ಇದರೊಂದಿಗೆ ಲವ್, ರೋಮ್ಯಾಂಟಿಕ್ ಹಾಡುಗಳು, ಸಾಹಸ ಹೀಗೆ ಒಂದಷ್ಟು ಮನರಂಜನಾತ್ಮಕ ಅಂಶಗಳು ಸೇರಿಕೊಂಡಿರುವುದರಿಂದ ನೋಡುಗರಿಗೆ ಮಜಾ ಕೊಡುತ್ತದೆ.
ಪ್ರಥಮ್ ಎರಡು ಜವಬ್ದಾರಿಯನ್ನು ಒಟ್ಟಿಗೆ ನಿಭಾಯಿಸಿದ್ದು, ತೆರೆ ಮೇಲೆ ಅವರ ಶ್ರಮ ಕಾಣಿಸುತ್ತದೆ. ನಾಯಕಿಯರಾದ ನಿಹಾರಿಕಾ, ಸುಶ್ಮಿತಾಜೋಶಿ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಕುರುಡಿ ದೆವ್ವವಾಗಿ ಚಂದನಾರಾಘವೇಂದ್ರ ಕೆಲವೊಂದು ಕಡೆ ಹೆದರಿಸುತ್ತಾರೆ. ನಗಿಸಲು ಓಂಪ್ರಕಾಶ್‌ರಾವ್, ಕುರಿಪ್ರತಾಪ್ ಇದ್ದಾರೆ. ವಿಭಿನ್ನ ನೋಟದಿಂದ ಮನಸೆಳೆದಿರುವುದು ಸಾಯಿಕುಮಾರ್ ಮತ್ತು ಶೋಭರಾಜ್. ಪ್ರದ್ಯೂತ್ತನ್ ಸಂಗೀತ ಪರವಾಗಿಲ್ಲ. ಉಪೇಂದ್ರ ಹಾಡಿರುವ ಟೈಟಲ್ ಟ್ರಾಕ್ ಚೆನ್ನಾಗಿ ಮೂಡಿಬಂದಿದೆ. ಸ್ವಾರಸ್ಯ ಸಿನಿ ಕ್ರಿಯೇಶನ್ಸ್ ಮೊದಲ ಬಾರಿ ಉತ್ತಮ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
****