ಮತ್ತೋಮ್ಮೆ ಸಾಯಿಕುಮಾರ್ ಪೋಲೀಸ್ ಕಥೆ
‘ಪೋಲೀಸ್ ಸ್ಟೋರಿ’ ಚಿತ್ರದಲ್ಲಿ ಡಿಸಿಪಿ ಅಗ್ನಿಯಾಗಿ ಮಿಂಚಿದ್ದ ಸಾಯಿಕುಮಾರ್, ಗ್ಯಾಪ್ ನಂತರ ಅಂತಹುದೆ ಪಾತ್ರವನ್ನು ‘ರಾಕ್ಷಸರು’ ಸಿನಿಮಾದಲ್ಲಿ ನಿಭಾಯಿಸಿದ್ದಾರೆ. ಕಥೆಯಲ್ಲಿ ದುರುಳರುಗಳಾದ ಖಾರದಪುಡಿ ಶೇಖರ, ಬಿಹಾರಿಲಾಲ್, ಗ್ಯಾಸ್ ಮುನಿ, ಕಿಲ್ಲರ್ ಜಾಕಿ ಮತ್ತು ಕ್ಯಾಬ್ ಚಾಲಕ ರಾಜೇಂದ್ರ ಇವರುಗಳು ಕ್ರಿಮಿನಲ್‌ಗಳಾಗಿದ್ದು, ಮನುಷ್ಯನ ಪ್ರಾಣ ಎಂದರೆ ಇರುವೆಗೆ ಸಮಾನ ಅಂದುಕೊಂಡಿರುತ್ತಾರೆ. ಮನುಷ್ಯನ ಮೇಲೆ ಕನಿಕರ ತೋರದೆ ಸಾಯಿಸುತ್ತಾರೆ, ಹೆಣ್ಣು ಎಂಬುದನ್ನು ನೋಡದೆ ಭೀಕರವಾಗಿ ಅತ್ಯಾಚಾರವೆಸಗಿ, ಕೊಲೆ ಮಾಡುತ್ತಾರೆ. ಅದರಲ್ಲೂ ಜಾಕಿ ಬಾಂಬೆ ಮೂಲದವನಾಗಿದ್ದು, ಶ್ರೀಮಂತ ಉದ್ಯಮಿಗಳಿಗೆ ಮೂರು ಕಾಲ್ ಮಾಡುತ್ತಾನೆ. ಅದಕ್ಕೂ ಬಗ್ಗದಿದ್ರೆ ಹತ್ಯೆ ಮಾಡುತ್ತಾ ಬಂದಿರುತ್ತಾನೆ. ಅಲ್ಲಿ ಪೋಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಬೆಂಗಳೂರಿಗೆ ಬಂದಿರುತ್ತಾನೆ. ಮತ್ತೋಬ್ಬ ಬಿಹಾರಿದವ. ಇವರೆಲ್ಲರು ಕಾನೂನಿನಂತೆ ಶಿಕ್ಷೆಗೆ ಗುರಿಯಾಗಿ ಜೈಲು ಸೇರುತ್ತಾರೆ. ಮುಂದೆ ಜೈಲಿನಲ್ಲಿ ಯೋಜನೆ ರೂಪಿಸಿ ಸಿಬ್ಬಂದಿಯನ್ನು ಮರ್ಡರ್ ಮಾಡಿ ಪರಾರಿಯಾಗುತ್ತಾರೆ. ಇದರ ಕೇಸ್ ಡಿಸಿಪಿ ಅಗ್ನಿಗೆ ಬರುತ್ತದೆ.
ಮುಂದೆ ಪೋಲೀಸರು ಹಾಗೂ ರಾಕ್ಷಸರ ನಡುವಿನ ಹೋರಾಟದಲ್ಲಿ ಮೂರು ಅಧಿಕಾರಿಗಳು ಬಲಿಯಾಗುತ್ತಾರೆ. ಅಲ್ಲದೆ ಅಗ್ನಿಯ ಮಗಳು ಕೂಡ ಇವರ ಕೈಗೆ ಸಿಕ್ಕು ಆಹಾರವಾಗುತ್ತಾಳೆ. ಐದು ಮಂದಿ ರಾಕ್ಷಸರನ್ನು ಅಗ್ನಿ ಹೇಗೆ ಕಟ್ಟಿಹಾಕುತ್ತಾರೆ ಎನ್ನುವುದು ಕ್ಲೈಮಾಕ್ಸ್. ಸೆಂಟಿಮೆಂಟ್ ಚಿತ್ರಗಳಿಗೆ ಕತೆ ಬರೆಯುವುದರಲ್ಲಿ ಹೆಸರು ಮಾಡಿರುವ ಅಜಯ್‌ಕುಮಾರ್ ಈ ಬಾರಿ ಹೊಸತು ಎನ್ನುವಂತೆ ಗಟ್ಟಿ ಗುಂಡಿಗೆ ಇರುವವರು ಇಷ್ಟಪಡುವ ಕಥೆಯನ್ನು ಬರೆದಿರುತ್ತಾರೆ. ಹೊಸ ಪ್ರತಿಭೆಗಳಾದ ಪುನೀತ್, ಜಿತಿನ್ ಆವಿ, ಕಿರಣ್, ಸುನಿಲ್, ರಿಶಿಕಾರಾಜ್, ಹರ್ಷಿತ, ಚೈತ್ರಾ ಮುಂತಾದವರು, ಹಿರಿಯರಾದ ಸುಮನ್, ಅನುಪಮ್‌ಖೇರ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಎಮಿಲ್ ಸಂಗೀತ, ಜನಾರ್ದನಬಾಬು ಕ್ಯಾಮಾರ ಇದಕ್ಕೆ ಪೂರಕವಾಗಿದೆ.
***