ಸಂಬಂದಗಳ ಸಂಕೋಲೆ ಟೆಂಪರ್*****
‘ಟೆಂಪರ್’ ಅಂದರೆ ಉದ್ವೇಗಗೊಳ್ಳುವುದು. ಹಾಗೆಯೇ ‘ಟೆಂಪರ್’ ಚಿತ್ರದ ಕಥೆಯಲ್ಲಿ ತನ್ನೆದುರು ಯಾವುದೇ ಸಂದರ್ಭದಲ್ಲಿ ಮೋಸ, ತಪ್ಪು, ಅನ್ಯಾಯ ಕಂಡರೆ ಸುಮ್ಮನಾಗದೆ ಅದನ್ನು ಖಂಡಿಸಿ ಮುಂದೆ ಸಾಗುತ್ತಾನೆ. ಕುಟುಂಬದೊಂದಿಗೆ ಉತ್ತಮ ಬಾಂದವ್ಯ, ಗ್ಯಾರೇಜ್ ಗೆಳೆಯರ ಜೊತೆ ಒಡನಾಟ, ಪ್ರೀತಿಯಲ್ಲಿ ಭಾಗಿ, ಕೊನೆಗೆ ದುಷ್ಟರ ಅಟ್ಟಹಾಸವನ್ನು ಸದೆಬಡಿಯುವ ಅಂಶಗಳು ಚಿತ್ರವು ಒಳಗೊಂಡಿದೆ. ಹುಡುಗನಾಗಿದ್ದಾಗಲೂ ಮನೆಯವರ ಮುದ್ದಿನ ಮಗ, ಹೊರಗಡೆ ಪೋರನಾಗಿ ತಾನು ಮಾಡಿದ್ದು ಸರಿ ಎಂದು ವಾದಿಸುತ್ತಿರುತ್ತಾನೆ. ದೊಡ್ಡವನಾದರೂ ಅದೇ ಗತ್ತನ್ನು ಉಳಿಸಿಕೊಂಡು ಸ್ನೇಹಿತರೊಂದಿಗೆ ಗ್ಯಾರೇಜಿನಲ್ಲಿ ಕೆಲಸ ಮಾಡಿಕೊಂಡು ಅಮ್ಮ, ಅಪ್ಪ ಹಾಗೂ ಮುದ್ದಿನ ತಂಗಿಗೆ ಅಣ್ಣನಾಗಿ ಎಲ್ಲರಿಗೂ ಇಷ್ಟವಾಗಿರುತ್ತಾನೆ.
ಹೀಗಿರುವಾಗ ಊರಿನ ಜಮಿನ್ದಾರ ಮತ್ತು ಆತನ ತಮ್ಮ ನೀಡುವ ಉಪಟಳಗಳಿಂದ ಇವರುಗಳನ್ನು ಸದೆಬಡಿಯಲು ಸಿಡಿದೇಳುತ್ತಾನೆ. ಇದರ ಮಧ್ಯೆ ಗೌಡರ ಮಗಳ ಮೇಲೆ ಪ್ರೀತಿ ಚಿಗುರುತ್ತದೆ. ಮುಂದೆ ತನ್ನ ಕುಟುಂಬ, ಪ್ರೇಯಸಿಯನ್ನು ಯಾವ ರೀತಿ ಕಾಪಾಡಿಕೊಳ್ಳುತ್ತಾನೆ ಎಂಬುದನ್ನು ಚಿತ್ರ ನೋಡಿದರೆ ತಿಳಿಯುತ್ತದೆ. ನಾಯಕ ಆರ್ಯನ್‌ಸೂರ್ಯ ಹೊಸಬನಾಗಿದ್ದರೂ ಎಲ್ಲೂ ಕೊರತೆಯಾಗದಂತೆ ಆಕ್ಷನ್‌ದಲ್ಲಿ ಮಿಂಚಿದ್ದಾರೆ. ನಾಯಕಿ ಕಾಶಿಮಾ ನಟನೆಗಿಂತ ಹಾಡಿನಲ್ಲಿ ಗ್ಲಾಮರ್ ತೋರಿಸಿದ್ದಾರೆ. ಸ್ನೇಹಿತರುಗಳಾಗಿ ಧನುಯಲಗಚ್, ಮಜಾಟಾಕೀಸ್ ಪವನ್‌ಕುಮಾರ್, ಖಳನಾಗಿ ಯತಿರಾಜ್, ಎಂದಿನ ಗತ್ತಿನಲ್ಲಿ ಬಲರಾಜವಾಡಿ ಕಾಣಿಸಿಕೊಂಡಿದ್ದಾರೆ. ಸಾಹಿತಿ ಮಂಜುಕವಿ ಮೊದಲಬಾರಿ ನಿರ್ದೇಶನ ಮಾಡಿ ಚಿತ್ರಕಥೆಯನ್ನು ಚೆನ್ನಾಗಿ ಹೊಸೆದಿದ್ದಾರೆ. ಆರ್.ಹರಿಬಾಬು ಸಂಗೀತದ ಹಾಡುಗಳು ಆಲಿಸಬಹುದು.