ಪ್ರಸ್ತುತ ವ್ಯವಸ್ಥೆಯೇ ಪ್ರಜಾರಾಜ್ಯದ ಕಥನ **** ಸಂವಿಧಾನದಲ್ಲಿ ಶಿಕ್ಷಣದ ಹಕ್ಕು ಕಲ್ಪಿಸಲಾಗಿದೆ. ಆದರೆ ಆರೋಗ್ಯದ ಬಗ್ಗೆ ಕಾಳಜಿವಹಿಸಿಲ್ಲ. ಹೀಗಾಗಿ ಸಾವಿರಕ್ಕೆ ಮತ ಮಾರಿಕೊಳ್ಳದೆ, ಉಚಿತ ಆರೋಗ್ಯ ಕಲ್ಪಿಸಿ ಮತ ಹಾಕುತ್ತೇವೆ ಎಂದು ಜಾಗೃತಿ ‘ಪ್ರಜಾರಾಜ್ಯ’ ಚಿತ್ರದಲ್ಲಿ ಮೂಡಿಸಲಾಗಿದೆ. ದೇಶದಲ್ಲಿ ಪ್ರತಿಯೊಬ್ಬ ಪ್ರಜೆಗೂ ಬದುಕುವ ಹಕ್ಕಿದೆ. ಅವನಿಗೆ ಸಿಗಬೇಕಾದ ಮೂಲಭೂತ ಸೌಲಭ್ಯಗಳನ್ನು ದೊರಕಿಸಿಕೊಳ್ಳಲು ಹೋರಾಡುವ ಸ್ವಾತಂತ್ರವೂ ಇದೆ. ಎಲ್ಲರಿಗೂ ಒಳಿತಾಗಬೇಕೆಂದು ಸಮಾನ ಮನುಷ್ಯರೆಲ್ಲ ಸೇರಿ ಮೌನವಾಗಿ ಪ್ರತಿಭಟಿಸಿ ನ್ಯಾಯ ಕೇಳಲು ಮುಂದಾಗುತ್ತಾರೆ. ಇದರಿಂದ ಆಡಳಿತ ಪಕ್ಷಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಗೃಹಮಂತ್ರಿಗಳು ಎಲ್ಲರನ್ನು ಬಂದಿಸಿ ಎಂದು ಆದೇಶಿಸುತ್ತಾರೆ. ಅಷ್ಟಕ್ಕೂ ಐವರು ಯಾರು ಎಂಬುದಕ್ಕೆ ಹಿನ್ನಲೆ ಕಥೆ ತೆರೆದುಕೊಳ್ಳುತ್ತದೆ. ಜತೆಗೆ ಆಡಳಿತ ಪಕ್ಷ, ವಿರೋಧ ಪಕ್ಷದ ಗಲಾಟೆಗಳು, ಇದರಲ್ಲಿ ಯಾರು ಕುಮ್ಮಕ್ಕು ಕೊಡುತ್ತಾರೆ ಎನ್ನುವ ಅಂಶಗಳು ಚೆನ್ನಾಗಿ ಮೂಡಿಬಂದಿದೆ. ಆರೋಗ್ಯ, ಶಿಕ್ಷಣ, ವಸತಿ, ಆಹಾರ ಎಲ್ಲರಿಗೂ ಸಿಗಬೇಕು ಎನ್ನುವ ಕಲ್ಪನೆಯನ್ನು ಮುಂದಿಟ್ಟುಕೊಂಡು ಕಥೆ ಹೆಣೆಯಲಾಗಿದೆ. ಇದು ಸಿಗದಿದ್ದರೆ ಮುಂದೆ ಏನು ಮಾಡಬೇಕು ಎನ್ನುವುದನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ.
ನಿರ್ಮಾಪಕರು ಆಗಿರುವ ಡಾ.ವರದರಾಜ್ ಕಥೆ,ಚಿತ್ರಕಥೆ, ಸಂಭಾಷಣೆ ಹಾಗೂ ವಿದ್ಯಾವಂತ ಧಮೇಂದ್ರ ಹೆಸರಿನಲ್ಲಿ ಸತ್ಯದ ಪರ ನಿಲ್ಲುವ ಯುವಕನಾಗಿ ಕಾಣಿಸಿಕೊಂಡಿದ್ದಾರೆ. ಟಿ.ಎಸ್.ನಾಗಭರಣ, ದೇವರಾಜ್, ಸುಧಾರಾಣಿ, ಅಚ್ಯುತಕುಮಾರ್, ಸುಧಾಬೆಳವಾಡಿ, ತಬಲನಾಣಿ, ಸಂಪತ್, ಮೈತ್ರೇಯಾ ಮುಂತಾದವರ ದಂಡೇ ಇರಲಿದ್ದು, ಎಲ್ಲರೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಿರ್ದೇಶಕ ವಿಜಯ್‌ಭಾರ್ಗವ್ ಶ್ರಮ ಪರದೆ ಮೇಲೆ ಕಾಣಿಸುತ್ತದೆ. ವಿಜೇತ್‌ಮಂಜಯ್ಯ ಸಂಗೀತ, ರಾಕೇಶ್.ಸಿ.ತಿಲಕ್ ಛಾಯಾಗ್ರಹಣ ಉತ್ತಮವಾಗಿದೆ.
****