ಕಾಡಿನಲ್ಲಿರುವವರ ಕಥೆ ವ್ಯಥೆ ****
‘ಆಕ್ಟ್ ೧೯೭೮’ ನಿರ್ದೇಶನ ಮಾಡಿದ್ದ ಮಂಸೋರೆ ಈ ಬಾರಿ ನಮ್ಮ ಕೆಟ್ಟ ವ್ಯವಸ್ಥೆಯಿಂದಾಗಿ ನಲುಗಿದ ಕುಟುಂಬವೊಂದರ ಕಥನವನ್ನು ೧೯.೨೦.೨೧’ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ವಿಧಿ ೧೯ರಲ್ಲಿ ಹೇಳಿರುವಂತೆ ಸ್ವಾತಂತ್ಯಕ್ಕಾಗಿ, ೨೦ರಲ್ಲಿ ಒಂದು ತಪ್ಪಿಗೆ ಅಪರಾಧದ ತೀವ್ರತೆಗಿಂತಲೂ ಹೆಚ್ಚು ಪ್ರಮಾಣದ ಶಿಕ್ಷೆ ವಿಧಿಸುವಂತಿಲ್ಲ. ಕೊನೆಯದಾಗಿ ವಿಧಿ ೨೧ರ ಪ್ರಕಾರ ಮನುಷ್ಯನಿಗೆ ಬದುಕುವ ಹಕ್ಕು ಇದೆ. ಈ ಮೂರು ಹಕ್ಕುಗಳನ್ನು ಅನುಭವಿಸುವ ಅವಕಾಶ ಕೇಳಿದ್ದಕ್ಕಾಗಿ ಒಬ್ಬ ಅಮಾಯಕ ಮತ್ತು ಆತನ ಕುಟುಂಬವನ್ನು ಹಿಂಸಿಸಿದನ್ನು ಚಿತ್ರದಾಖಲೆಯ ರೂಪದಲ್ಲಿ ಚೆನ್ನಾಗಿ ಕಟ್ಟಿಕೊಡಲಾಗಿದೆ.
ನಕ್ಸಲರೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಬಂಧನಕ್ಕೊಳಗಾಗಿದ್ದ ಕಥಾನಾಯಕ ವಿಠಲ ಮಲೆಕುಡಿ ಜೀವನದಲ್ಲಿ ನಡೆದ ಘೋರ ದುರಂತವಿದು. ಕೋಳ ಹಾಕಿಕೊಂಡು ಪರೀಕ್ಷೆ ಬರೆದು ದೇಶದಾದ್ಯಂತ ಸುದ್ದಿಯಾಗಿ, ಈ ನಡುವೆ ಅವನು ಅನುಭವಿಸಿದ ಮಾನಸಿಕ, ದೈಹಿಕ ಕಷ್ಟಗಳನ್ನು ಚೆಂದವಾಗಿ ತೋರಿಸಲಾಗಿದೆ. ಭಾರತ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ವ್ಯವಸ್ಥೆಯೊಳಗಿರುವ ಒಂದು ವರ್ಗ ತಾವು ಮಾಡುತ್ತಿರುವುದು, ಮಾಡಿರುವುದು ತಪ್ಪು ಎಂಬ ಅರಿವಿದ್ದರೂ ಅದರ ಬಗ್ಗೆ ಸ್ಥಿತಪ್ರಜ್ಘರಂತೆ ವರ್ತಿಸುವವರ ಆತ್ಮಸಾಕ್ಷಿಗೆ ಸವಾಲೊಡ್ಡುವಂತಹ ಚಿತ್ರಗಳ ಪಟ್ಟಿಯಲ್ಲಿ ಇದು ನಿಲ್ಲುತ್ತದೆ. ಕಾಡು ಜನರ ಅಸಹಾಯಕತೆ, ಸ್ಥಳೀಯ ರಾಜಕಾರಣಿಗಳ ದುರಾಸೆ, ಅಧಿಕಾರಿಗಳ ಬೇಜವಬ್ದಾರಿತನ ಎಲ್ಲವು ಚಿತ್ರದಲ್ಲಿ ಬೇರೂರಿದೆ. ಇವುಗಳನ್ನು ಪರಿಚಯಿಸುತ್ತಲೇ ಆತನ ಸಂಘರ್ಷದ ಬದುಕನ್ನು ತೆರೆದಿಡಲಾಗಿದೆ.
ಮುಖ್ಯ ಪಾತ್ರಧಾರಿ ಶೃಂಗ ಹೆಚ್ಚು ಮಾತನಾಡದೆ ಕೇವಲ ಕಣ್ಣಿನಲ್ಲೇ ತನ್ನ ಅಭಿನಯವನ್ನು ನಿರೂಪಿಸಿದ್ದಾರೆ. ಗಾಯಕಿ ಎಂ.ಡಿ.ಪಲ್ಲವಿ, ಸಂಪತ್‌ಮೈತ್ರಿಯಾ, ಪ್ರಿಯಾಶಠಮರ್ಶನ, ರಾಜೇಶ್‌ನಟರಂಗ, ವೆಂಕಟೇಶ್‌ಪ್ರಸಾದ್ ಮುಂತಾದವರು ತಮಗೆ ನೀಡಿದ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅರ್ಥಪೂರ್ಣ ಸಂಭಾಷಣೆಗಳು ಪ್ಲಸ್ ಪಾಯಿಂಟ್ ಆಗಿದೆ. ಬಿಂದುಮಾಲಿನಿ-ರೋಣದಬಕ್ಕೇಶ್ ಸಂಗೀತ, ಶಿವು-ಬಿ.ಕೆ.ಕುಮಾರ್ ಛಾಯಾಗ್ರಹಣ ಇವೆಲ್ಲವೂ ಪೂರಕವಾಗಿದೆ. ಇತ್ತೀಚೆಗೆ ಬರುತ್ತಿರುವ ಸಿನಿಮಾಗಳ ಪೈಕಿ ಈ ಸಿನಿಮಾವು ಎಲ್ಲದವನ್ನು ಮುಂದೆ ತಳ್ಳಿಕೊಂಡು ಹೋಗುವ ಛಾತಿ ಇದಕ್ಕೆ ಲಭಿಸಿದೆ ಎಂದರೆ ತಪ್ಪಾಗಲಾರದು. ಹಿಂದಿನ ಸಿನಿಮಾಗಳಲ್ಲಿ ಸೋತುಹೋಗಿದ್ದ ನಿರ್ಮಾಪಕ ದೇವರಾಜ್‌ಗೆ ಇದರಿಂದ ಎಲ್ಲವನ್ನು ವಾಪಸ್ಸು ಪಡೆಯುತ್ತಾರೆ ಎಂಬುದು ನಮ್ಮೆಲ್ಲರ ಆಶಯವಾಗಿದೆ.
****