Kabzaa.Film Reviews

Friday, March 17, 2023

300

 

ಕಬ್ಜ: ಪ್ರೇಕ್ಷಕರ ಮನಸ್ಸನ್ನು ಕಬ್ಜ ಮಾಡಿದ ಚಿತ್ರ 4/5 ****

 

ಭೂಗತ ಲೋಕದ ಕತೆ ಎನ್ನುವ ಪ್ರಚಾರದೊಂದಿಗೇನೇ ತೆರೆಗೆ ಬಂದ ಸಿನಿಮಾ. ಆದರೆ ಡಾನ್​ಗಳ ಅಬ್ಬರದ ನಡುವೆ ಈ ಸಿನಿಮಾ ಬೇರೇನೇನಲ್ಲ ಹೇಳಿದೆ ಎನ್ನುವ ಕಾರಣಕ್ಕೆ ಕುತೂಹಲ ಮೂಡಿಸಿದೆ.

 

ಉತ್ತರದ ಸ್ವಾತಂತ್ರ್ಯ ಹೋರಾಟಗಾರನ ಕುಟುಂಬದ ಕತೆ. ಸ್ವಾತಂತ್ರ್ಯ ಹೋರಾಟದಲ್ಲಿ ಪತಿಯನ್ನು ಕಳೆದುಕೊಂಡ ಪತ್ನಿ ಇಬ್ಬರು ಮಕ್ಕಳೊಂದಿಗೆ ಕರ್ನಾಟಕಕ್ಕೆ ಬರುತ್ತಾರೆ. ಇಬ್ಬರು ಮಕ್ಕಳನ್ನು ಉತ್ತಮ ರೀತಿಯಲ್ಲಿ ಬೆಳೆಸಿ ದೊಡ್ಡವರನ್ನಾಗಿಸುತ್ತಾರೆ. ಹಿರಿಯ ಪುತ್ರ ಸಂಕೇಶ್ವರನ ಕೊಲೆಯ ಬಳಿಕ ಅರ್ಕೇಶ್ವರ ಅನ್ಯಾಯದ ವಿರುದ್ಧ ಹೋರಾಡಲು ಆಯುಧವನ್ನು ಕೈಗೆತ್ತಿಕೊಳ್ಳುತ್ತಾನೆ. ಮುಂದೇನೇನಾಗುತ್ತದೆ ಎನ್ನುವುದು ಚಿತ್ರದ ಕತೆ.

ಡಾನ್ ಪಾತ್ರವಾಗಿದ್ದರೂ ಅಮ್ಮನ ಪ್ರೀತಿಯ ಪುತ್ರನಾಗಿ, ಅಣ್ಣನ ಮೆಚ್ಚಿನ ತಮ್ಮನಾಗಿ, ಪತ್ನಿಗೆ ಪತಿಯಾಗಿ ಉಪ್ಪಿಯ ಅಭಿನಯ ಅದ್ಭುತ. ಶ್ರೀಯಾ ಶರಣ್ ರಾಜಕುಮಾರಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅರ್ಕೇಶ್ವರನ ಅಣ್ಣನಾಗಿ ಸುನೀಲ್ ಪುರಾಣಿಕ್ ಕಾಣಿಸಿದ್ದಾರೆ. ಬೆಚ್ಚಿ ಬೀಳಿಸುವ ಖಳ ಪಾತ್ರಗಳಲ್ಲಿ ಕನ್ನಡದವರೇ ಆದ ನೀನಾಸಂ ಅಶ್ವತ್ಥ್ ಅವರ ಪಾತ್ರ ಹೆಚ್ಚು ಗಮನ ಸೆಳೆಯುತ್ತದೆ.

 

ಪೊಲೀಸ್ ಅಧಿಕಾರಿ ಭಾರ್ಗವ್ ಭಕ್ಷಿಯಾಗಿ ಸುದೀಪ್ ನೀಡುವ ಎಂಟ್ರಿ ಅಮೋಘ. ಚಿತ್ರದ ಕೊನೆಯಲ್ಲಿ ಶಿವಣ್ಣನ ಎಂಟ್ರಿ, ಕಣ್ಣಲ್ಲೇ ಕೊಲ್ಲುವ ನೋಟ ಮತ್ತೊಂದು ಆಕರ್ಷಣೆಯಾಗಿದೆ. ಸ್ವಾತಂತ್ರ್ಯಪೂರ್ವದ ಕತೆಯಲ್ಲಿನ ಒಂದೊಂದು ಪಾತ್ರಗಳನ್ನು ಕಟ್ಟಿದ ರೀತಿ ಅದ್ಭುತವಾಗಿದೆ. ಬಹದ್ದೂರ್ ರಾಜಮನೆತನದ ದೊರೆಯಾಗಿ ಮುರಳಿ ಶರ್ಮ, ಪೊಲೀಸ್ ಅಧಿಕಾರಿಯಾಗಿ ಬರುವ ಪ್ರಮೋದ್ ಶೆಟ್ಟಿ ಮೊದಲಾದ ಪಾತ್ರಗಳು ಪ್ರೇಕ್ಷಕರಿಗೆ ಸರ್ಪ್ರೈಸ್

 ನೀಡುವಂತೆ ತಯಾರಾಗಿವೆ. ಇನ್ನಷ್ಟು ಪಾತ್ರಗಳ ಬಿಲ್ಡಪ್​ನಲ್ಲೇ ಮುಂದಿನ ಭಾಗಕ್ಕೆ ಕಾಯುವಂತೆ ಮಾಡಿವೆ.

 

ಚಿತ್ರದ ಟೀಸರ್ ಬಿಡುಗಡೆ ಬಳಿಕ ನಿರ್ದೇಶಕ ಆರ್ ಚಂದ್ರು ಕೆಜಿಎಫ್​ನಂಥ ಚಿತ್ರ ಮಾಡಿದ್ದಾರೆ ಎನ್ನುವ ಆಪಾದನೆ ಇತ್ತು. ಆದರೆ ಕಬ್ಜ ಬಿಡುಗಡೆ ಬಳಿಕ ಆ ದೂರಿನಿಂದ ದೂರವಾದ ಹಾಗಿದೆ. ಸಂಗೀತ ನಿರ್ದೇಶಕ ರವಿಬಸ್ರೂರು ಸೇರಿದಂತೆ ಕೆಜಿಎಫ್​ನ ಒಂದಷ್ಟು ತಾಂತ್ರಿಕ ವರ್ಗ ಇಲ್ಲಿದೆ ಎನ್ನುವುದು ಬಿಟ್ಟರೆ ಬೇರೆ ಹೋಲಿಕೆಗಳೇನಿಲ್ಲ. ಇಲ್ಲಿಯೂ ಒಬ್ಬ ಹಳೆಯ ಕಾಲದ ಡಾನ್​ ಕತೆ ಹೇಳಲಾಗಿದೆ ಎನ್ನುವುದೊಂದೇ ಸಾಮ್ಯತೆ. ಆದರೆ ಅರ್ಕೇಶ್ವರನ ಪಾತ್ರದ ಹಿನ್ನೆಲೆಯೇ ಬೇರೆ. ಸ್ವಾತಂತ್ರ್ಯಪೂರ್ವ ಕತೆಯನ್ನು ಹೊಸೆದಿರುವ ನಿರ್ದೇಶಕ ಚಂದ್ರುವಿನ ಜಾಣ್ಮೆ ಪ್ರಶಂಸಾರ್ಹ. ಕತೆಯಲ್ಲಿನ ಈ ವೈಶಿಷ್ಟ್ಯತೆಯೇ ಚಿತ್ರದ ಮುಂದಿನ ಭಾಗದ ಬಗ್ಗೆ ಕುತೂಹಲ ಮೂಡಿಸಲು ಕಾರಣವಾಗಿದೆ.

  

Copyright@2018 Chitralahari | All Rights Reserved. Photo Journalist K.S. Mokshendra,