ಪ್ರೀತಿಲಿ ನಂಬಿಕೆ ಇರಬೇಕು, ಮೋಸ ಆಗಬಾರದು
****
ಪ್ರೀತಿಲಿ ನಂಬಿಕೆ ಕಳೆದುಕೊಂಡೆರೆ, ಮತ್ತೋಂದು ಕಡೆ ಬದುಕಲ್ಲಿ ಮೋಸವಾದರೆ ಏನು ಆಗುತ್ತದೆ ಎಂಬುದನ್ನು ‘ಒಂದೊಳ್ಳೆ ಲವ್ ಸ್ಟೋರಿ’ ಚಿತ್ರದಲ್ಲಿ ಚೆನ್ನಾಗಿ ನಿರೂಪಣೆ ಮಾಡಿದ್ದಾರೆ. ಹುಡುಗಿ, ಹಣ, ಅಂತಸ್ತು ಬರುತ್ತೆ ಹೋಗುತ್ತೆ. ಆದರೆ ಸಮಯ ಅನ್ನುವುದು ಒಂದು ಬಾರಿ ಹೋದರೆ ಮತ್ತೆ ಸಿಗುವುದಿಲ್ಲವೆಂದು ಅಪ್ಪ ಮಗ ಹನಿ(ಅಶ್ವಿನ್)ಗೆ ಬುದ್ದಿವಾದ ಹೇಳುತ್ತಾರೆ. ಜೀವನ ಕತ್ತಲು ಆಗಿದೆ. ಬದುಕೇ ಬೋರ್ ಆಗಿದೆ. ಸುಖ-ಹುಕ್ಕಾ-ನಶೆಯಲ್ಲೆ ಟೈಂ ಪಾಸ್ ಮಾಡುತ್ತಿದ್ದೇನೆಂದು ಜೆಸ್ಸಿ(ಧನುಶ್ರೀ) ಗೆಳತಿ(ನಿಶಾಹೆಗಡೆ)ಗೆ ಹೇಳುತ್ತಾಳೆ. ಹೀಗಿರುವಾಗ ಹನಿ ಮತ್ತು ಜೆಸ್ಸಿ ವಿಚಿತ್ರ ಸಂದರ್ಭದಲ್ಲಿ ಭೇಟಿಯಾಗುತ್ತಾರೆ.
ಪ್ರೀತಿ ನೋವಿಗೆ ಕೊನೆ ಇಲ್ಲ. ಅದು ಸಿಗೋಕೆ ಕಾರಣವಿರುತ್ತದೆ. ಆದರೆ ಬಿಟ್ಟು ಹೋಗೋದಕ್ಕೆ ಕಾರಣ ಬೇಕಾಗಿಲ್ಲವೆಂದು ಆತ ಹೇಳುತ್ತಾನೆ. ಬದುಕಲ್ಲಿ ಗಂಡಸರನ್ನು ನಂಬಬಾರದು. ನಿನ್ನ ಬದುಕಿನಲ್ಲಿ ಹೆಣ್ಣಿನ ಸಮಸ್ಯೆ, ನನ್ನ ಬದುಕಲ್ಲಿ ಗಂಡಸಿನ ಶೋಷಣೆಯನ್ನು ಎದುರಿಸಿದ್ದೇನೆಂದು ಆಕೆ ರೋಷ ಕಾರುತ್ತಾಳೆ. ಹೀಗೆ ಇಬ್ಬರ ಕಥೆಯು ಒಂದೊಂದು ಟ್ರಾಕ್‌ದಲ್ಲಿ ಸಾಗುತ್ತದೆ. ಒಂದು ಹಂತದಲ್ಲಿ ದೂರದ ಪ್ರಯಾಣ ಕೈಗೊಂಡಾಗ ಅಲ್ಲಿ ಒಂದಷ್ಟು ಘಟನೆಗಳು ನೆಡೆಯುತ್ತದೆ. ಅದು ಎಂತಹುದು? ಮುಂದೆ ಇಬ್ಬರದು ಏನಾಯಿತು ಎಂಬುದನ್ನು ತಿಳಿಯಲು ಚಿತ್ರಮಂದಿರಕ್ಕೆ ಬರಬೇಕು.
ಕಥೆ,ಚಿತ್ರಕಥೆ ಬರೆದು ನಾಯಕನಾಗಿ ಅಭಿನಯಿಸಿರುವ ಅಶ್ವಿನ್ ಭರವಸೆಯ ನಟನ ಸಾಲಿಗೆ ಸೇರಿಕೊಳ್ಳುತ್ತಾರೆ. ಬಿಗ್ ಬಾಸ್ ಖ್ಯಾತಿಯ ಧನುಶ್ರೀ ನಾಯಕಿಯಾಗಿ ಸದಾ ಕುಡಿತದ ಅಮಲಿನಲ್ಲಿದ್ದರೂ ಚೆಂದ ಕಾಣಿಸುತ್ತಾರೆ. ನಿಶಾಹೆಗಡೆ ಅವರಿಂದ ಒಂದಷ್ಟು ಎರಡರ್ಥದ ಸಂಭಾಷಣೆಗಳನ್ನು ಹೇಳಿಸಿದ್ದರೂ ಮುಜುಗರ ತರೋಲ್ಲ. ಗೆಳಯನಾಗಿ ಕೈಲಾಸ್‌ಪಾಲ್ ನಾಯಕನಿಗೆ ಸರಿಸಾಟಿಯಾಗಿ ಸೈ ಅನಿಸಿಕೊಳ್ಳುತ್ತಾರೆ. ಮಾಜಿ ಲವರ್ ಆಗಿ ವಿಂದುಜಾ ಸ್ವಲ್ಪ ಹೊತ್ತು ಬರುತ್ತಾರೆ. ಮತ್ತು ನಿರ್ಮಾಪಕ ನಿರಂಜನ್‌ಬಾಬು ನಾಯಕನ ತಂದೆಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಕೆಎಸ್‌ಜಿ ವೆಂಕಟೇಶ್,ಮಲ್ಲುಜಮಖಂಡಿ, ಮಮತಾ ಮುಂತಾದವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ವಾಸುಕಿ ವೈಭವ್ ಗಾಯನದ ‘ಹೇಳು ಬಾ ಕಾರಣ’ ಕೇಳಲು ಇಂಪಾಗಿದ್ದು, ಆಕಾಶ್‌ಜಾದವ್ ಸಂಗೀತ ಸಂಯೋಜಿಸಿದ್ದಾರೆ. ವಿಜಿಯೇಂದ್ರಜೋಡಿದಾರ್ ತೂಕದ ಸಂಭಾಷಣೆ ಪ್ಲಸ್ ಪಾಯಿಂಟ್ ಆಗಿದೆ. ಚಿಕ್ಕಮಗಳೂರು, ಮಂಗಳೂರು, ಕೇರಳ ಸುಂದರ ತಾಣಗಳು ಕಣ್ಣಿಗೆ ತಂಪುಕೊಡುತ್ತದೆ. ಒಟ್ಟಾರೆ ಸಿನಿಮಾವು ಪೈಸಾ ವಸೂಲ್ ಎನ್ನಬಹುದು.
****