ದೇಸಿ ಸೊಗಡಿನ ಬೋರೇಗೌಡ
****
ಹಳ್ಳಿ ಸೊಗಡಿನ ಚಿತ್ರಗಳನ್ನು ಜನರು ಇಷ್ಟಪಡುವ ಕಾರಣ ಅಂತಹುದೇ ಸಿನಿಮಾಗಳು ನೋಡುಗರನ್ನು ಆಕರ್ಷಿಸುತ್ತಿದೆ. ಆ ಸಾಲಿಗೆ ‘ದೊಡ್ಡಹಟ್ಟಿ ಬೋರೇಗೌಡ’ ಚಿತ್ರವು ಸೇರ್ಪಡೆಯಾಗುತ್ತದೆ. ಸಂಪೂರ್ಣ ಹಳ್ಳಿ ಕಥೆಯಾಗಿದ್ದರಿಂದ ದೇಸಿ ಸೊಗಡು ಎದ್ದು ಕಾಣಿಸುತ್ತದೆ. ಕಥಾನಾಯಕ ಮನೆ ಕಟ್ಟಿಕೊಳ್ಳಲು ಯಾವ ರೀತಿ ಪರದಾಡುತ್ತಾರೆ. ಈ ದಾರಿಯಲ್ಲಿ ಆತ ಅನುಭವಿಸುವ ಕಷ್ಟಗಳೇನು? ಎಂಬ ಅಂಶಗಳೊಂದಿಗೆ ಚಿತ್ರವು ತೆರೆದುಕೊಳ್ಳುತ್ತದೆ. ಇಷ್ಟಕ್ಕೆ ಸೀಮಿತವಾಗಿರದೆ ಸನ್ನಿವೇಶಗಳಲ್ಲಿ ಸರ್ಕಾರದ ಯೋಜನೆಗಳು ಸಾಮಾನ್ಯ ಜನರ ಕೈ ಸೇರುವಲ್ಲಿ ಯಾರ‍್ಯಾರಿಗೆ ಲಂಚ ಕೊಡಬೇಕು. ಇದರಿಂದ ಏನೆಲ್ಲಾ ಆಗುತ್ತದೆ. ಯಾವ ರೀತಿ ಹಾದಿ ತಪ್ಪುತ್ತದೆ. ಅನಿವಾರ್ಯವಾಗಿ ಎಲ್ಲಾ ಕೊಟ್ಟರೂ ಕೊನೆಗೆ ತಲುಪುವ ಸ್ಥಿತಿ ಎಂತಹುದು ಎಂಬುದನ್ನು ಚೆನ್ನಾಗಿ ತೋರಿಸಲಾಗಿದೆ.
ಕಥೆಯು ಶೀರ್ಷಿಕೆ ಹೆಸರಿನ ಬೋರೇಗೌಡನ ಸುತ್ತ ಸಾಗುತ್ತದೆ. ನಿರ್ದೇಶಕ ಕೆ.ಎಂ.ರಘು ಸಿನಿಮಾಕ್ಕೆ ಎಲ್ಲೂ ಧಕ್ಕೆಯಾಗದಂತೆ ಆಶಯಕ್ಕೆ ತಕ್ಕ ಪರಿಸರವನ್ನು ಸೃಷ್ಟಿ ಮಾಡುವಲ್ಲಿ ಫಲಕಾರಿಯಾಗಿರುವುದು ತೆರೆ ಮೇಲೆ ಕಾಣಿಸುತ್ತದೆ. ಇದಕ್ಕೆ ಪೂರಕ ಎನ್ನುವಂತೆ ಕಲಾವಿದರು ದೊರಕಿರುವುದು ಪ್ಲಸ್ ಪಾಯಿಂಟ್ ಆಗಿದೆ. ಮುಖ್ಯ ಪಾತ್ರಧಾರಿ ಶಿವಣ್ಣಬೀರಿಹುಂಡಿ, ಗೀತಾ ಅಭಿನಯದಲ್ಲಿ ಸೂಪರ್. ಉಳಿದಂತೆ ಲಾವಣ್ಯ, ಕಲಾರತಿ, ಮಹದೇವ್, ಕಾತ್ಯಾಯಿನಿ,ಯೋಗೇಶ್ ಮುಂತಾದವರು ತಮಗೆ ನೀಡಿದ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಶಶಿಕುಮಾರ್-ಲೋಕೇಶ್ ಮೊದಲ ಪ್ರಯತ್ನದಲ್ಲೆ ಒಳ್ಳೆ ಸಿನಿಮಾ ನಿರ್ಮಾಣ ಮಾಡಿದ್ದಾರೆ ಎನ್ನಬಹುದು.