ಕರಾವಳಿ ಭಾಗದ ಬೇರ
‘ಬೇರ’ ಚಿತ್ರದ ಕಥೆಯು ಕರಾವಳಿ ಭಾಗದ ಗೇಟ್ ಎಂಬ ಊರಲ್ಲಿ ನಡೆಯುವ ಒಂದು ಸಂಘರ್ಷದ ಸಿನಿಮಾವಾಗಿದೆ. ಹೆದ್ದಾರಿಗೆ ಅಂಟಿಕೊಂಡಿರುವ ಊರಿನಲ್ಲಿ ಧರ್ಮ ಭೇದದ ಭೀತಿ. ನೆಮ್ಮದಿಯಿಂದ ಇದ್ದ ಜನರಲ್ಲಿ ಜಾತಿ ಧರ್ಮದ ಮಧ್ಯೆ ಕೋಲಾಹಲ. ಸಲೀಮ್ ಮತ್ತು ವಿಷ್ಣು ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟದಿದ್ದರೂ ಗಳಸ್ಯ ಸ್ನೇಹಿತರು. ಬೇರೆ ಕೋಮಿನವರಾಗಿದ್ದರೂ ಪ್ರಾಣಕ್ಕೆ ಪ್ರಾಣ ಕೊಡುವವರು. ಮುಖಂಡರೆನಿಸಿಕೊಂಡವರು ತಮ್ಮ ಸ್ವಪ್ರತಿಷ್ಟೆ ಉಳಿಸಿಕೊಳ್ಳಲು ಏನು ಬೇಕಾದರೂ ಮಾಡುವಂತವರು. ಸಲೀಮ್ ಮ್ಯೂಸಿಯಂ ಇಟ್ಟುಕೊಂಡಿದ್ದರೆ, ವಿಷ್ಣು ಗೋಶಾಲೆ ನೋಡಿಕೊಂಡಿರುತ್ತಾನೆ. ಮ್ಯೂಸಿಯಂ ಕಂಬಗಳನ್ನು ತೆರೆವುಗೊಳಿಸಬೇಕೆಂದು ಮುಖಂಡ ಸಾಕಷ್ಟು ಬಾರಿ ಪ್ರಯತ್ನಿಸಿದರೂ ಸ್ನೇಹಿತರ ಹಠದಿಂದ ಸಾಧ್ಯವಾಗಿರುವುದಿಲ್ಲ.
. ಇದರ ನಡುವೆ ಉಗ್ರವಾದಿಗಳ ಝಲಕ್ ಇಣುಕುತ್ತದೆ. ಸಾಮಾನ್ಯ ಮನುಷ್ಯರ ಬದುಕಿಗೆ ಕೊಳ್ಳಿ ಇಡುವ ಉಗ್ರವಾದವಿದೆ. ಅದನ್ನು ಖಾಯಲೆಂದೆ ಮನುಷ್ಯತ್ವ, ಪ್ರೀತಿ, ಕರುಣೆ ಇದೆ ಎಂದು ಸಾರುವ ಪ್ರಯತ್ನ ಮಾಡಲಾಗಿದೆ.
ಸಲೀಮ್ ಆಗಿ ಯಶ್‌ಶೆಟ್ಟಿ, ವಿಷ್ಣು ಪಾತ್ರದಲ್ಲಿ ರಾಕೇಶ್‌ಮಯ್ಯ ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ನಾಯಕಿ ಹರ್ಷಿಕಾಪೂರ್ಣಚ್ಚಾ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಸುಮನ್, ದತ್ತಣ್ಣ, ದೀಪಕ್‌ರೈ ಸ್ವರಾಜ್‌ಶೆಟ್ಟಿ, ಮಂಜುನಾಥ್‌ಹೆಗ್ಡೆ, ಅರವಿಂದರಾವ್ ಎಲ್ಲರೂ ತಮಗೆ ನೀಡಿದ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕಿರುತೆರೆಯಲ್ಲಿ ಹೆಸರು ಮಾಡಿರುವ ನಿರ್ದೇಶಕ ವಿನುಬಳಂಜ ಚಿತ್ರಕಥೆಯನ್ನು ಅಚ್ಚುಕಟ್ಟಾಗಿ ಪೋಣಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಣಿಕಾಂತ್‌ಕದ್ರಿ ಸಂಗೀತ ಅಲ್ಲಲ್ಲಿ ಕೇಳುವಂತಿದೆ. ರಾಜಶೇಖರ ಛಾಯಾಗ್ರಹಣ ಇದಕ್ಕೆ ಪೂರಕವಾಗಿದೆ. ಎಸ್.ಎಲ್.ವಿ ಸಂಸ್ಥೆ ಮಾಲೀಕ ದಿವಾಕರದಾಸ್ ಎಸ್.ಎಲ್.ವಿ ಕಲರ‍್ಸ್ ಲಾಂಛನದಲ್ಲಿ ನಿರ್ಮಾಣ ಮಾಡಿದ್ದಾರೆ.
****