ರೈತರ ಸಮಸ್ಯೆ ಸಾರುವ ಬಿಸಿಲುಕುದುರೆ
ಸಾಹಿತಿ ಹೃದಯಶಿವ ಎರಡನೇ ಬಾರಿ ನಿರ್ದೇಶನ ಹಾಗೂ ಮೆಟಾಫರ್ ಮೀಡಿಯಾ ಹೌಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿರುವ ‘ಬಿಸಿಲುಕುದುರೆ’ ಚಿತ್ರದ ಕಥೆಯು ಕಾಡಂಚಿನಲ್ಲಿ ವಾಸಿಸುವ ರೈತರು ಎದುರಿಸುತ್ತಿರುವ ಒಂದಷ್ಟು ಸಮಸ್ಯೆಗಳು, ಬಗರ್ ಹುಕುಂ ಸಾಗುವಳಿದಾರರ ಕಷ್ಟ ನಷ್ಟಗಳ ಬಗ್ಗೆ ಬೆಳಕು ಚೆಲ್ಲಲಿದೆ. ಅಲ್ಲದೆ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ನಡುವೆ ಸಾಮರಸ್ಯ ಇಲ್ಲದೆ ಹೋದಾಗ ಸಾಗುವಳಿ ಮಾಡುತ್ತಿರುವ ರೈತ ದೊಡ್ಡ ಸಮಸ್ಯೆಗೆ ಸಿಲುಕುತ್ತಾನೆ. ಹಾಗಾದಾಗ ಅವನ ಸ್ಥಿತಿ ಏನಾಗುತ್ತದೆ ಎಂಬುದನ್ನು ಹೇಳಲಾಗಿದೆ. ಕನಕಪುರ ಸುತ್ತಮುತ್ತಲ ರೈತರ ಬದುಕಿನ ಘಟನೆಗಳನ್ನು ಚಿತ್ರರೂಪಕ್ಕೆ ತರಲಾಗಿದೆ.
ಎಷ್ಟೇ ಸರ್ಕಾರಗಳು ಆಡಳಿತ ನಡೆಸಿ ಹೋದರೂ ಈ ತೊಂದರೆಗೆ ನಿವಾರಣೆ ಸಿಕ್ಕಿಲ್ಲ. ಇದಕ್ಕೆ ಸರ್ಕಾರವೇ ಏನಾದರೂ ಪರಿಹಾರ ನೀಡಬೇಕಾಗತ್ತದೆ. ಇಂತಹ ಗಂಭೀರ ವಿಷಯಗಳು ಸನ್ನಿವೇಶಗಳ ಮೂಲಕ ಬರಲಿದೆ.
ಮುಖ್ಯ ಪಾತ್ರದಲ್ಲಿ ಸಂಪತ್ ಪೂರ್ಣ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ಅವರ ಅಭಿನಯ ಕೆಲವೊಮ್ಮೆ ಕಣ್ಣು ಒದ್ದೆ ಮಾಡಿಸುತ್ತದೆ. ಉಳಿದಂತೆ ಕರಿಸುಬ್ಬು, ವಿಕ್ಟರಿವಾಸು, ಮಳವಳಿಸಾಯಿಕೃಷ್ಣ, ಜೋಸೈಮನ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಇಮ್ತಿಯಾಜ್‌ಸುಲ್ತಾನ್ ಸಂಗೀತ, ನಾಗಾರ್ಜುನ ಛಾಯಾಗ್ರಹಣ ಕೆಲಸ ಅಚ್ಚುಕಟ್ಟಾಗಿದೆ. ಸಿನಿಮಾ ಒಮ್ಮೆ ನೋಡಲು ಅಡ್ಡಿ ಇಲ್ಲ.
***