Kousalya Supraja Rama.Reviews

Friday, July 28, 2023

256

ತಾಯಿ ಮಗನ ಸೆಂಟೆಮೆಂಟ್ ಹೈಲೈಟ್

       ‘ಕೌಸಲ್ಯಾ ಸುಪ್ರಜಾ ರಾಮ’ ಚಿತ್ರವನ್ನು ಅಹಂ ಇರುವ ಪ್ರತಿಯೊಬ್ಬ ಗಂಡಸರು ನೋಡಬೇಕಾದ ಚಿತ್ರವೆಂದು ಘಂಟಾಘೋಷವಾಗಿ ಹೇಳಬಹುದು. ಸದಭಿರುಚಿಯ ನಿರ್ದೇಶಕನೆಂದು ಖ್ಯಾತರಾಗಿರುವ ಶಶಾಂಕ್ ಈ ಬಾರಿಯೂ ಅಂತಹುದೆ ಕಥೆಯನ್ನು ನೀಡಿದ್ದಾರೆ. ತಾನು ಹೇಳಿದಂತೆ ನಡೆದುಕೊಳ್ಳಬೇಕೆಂಬ ಸಿದ್ದೇಗೌಡನಿಗೆ ಪತ್ನಿ ಪತಿಯ ಸೇವೆ ಮಾಡಿಕೊಂಡು ಇರಬೇಕೆಂದು ಬಯಸಿರುತ್ತಾನೆ. ಅದರಂತೆ ಆಕೆಯು ಏನೇ ಕಷ್ಟಬಂದರೂ ಅದನ್ನು ಸುಧಾರಿಸಿಕೊಂಡು ಜೀವನ ಸಾಗಿಸುತ್ತಿರುತ್ತಾಳೆ ಕುಲಪುತ್ರ ರಾಮೇಗೌಡ ಅಲಿಯಾಸ್ ರಾಮ ಅಪ್ಪನ ಗುಣವನ್ನೇ ಫಾಲೋ ಮಾಡಿಕೊಂಡು ಬಂದಿರುತ್ತಾನೆ. ಒಂದು ಹಂತದಲ್ಲಿ ಶಿವಾನಿಯನ್ನು ಪ್ರೀತಿಸತೊಡಗುತ್ತಾನೆ. ಆದರೆ ಈತನ ಆಟಗಳನ್ನು ನೋಡಿ ಸಾಕಾಗಿ ದೂರವಾಗಿರುತ್ತಾಳೆ. ಅದೇ ಸಮಯದಲ್ಲಿ ಇವನ ಬದುಕಿನಲ್ಲಿ ನಡೆದ ಘಟನೆಯಿಂದ ಪೂರ್ಣ ಬದಲಾಗುತ್ತಾನೆ. ಇವರ ಹಾದಿಗೆ ಮುತ್ತುಲಕ್ಷಿ ಎಂಟ್ರಿ ಕೊಡುತ್ತಾಳೆ. ಮುಂದೆ ಶಿವಾನಿ ವಾಪಸ್ಸು ಬರುತ್ತಾಳಾ? ಅಥವಾ ಮುತ್ತುಲಕ್ಷೀಯನ್ನು ಮದುವೆಯಾಗುತ್ತಾನಾ ಎಂಬುದಕ್ಕೆ ಉತ್ತರ ಸಿನಿಮಾ ನೋಡಿದರೆ ತಿಳಿಯುತ್ತದೆ.

      ಇಲ್ಲಿಯವರೆಗೂ ಬಂದಿರುವ ನಾಯಕ ಕೃಷ್ಣ ನಟನೆಯ ಚಿತ್ರಗಳಿಗಿಂತ ಇದು ಭಿನ್ನವಾಗಿದೆ. ಅಲ್ಲದೆ ಪ್ರಾರಂಭದಿಂದ ಕೊನೆವರೆಗೂ ಎರಡು ಶೇಡ್‌ಗಳಲ್ಲಿ ಗಮನ ಸೆಳೆಯುತ್ತಾರೆ. ನಾಯಕಿ ಬೃಂದಾಆಚಾರ್ಯ ತೆರೆ ಮೇಲೆ ಚೆಂದ ಕಾಣಿಸುತ್ತಾರೆ. ಸೆಕೆಂಡ್ ಹಾಫ್‌ದಲ್ಲಿ ಬರುವ ಮಿಲನಾನಾಗರಾಜು ಸನ್ನಿವೇಶಗಳಿಗೊಂಡು ಟ್ವಿಸ್ಟ್ ಕೊಡುತ್ತಾರೆ. ಸಿಡಿಸಿಡಿಯಾಗಿರುವ ರಂಗಾಯಣರಘು ಅವರ ಅಭಿನಯ ನೋಡುವುದೇ ಖುಷಿ ಕೊಡುತ್ತದೆ. ಮಮತೆಯ ತಾಯಿಯಾಗಿ ಸುಧಾಬೆಳವಾಡಿ ನೋಡುಗರಿಗೆ ಇಂತಹ ಅಮ್ಮಬೇಕೆಂದು ಅನಿಸುತ್ತದೆ. ಭಾಮೈದನಾಗಿ ನಾಗಭೂಷಣ್ ತನ್ನದೆ ಆದ ಮಹತ್ವ ಪಡೆದುಕೊಂಡಿದ್ದಾರೆ. ಅರ್ಜುನ್‌ಜನ್ಯಾ ಸಂಗೀತದಲ್ಲಿ ಹಾಡುಗಳು ಇಂಪಾಗಿದೆ. ಇದಕ್ಕೆ ಪೂರಕವಾಗಿ ಸುಜ್ಘಾನ್ ಮೂರ್ತಿ ಕ್ಯಾಮಾರಾ ಕೆಲಸ ಚೆನ್ನಾಗಿ ಮೂಡಿಬಂದಿದೆ. ಪ್ರತಿಯೊಬ್ಬರನ್ನು ಕಾಡುವ ಸಿನಿಮಾ ಅಂತ ಖಂಡಿತವಾಗಿಯೂ ಹೇಳಬಹುದು.

****

 

Copyright@2018 Chitralahari | All Rights Reserved. Photo Journalist K.S. Mokshendra,