ಭೂತ ನಗಿಸಿದರೆ ಆತ್ಮ ಭಯಬೀಳಿಸುತ್ತೆ
‘ನಮೋ ಭೂತಾತ್ಮ’ದಲ್ಲಿ ನಗಿಸಿದ್ದ ಕೋಮಲ್ ಈಗ ‘ನಮೋ ಭೂತಾತ್ಮ-೨’ದಲ್ಲಿ ಅದನ್ನೆ ಮುಂದುವರೆಸಿದ್ದಾರೆ. ಅವರ ಹಾವಭಾವ, ಡೈಲಾಗ್ ಡಿಲಿವಿರಿ ನೋಡುವುದೇ ಖುಷಿ ಕೊಡುತ್ತದೆ. ಹೆಸರಿಗೆ ತಕ್ಕಂತೆ ಇದೊಂದು ಥ್ರಿಲ್ಲರ್ ಕಾಮಿಡಿ ಚಿತ್ರವಾಗಿದ್ದರೂ, ನೋಡುಗರಿಗೆ ಬೇರೆ ತರಹ ಮನರಂಜನೆ ಸಿಗಲಿದೆ. ಐದು ಮಂದಿ ಸೇರಿಕೊಂಡು ಕಾಡಿನಲ್ಲಿರುವ ಪಾಳು ಬಿದ್ದ ಮನೆಯೊಳಗೆ ಹೋಗುತ್ತಾರೆ. ಅಲ್ಲಿ ಹೇಗೆ ಅವಾಂತರಗಳನ್ನು ಸೃಷ್ಟಿಸಿಕೊಂಡು ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಂಡು ಯಾವ ರೀತಿ ಪರದಾಡುತ್ತಾರೆ. ಒಂದಷ್ಟು ಘಟನೆಗಳು ಗೊಂಬೆಯ ಚಲನೆ, ತನ್ನಷ್ಟಕ್ಕೆ ಬೀಳುವ ಬಾಗಿಲು, ಕಿಟಾರನೇ ಕಿರುಚಿಕೊಳ್ಳುವ ಪಾತ್ರಧಾರಿಗಳು ಇವೆಲ್ಲಾ ಸಿದ್ದಸೂತ್ರ ಸನ್ನಿವೇಶಗಳು ಕುತೂಹಲ ಹುಟ್ಟಿಸುತ್ತದೆ. ಜತೆಗೆ ಹಾಸ್ಯದ ಅಂಶಗಳು ಬಾಯಿ ತೆರೆಸುವಂತೆ ಮಾಡಿದೆ.
ನೃತ್ಯ ಸಂಯೋಜಕ ವಿ.ಮುರಳಿ ನಿರ್ದೇಶನದಲ್ಲಿ ಬಾರಿ ಚಮತ್ಕಾರವನ್ನು ತೋರಿಸಿದ್ದಾರೆ. ಅಲ್ಲದೆ ಹಾಡುಗಳಲ್ಲಿ ಕಲಾವಿದರುಗಳಿಂದ ಚೆನ್ನಾಗಿ ಡ್ಯಾನ್ಸ್ ಮಾಡಿಸಿದ್ದಾರೆ. ನಾಯಕ ಕೋಮಲ್ ಇಡೀ ಸಿನಿಮಾವನ್ನು ಆವರಿಸಿಕೊಂಡಿರುವುದರಿಂದ ಬೇರೆ ರೀತಿಯ ಮಜಾ ಕೊಡುತ್ತದೆ. ಇವರೊಂದಿಗೆ ಕಾಮಿಡಿ ಕಿಲಾಡಿಗಳು ಖ್ಯಾತಿ ಗೋವಿಂದೆಗೌಡ, ಲೇಖಚಂದ್ರ, ಮೋನಿಕಾ ಹಾಗೂ ವರುಣ್ ವಿಭಿನ್ನವಾದ ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದು ಎಲ್ಲರೂ ತಮ್ಮ ಪಾತ್ರಕ್ಕೆ ಮೋಸ ಮಾಡಿಲ್ಲ. ಆರಂಭದಲ್ಲಿ ಹುಟ್ಟಿಕೊಳ್ಳುವ ಪ್ರಶ್ನೆಗಳಿಗೆ ಕ್ಲೈಮಾಕ್ಸ್‌ದಲ್ಲಿ ಉತ್ತರವನ್ನು ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ. ಅರುಣ್‌ಅಂಡ್ರೋಸ್ ಸಂಗೀತ, ಹಾಲೇಶ್ ಛಾಯಾಗ್ರಹಣ, ವೆಂಕಟ್ ಅವರ ನುಣುಪಾದ ಸಂಭಾಷಣೆ, ಅಮಿತ್ ಸಂಕಲನ ಇವೆಲ್ಲವೂ ಚಿತ್ರಕ್ಕೆ ಪೂರಕವಾಗಿದೆ. ಅಂತೂ ಸಂತೋಷ್‌ಶೇಖರ್ ಪ್ರೇಕ್ಷಕರು ಇಷ್ಟಪಡುವಂತ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.
****