ಟೋಬಿ ಅಪರಾದ ಕ್ರೋಧ ತುಂಬಿದ ಚಿತ್ರಣ
‘ಒಂದು ಮೊಟ್ಟೆಯ ಕಥೆ’ ಚಿತ್ರದಲ್ಲಿ ಮುಗ್ದನಾಗಿ, ‘ಗರುಡ ಗಮನ’ದಲ್ಲಿ ರೌಡಿಯಾಗಿ ಕಾಣಿಸಿಕೊಂಡಿದ್ದ ರಾಜ್.ಬಿ.ಶೆಟ್ಟಿ ‘ಟೋಬಿ’ ಸಿನಿಮಾದಲ್ಲಿ ತಮ್ಮ ಪ್ರತಿಭೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ಡಾರ್ಕ್ ಕಥೆ ಅಂದುಕೊಂಡಿದ್ದವರಿಗೆ ಇದೊಂದು ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್ ಅಂತ ತಿಳಿಯುತ್ತದೆ. ಸಾಮಾನ್ಯ ವ್ಯಕ್ತಿಯಲ್ಲಿ ಕಾಣುವ ಮಾಸ್ ಅಂಶಗಳು ಇರಲಿದೆ. ಹುಟ್ಟಿನ ಬಗ್ಗೆ ಮಾಹಿತಿ ಇಲ್ಲದ ಅವನಿಗೆ ಪಾದ್ರಿಯೊಬ್ಬರು ಟೋಬಿ ಅಂತ ನಾಮಕರಣ ಮಾಡುತ್ತಾರೆ. ಮುಂದೆ ಅವನ ಜೀವನದಲ್ಲಿ ನಡೆಯುವ ಘಟನೆಗಳಿಗೆ ಹೇಗೆ ವರ್ತಿಸುತ್ತಾನೆ. ಆತ ಮಾಡುವ ಸಾಲು ಸಾಲು ಅಪರಾದಗಳು ಹೇಗೆಲ್ಲಾ ಹಿಂಬಾಲಿಸಿಕೊಂಡು ಬರುತ್ತದೆ. ‘ಮಾರಿ ಮಾರಿ ಮಾರಿಗೆ ದಾರಿ’ ಎಂಬ ಅಡಿಬರಹ ಸೂಕ್ತ ಅನಿಸುತ್ತದೆ.
ಯೌವ್ವನಕ್ಕೆ ಬಂದ ಟೋಬಿಗೆ ನದಿ ದಂಡೆಯಲ್ಲಿ ಹೆಣ್ಣು ಮಗುವೊಂದು ಸಿಗುತ್ತದೆ. ಯಾರಿಗೂ ಹೆದರದ ಆತ ಈಕೆಗೆ ಮಾತ್ರ ಹೆದರುತ್ತಾನೆ. ಮುಂದೆ ಮಾಂಸದ ಅಡ್ಡದಲ್ಲಿ ಕೊಲೆ ಮಾಡುತ್ತಾನೆ. ಈ ಹಂತದಲ್ಲಿ ವೇಶ್ಯೆಯೊಬ್ಬಳ ಪ್ರೇಮಕ್ಕೆ ಬೀಳುತ್ತಾನೆ. ಅವಳು ತನ್ನ ವೃತ್ತಿ ಬಿಡಲಾರದಷ್ಟು ಅಸಹಾಯಕಿ. ನಂತರ ಮತ್ತೋಂದು ಕ್ರೈಂಗೆ ಆಹ್ವಾನ ಬರುತ್ತದೆ. ಮಗಳು ಚೆನ್ನಾಗಿರಬೇಕೆಂದು ಬಯಸುವ ಸಲುವಾಗಿ ಕಂಡೀಷನ್ ಹಾಕುತ್ತಾನೆ. ಜೈಲಿನಿಂದ ಹೊರ ಬಂದಾಗ ಮಗಳು ಗರ್ಭಿಣಿ ಅಂತ ತಿಳಿಯುತ್ತದೆ. ಅಲ್ಲಿಂದ ಸಿನಿಮಾಕ್ಕೆ ತಿರುವು ಸಿಗುತ್ತದೆ. ತನ್ನನ್ನು ಅಪರಾದ ಲೋಕಕ್ಕೆ ಕರೆದುಕೊಂಡು ಹೋದವನಿಂದಲೇ ಮಗಳ ಬದುಕು ಹಾಳಾಗಿದೆ ಎಂದು ತಿಳಿಯುತ್ತದೆ. ನಂತರ ಕ್ಲೈಮಾಕ್ಸ್‌ಗಳು ಬರುತ್ತಲೆ ಇರುತ್ತದೆ ಅದನ್ನು ತಿಳಿಯಲು ಟಾಕೀಸ್ ಬರಬೇಕಾಗುತ್ತದೆ. ಅಲ್ಲದೆ ಇಂತಹ ದೃಶ್ಯಗಳನ್ನು ದೊಡ್ಡ ಪರದೆ ಮೇಲೆ ನೋಡುವುದೇ ಚೆಂದ.
ನಾಯಕ ರಾಜ್.ಬಿ.ಶೆಟ್ಟಿ ನಟನೆಯನ್ನು ಎಷ್ಟು ಹೊಗಳಿದರೂ ಸಾಲದು. ಇವರಿಗೆ ಬೆನ್ನಲುಬಾರಿ ನಿರ್ದೇಶಕ ಬಾಸಿಲ್ ಅಲಚಕ್ಕಳ್ ಕೆಲಸ ಚೆನ್ನಾಗಿ ಮೂಡಿಬಂದಿದೆ. ಮಗಳಾಗಿ ಚೈತ್ರಾ.ಜೆ.ಆಚಾರ್, ವಿಲಾಸಿನಿಯಾಗಿ ಸಂಯುಕ್ತಹೊರನಾಡು, ಗೋಪಾಲಕೃಷ್ಣ ದೇಶಪಾಂಡೆ, ದೀಪಕ್‌ರಾಜ್‌ಶೆಟ್ಟಿ ಮುಂತಾದವರು ತಮಗೆ ನೀಡಿದ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ. ಮಿಥುನ್‌ಮುಕುಂದನ್ ಸಂಗೀತ, ಪ್ರವೀಣ್‌ಶ್ರೀಯನ್ ಛಾಯಾಗ್ರಹಣ-ಸಂಕಲನ, ಅರ್ಜುನ್‌ರಾಜ್-ರಾಜಶೇಖರ್ ಸಾಹಸ ಇದೆಲ್ಲಕ್ಕೂ ಪೂರಕವಾಗಿದೆ. ಬರಗಾಲದಲ್ಲಿ ನೀರು ಸಿಕ್ಕಿದಂತೆ ನೋಡುಗರಿಗೆ ಟೋಬಿ ಅದೇ ರೀತಿ ಆಗುತ್ತದೆ.
****