ಶುದ್ದ ಪ್ರೇಮಕಥೆಯಲ್ಲಿ ತೇಲಿ ಬಂದ ದೋಣಿ
ಬಿಡುಗಡೆಯ ಹೊಸ್ತಿಲಲ್ಲೆ ಸೈಡ್ ೧ ಮತ್ತು ಸೈಡ್ ೨ ಎಂದು ಬಿಂಬಿಸಿಕೊಂಡಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಸೈಡ್೧ ಮನು ಮತ್ತು ಪ್ರಿಯಾಳ ಸುತ್ತ ಸಾಗುತ್ತದೆ. ಕಥೆಯಲ್ಲಿ ಸಿಲಿಕಾನ್ ಸಿಟಿಯಲ್ಲಿರುವ ಮನು (ರಕ್ಷಿತ್‌ಶೆಟ್ಟಿ) ೧೨೦೦೦ ಸಾವಿರ ಸಂಬಳ ಪಡೆಯುತ್ತಿರುತ್ತಾನೆ. ಆತನ ಪ್ರೇಯಸಿ ಪ್ರಿಯಾ (ರುಕ್ಮಿಣಿವಸಂತ್) ಈತನನ್ನು ತುಂಬ ಪ್ರೀತಿಸುತ್ತಿರುತ್ತಾಳೆ. ಸಿನಿಮಾ ಶುರುವಾದ ಕೆಲವೇ ನಿಮಿಷಗಳಲ್ಲಿ ಇಬ್ಬರ ಗಾಢ ಎಷ್ಟು ಎಂಬುದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತದೆ. ಇವರಿಬ್ಬರು ಕಡಲ ಕಿನಾರೆಯಲ್ಲಿ ಬೀಸುವ ತಂಗಾಳಿಯಂತೆ ಇರುವ ಹೊತ್ತಿಗೆ, ಅವರ ಬಾಳಿನಲ್ಲಿ ಘೋರವಾದ ಘಟನೆ ನಡೆಯುತ್ತದೆ. ಇದು ಕತೆಗೆ ತಿರುವು ಪಡೆದುಕೊಳ್ಳುತ್ತದೆ.
ಇದು ಅವನು ಬರಮಾಡಿಕೊಂಡ ಸ್ವಯಂಕೃತ ಅಪರಾಧವಾದರೂ, ಇವರಿಬ್ಬರ ಪ್ರೀತಿಯ ಕನಸನ್ನು ಶ್ರೀಮಂತಗೊಳಿಸುವ ಉದ್ದೇಶದಲ್ಲಿ ಮಾಡಿದ್ದಾಗಿರುತ್ತದೆ. ಇದರ ಕುತೂಹಲವನ್ನು ತಿಳಿಯಲು ಚಿತ್ರಮಂದಿರಕ್ಕೆ ಬರಬೇಕು. ನಿರ್ದೇಶಕ ಹೇಮಂತ್‌ರಾವ್ ಪ್ರತಿ ದೃಶ್ಯವನ್ನು ಚೆನ್ನಾಗಿ ಪೋಣಿಸಿರುವುದು ಪರದೆ ಮೇಲೆ ಎದ್ದು ಕಾಣಿಸುತ್ತದೆ. ಪ್ರೀತಿಯ ಚಿತ್ರಗಳೂ ಎಂದಿಗೂ ಮಾಸುವುದಿಲ್ಲ ಎನ್ನುವಂತೆ ಈ ಸಿನಿಮಾವು ಮತ್ತೆ ರುಜುವಾತು ಮಾಡುವಲ್ಲಿ ಯಶಸ್ಸು ಕಂಡಿದೆ.
ನಾಯಕ ರಕ್ಷಿತ್‌ಶೆಟ್ಟಿ ಅಭಿನಯ ಮತ್ತೋಂದು ಹಂತಕ್ಕೆ ಹೋಗುವುದಕ್ಕೆ ಇಂತಹ ಪಾತ್ರ ಸಹಕಾರಿಯಾಗಿದೆ. ರುಕ್ಮಿಣಿವಸಂತ್ ನಟನೆಯಲ್ಲಿ ಜೀವಿಸಿದ್ದಾರೆ. ಉಳಿದಂತೆ ರಮೇಶ್‌ಇಂದಿರಾ, ಕಾಳಿಪ್ರಸಾದ್, ಅಚ್ಯುತಕುಮಾರ್, ಪವಿತ್ರಾಲೋಕೇಶ್, ಯಮುನಶ್ರೀನಿಧಿ, ಗೋಪಾಲಕೃಷ್ಣ ದೇಶಪಾಂಡೆ, ಅವಿನಾಶ್, ಶರತ್‌ಲೋಹಿತಾಶ್ವ, ಅಶ್ವಿನ್‌ಹಾಸನ್ ಇವರೆಲ್ಲರೂ ತಮಗೆ ನೀಡಿದ ಕೆಲಸಕ್ಕೆ ಮೋಸ ಮಾಡಿಲ್ಲ ಎನ್ನಬಹುದು. ಚರಣ್‌ರಾಜ್ ಸಂಗೀತ, ಅದ್ವೈತ್‌ಗುರುಮೂರ್ತಿ ಛಾಯಾಗ್ರಹಣ ಇವೆಲ್ಲಕ್ಕೂ ಪೂರಕವಾಗಿದೆ. ಮೊದಲ ಭಾಗ ನೋಡಿದವರು ಖಂಡಿತ ಸೈಡ್ ಬಿ ನೋಡುವಂತೆ ಸನ್ನಿವೇಶಗಳು ಸೃಷ್ಟಿಯಾಗಿರುವುದು ಪ್ಲಸ್ ಪಾಯಿಂಟ್.
****