ಮಾಲಾಶ್ರೀ ಮನರಂಜನೆ ಮಹಾಶಕ್ತಿ
ಸಮಾಜದಲ್ಲಿ ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಸಮೀಪದ ಬಂಧುಗಳನ್ನೇ ಬಲಿ ಕೊಡಲು ಹೇಸುವುದಿಲ್ಲ. ಅಂತಹ ಕೆಡುಕರ ಯೋಜನೆಗಳು ಇಲ್ಲಿ ತರಗೆಲೆಗಳಂತೆ ಉರುಳುತ್ತವೆ..
ಮಾರಕಾಸ್ತ್ರ ಎಂಬುದು ಇಲ್ಲಿ ಶಕ್ತಿ ಮತ್ತು ಯುಕ್ತಿಯ ರೂಪದಲ್ಲಿ ಕಾಣುತ್ತದೆ. ನಿಧಿಯ ಸಲುವಾಗಿ ಕೆಡುಕು ಮನಸ್ಸಿನ ವ್ಯಕ್ತಿಗಳು ಹೂಡುವ ಆಟವನ್ನು ಶಕ್ತಿಯಿಂದ ಗೆಲ್ಲಲಾಗುತ್ತದೆ.
ಬಳ್ಳಾರಿಯ ಸುತ್ತಮುತ್ತ ಭೂಮಿಯ ಭಾಗಗಳು ನಿಧಿಯಂತೆ ಕಾಣುತ್ತವೆ. ಅದನ್ನು ಪಡೆಯಲು ಹೊಂಚು ಹಾಕುವ ಗುಂಪು ಮಾಟ ಮಂತ್ರದ ದುಷ್ಕೃತ್ಯ ನಡೆಸುತ್ತದೆ. ಅದರ ನಡುವಿನ ಹೋರಾಟವೇ ಚಿತ್ರದ ಮುಖ್ಯಾಂಶ.
ಮಾಲಾಶ್ರೀ ಪಾತ್ರ ತಡವಾಗಿ ಎಂಟ್ರಿ ಕೊಟ್ಟರೂ ಅದು ಕಠಿಣ ಮತ್ತು ಖಡಕ್ ಆಗಿ ಕಾಣುತ್ತದೆ. ಅಷ್ಟರಲ್ಲಿ ಕೆಲವು ನಿಗೂಢ ಕೊಲೆಗಳು ನಡೆದಿರುತ್ತವೆ.
ಆ ಕೊಲೆಗೆ ಕಾರಣ ಹುಡುಕುವಾಗ ಅನಾಥಾಶ್ರಮ ನಡೆಸುವ ಹುಡುಗ ಆನಂದ ಆರ್ಯ ಪಾತ್ರದ ಕಡೆಗೆ ದೃಷ್ಟಿ ಕೇಂದ್ರೀಕರಿಸುತ್ತದೆ. ಆತನಿಗೆ ಸಹಾಯವಾಗಿ ನಿಂತಿರುವುದು ನಂದಿನಿ ಪಾತ್ರದಲ್ಲಿರುವ ಹರ್ಷಿಕಾ ಪೂಣಚ್ಚ.
ಕಥೆ ಮೂರು ಟ್ರ್ಯಾಕ್ ನಲ್ಲಿ ಹೋಗುತ್ತದೆ. ನಟರಾಜ್ ಮತ್ತು ಸ್ವಾತಿ ಪಾತ್ರಗಳು ಕೇಂದ್ರ ಬಿಂದುವಾದರೆ; ಸ್ವಾತಿ ಸಹೋದರ ಅಯ್ಯಪ್ಪ ಪಾತ್ರ ಪಕ್ಕಾ ವಿಲನ್. ಇದರ ನಡುವೆ ಉಗ್ರಂ ಮಂಜು ಪಾತ್ರ ಮೂರನೇಯ ನೆಲೆಯಲ್ಲಿ ಕಾಣುತ್ತದೆ.
ಹೀಗೆ ಮೂರು ಬೇರೆ ಬೇರೆ ನೆಲೆಯಲ್ಲಿ ಕಥೆ ಸಾಗುವಾಗಲೇ ಸಾಹಸ ದೃಶ್ಯಗಳು ಬಂದು ಹೋಗುತ್ತವೆ. ನಿರ್ದೇಶಕ ಗುರುಮೂರ್ತಿ ಸುನಾಮಿ ಟೈಟ್ ಸ್ಕ್ರಿಪ್ಟ್ ಮಾಡಿದ್ದಾರೆ ಎಂಬುದು ಗೋಚರವಾಗುವುದು ಆಗಲೇ.
ಮಾಲಾಶ್ರೀ ನಟನೆ ಮತ್ತು ಸಾಹಸ ದೃಶ್ಯಗಳಲ್ಲಿ ಅಬ್ಬರಿಸುತ್ತಾರೆ. ನಿರ್ಮಾಪಕ ನಟರಾಜ್ ಪಾತ್ರದ ಜೊತೆಗೆ ಎರಡು ಹಾಡನ್ನು ಪಡೆದುಕೊಂಡು ಧನ್ಯರಾಗಿದ್ದಾರೆ.
ಆನಂದ್ ಆರ್ಯ ಪುನೀತ್ ರಾಜ್‍ಕುಮಾರ್ ಅವರನ್ನು ಅನುಕರಿಸಲು ಪ್ರಯತ್ನ ಮಾಡಿದ್ದಾರೆ. ಹರ್ಷಿಕಾ ಪೂಣಚ್ಚ ಸೊಗಸಾಗಿ ನಟಿಸಿದ್ದಾರೆ. ಉಗ್ರಂ ಮಂಜು ವಿಭಿನ್ನವಾಗಿ ಕಾಣಿಸಿಕೊಂಡು ಗಮನ ಸೆಳೆಯುತ್ತಾರೆ.
ಶಿವಮಣಿ, ಅಯ್ಯಪ್ಪ, ಸ್ವಾತಿ ಉತ್ತಮವಾಗಿ ನಟಿಸಿದ್ದಾರೆ. ಅರುಣ್ ಸುರೇಶ್ ಛಾಯಾಗ್ರಹಣ ಹಾಗೂ ಸತೀಶ್ ಬಾಬು ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕ.