Tagarupalya.Reviews

Friday, October 27, 2023

254

 

ಹಳ್ಳಿ ರುಚಿಯ ಒಳ್ಳೆಯ ಪಲ್ಯ..!

 

 ಚಿತ್ರ: ಟಗರು ಪಲ್ಯ

 ತಾರಾಗಣ: ನಾಗಭೂಷಣ್, ಅಮೃತಾ ಪ್ರೇಮ್

ನಿರ್ದೇಶನ : ಉಮೇಶ್ ಕೃಪ

ನಿರ್ಮಾಣ: ಡಾಲಿ ಧನಂಜಯ್

ಹೆಸರಿನಿಂದಲೇ ಆಕರ್ಷಣೆ ಮೂಡಿಸಿದ್ದ ಟಗರು ಪಲ್ಯ ಇದೀಗ ಪರದೆಯ ಮೇಲೆ ಎಲ್ಲರನ್ನೂ ಆಕರ್ಷಿಸಿದೆ. ಟಗರು ಪಲ್ಯ ಎನ್ನುವ ಹೆಸರು ನೋಡಿ ಪಲ್ಯ ಬೇಯಿಸುವುದನ್ನು ನೋಡಲು ಬಂದರೆ ನಿರಾಶೆ ಆಗುವುದು ಸತ್ಯ. ಆದರೆ ಇಲ್ಲಿ ಪಲ್ಯಕ್ಕಿಂತ ಸೊಗಸಾದ ಬದುಕಿನ ರಸಾಯನವೇ ಇದೆ.

ಮಂಡ್ಯ ಸೊಗಡಿನ ಕತೆ ಇದು. ಊರಾಚೆ ಜಲಪಾತದ ಬಳಿ ದೇವಿಗೆ ಹರಕೆ ಹೊತ್ತ ಕುಟುಂಬ ಹೇಗೆಲ್ಲ ಭಾಗಿಯಾಗುತ್ತದೆ ಎನ್ನುವುದನ್ನು ನೋಡುವುದೇ ಸೊಗಸು. ಟಗರು ತಲೆ ಕಡಿಯಬೇಕಾದರೆ ಅದು ತಲೆಯನ್ನು ಕೆದರಬೇಕು. ಆದರೆ ಟಗರು ತಲೆ ಕೆದರದೇ ಸತಾಯಿಸುತ್ತದೆ. ಚಿತ್ರದಲ್ಲಿ ಹರಕೆ ಹೊತ್ತ ಕುಟುಂಬಕ್ಕೆ ಪ್ರಾಂ ಸಂಕಟವಾದರೆ ಪ್ರೇಕ್ಷಕರಿಗೆ ಇದು ನಗುವಿನ ಆಟವಾಗುತ್ತದೆ.

ಹರಕೆ ಸಂದಾಯ ಮಾಡುವ ಗೌಡನಾಗಿ ರಂಗಾಯಣ ರಘು ನಟಿಸಿದ್ದಾರೆ. ಗೌಡನ ಒಬ್ಬಳೇ ಒಬ್ಬಳು ಪ್ರೇಮದ ಮಗಳಾಗಿ ಪ್ರೇಮ್ ಪುತ್ರಿ ಅಮೃತಾ ಅಭಿನಯಿಸಿದ್ದಾರೆ. ರಂಗಾಯಣ ರಘು ಮತ್ತು ರಘು ಪತ್ನಿಯಾಗಿ ತಾರಾ ಅವರ ಅಭಿನಯ ಇಡೀ ಚಿತ್ರದ ಹೈಲೈಟ್. ಅಮೃತಾಗೆ ಅಭಿನಯಕ್ಕೆ ಹೆಚ್ಚು ಅವಕಾಶಗಳಿಲ್ಲ. ಆದರೆ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಅದ್ಭುತವಾಗಿ ಕಾಣಿಸಿದ್ದಾರೆ. ನಾಗಭೂಷಣ್, ವಾಸುಕಿ ವೈಭವ್ ಸೇರಿದಂತೆ ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ಅವಕಾಶಗಳಿವೆ.

ಇಡೀ ಚಿತ್ರದ ತುಂಬ ಹರಕೆಯ ಟಗರು ಬಲಿಕೊಡುವ ದೃಶ್ಯವೇ ಇದ್ದರೂ ಎಲ್ಲೂ ನೀರಸ ಅನಿಸುವುದೇ ಇಲ್ಲ. ಚಿತ್ರದ ಪ್ರಮುಖ ಘಟ್ಟದಲ್ಲಿ ಎಂಟ್ರಿಯಾಗುವ ಶರತ್ ಲೋಹಿತಾಶ್ವ ಮತ್ತು ಚಂದ್ರಕಲಾ ಮೋಹನ್ ಒಂದು ಹಂತದಲ್ಲಿ ತಾವೇ ಚಿತ್ರದ ಚುಕ್ಕಾಣಿ ಹಿಡಿಯುತ್ತಾರೆ. ಅದರಲ್ಲೂ ರಂಗಾಯಣ ರಘು ಮತ್ತು ಶರತ್ ಲೋಹಿತಾಶ್ವ ಕಾಂಬಿನೇಶನ್ ದೃಶ್ಯಗಳು ಅದ್ಭುತ. ಕುಡುಕನಾಗಿ ಕಾರ್ತಿಕ್, ಬೀಗತಿಯಾಗಿ ಚಿತ್ರಾ ಶೆಣೈ ಪಾತ್ರಗಳು ಮನದೊಳಗೆ ಸ್ಥಾನ ಪಡೆಯುತ್ತವೆ. ಚಿತ್ರದ ಕೊನೆಯಲ್ಲಿ ಸಂಬಂಧಗಳ ಬಗ್ಗೆ ಮತ್ತು ಹಳ್ಳಿ ಬದುಕಿನ ಬಗ್ಗೆ ನೀಡಲಾದ ಸಂದೇಶ ಕತೆಗೆ ಪೂರಕವಾಗಿದ್ದು ಮನದೊಳಗೆ ಸ್ಥಾನ ಪಡೆಯುತ್ತದೆ. ನವ ನಿರ್ದೇಶಕ ಉಮೇಶ್ ಕೃಪ ಪ್ರಥಮ ಚಿತ್ರದಲ್ಲಿಯೇ ಪ್ರೇಕ್ಷಕರ ಮನಗೆಲ್ಲುವಲ್ಲಿ ಸಫಲರಾಗಿದ್ದಾರೆ.

 

 

 

ಭರಚುಕ್ಕಿ ಜಲಪಾತದ ವೈಭವ, ಮಂಡ್ಯ ಮದ್ದೂರು ಕೊಳ್ಳೆಗಾಲದ ಭಾಷೆ, ನೆಲದ ಸೊಬಗು ಚಿತ್ರದಲ್ಲಿದೆ. ಮುಗ್ಧ ಗ್ರಾಮೀಣ ಜನರ ಬದುಕಿನ ನೋಟ, ನಗರದ ಜನರ ಸಣ್ಣತನ, ಹಾಸ್ಯ, ಪ್ರೀತಿ ಮುಂತಾದ ಒಂದಿಷ್ಟು ಐಟಂಗಳನ್ನು ಹಾಕಿ ಪಲ್ಯ ಮಾಡಿದ್ದಾರೆ ನಿರ್ದೇಶಕ ಉಮೇಶ್‌ ಕೃಪ.

Copyright@2018 Chitralahari | All Rights Reserved. Photo Journalist K.S. Mokshendra,