ರೋಮ್ಯಾಂಟಿಕ್ ಯೂಥ್ಫುಲ್ ಶುಗರ್ ಫ್ಯಾಕ್ಟರಿ
‘ಶುಗರ್ ಫ್ಯಾಕ್ಟರಿ’ ಚಿತ್ರವು ಅದೇ ಹೆಸರಿನ ಪಬ್‌ನಲ್ಲಿ ಶುರುವಾಗಿ ಅಲ್ಲೇ ಕೊನೆಗೊಳ್ಳುತ್ತದೆ. ಯೂ ಟ್ಯೂಬರ್ ಒಬ್ಬಳು ಗೋವಾದ ವಿಶೇಷವಾದ ಪಬ್‌ನ್ನು ತನ್ನ ವೀಕ್ಷಕರಿಗೆ ಪರಿಚಯಿಸಲು ಹೋದಾಗ, ಅದಕ್ಕಿಂತ ತನ್ನದೆ ಆದ ಕಥೆಯೊಂದನ್ನು ಬಚ್ಚಿಟ್ಟುಕೊಂಡು ಕುಳಿತಿರುವ ಆರ್ಯನ ವೆಡ್ಡಿಂಗ್ ಪ್ಲಾನರ್ ಪ್ರೀತಿಯ ಕಥನ ಕಣ್ಣಿಗೆ ಬೀಳುತ್ತದೆ. ಇದರೊಂದಿಗೆ ಚಿತ್ರವು ತೆರೆದುಕೊಳ್ಳುತ್ತಾ ಹೋಗುತ್ತದೆ. ಪಬ್ ಒಂದನ್ನೇ ಹಿನ್ನಲೆಯಾಗಿಟ್ಟುಕೊಂಡು, ಅಲ್ಲಿನ ಮಾಲೀಕ, ಅಲ್ಲೊಬ್ಬ ಸಪ್ಲೈಯರ್, ಆತನ ನಾಲ್ಕು ಮಂದಿ ಸ್ನೇಹಿತರು. ಇದರೊಂದಿಗೆ ಇಬ್ಬರು ನಾಯಕಿಯರು. ಲವ್ ಎಂದರೆ ಆಗದ ನಾಯಕ ಮತ್ತು ನಾಯಕಿ ಜೀವನ ಪಯಣದಲ್ಲಿ ಒಂದಾಗುವ ಪ್ರಮೇಯ ಬರುತ್ತದೆ. ಇಬ್ಬರು ಮುಂದೆ ಪ್ರೀತಿಯ ಬಲೆಯಲ್ಲಿ ಬೀಳುತ್ತಾರಾ? ಹಾಗೂ ಇದರ ಹಿಂದೆ ಮದುವೆ, ಸಂಸಾರ ಪ್ರಸಕ್ತ ಜನರೇಶನ್ ಗೊಂದಲಗಳನ್ನು ಹೇಳುವ ಪ್ರಯತ್ನ ಮಾಡಿರುವುದು ತಿಳಿದು ಬರುತ್ತದೆ.
ಪ್ರೀತಿ ಎಂಬುದನ್ನು ವಿಭಿನ್ನವಾಗಿ ತೋರಿಸುವ ಪ್ರಯತ್ನ ಮಾಡಿರುವುದು ನಿರ್ದೇಶಕ ದೀಪಕ್‌ಅರಸ್. ಚಿತ್ರಕಥೆ, ಸಂಭಾಷಣೆ, ನಿರೂಪಣೆಗೂ ಮಹತ್ವ ನೀಡಿದ್ದಾರೆ. ಮೋಜು, ಮಸ್ತಿ ಹೀಗೆ ಎಲ್ಲಾ ಥರದ ಅಂಶಗಳನ್ನು ಸೇರಿಕೊಂಡು ಮನರಂಜನೆಯಲ್ಲಿ ಕಟ್ಟಿಕೊಡಲು ಶ್ರಮ ಪಟ್ಟಿರುವುದು ಪರದೆ ಮೇಲೆ ಕಾಣಿಸುತ್ತದೆ.
ಡಾರ್ಲಿಂಗ್ ಕೃಷ್ಣ ತನ್ನ ಪ್ರತಿಭೆಯನ್ನು ಇದರಲ್ಲೂ ಮುಂದುವರೆಸಿದ್ದಾರೆ. ನಾಯಕಿಯರಾದ ಸೋನಲ್‌ಮಾಂತೆರೋ, ಅದ್ವಿತಿಶೆಟ್ಟಿ ಮತ್ತು ಶಿಲ್ಪಾ ತಮಗೆ ನೀಡಿದ ಕೆಲಸಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ರಂಗಾಯಣರಘು, ಶಶಿಕುಮಾರ್, ಗೋವಿಂದೇಗೌಡ, ಸೂರಜ್ ಎಲ್ಲರೂ ಪರದೆ ಮೇಲೆ ಆವರಿಸಿಕೊಂಡಿದ್ದಾರೆ. ಸಂತೋಷ್‌ಕುಮಾರ್ ಪಾತಾಜೆ ಕ್ಯಾಮಾರದಲ್ಲಿ ಗೋವಾ ಸುಂದರ ತಾಣಗಳು ಕಣ್ಣಿಗೆ ತಂಪುಕೊಡುತ್ತದೆ. ಯುವ ಪ್ರೇಮಿಗಳಿಗೆ ಹೇಳಿ ಮಾಡಿಸಿದ ಚಿತ್ರವೆನ್ನಬಹುದು.
****