ನಿರ್ಮಾಪಕರು : ಎಸ್.ಟಿ.ಸೋಮಶೇಖರ್
ನಿರ್ದೇಶನ : ಗೊರವಾಲೆ ಮಹೇಶ್
ಗ್ರಾಮೀಣ ಸೊಗಡಿನ ಚೆಲುವು
ಕನ್ನಡ ನಾಡಿನ ಪ್ರತಿ ಗ್ರಾಮೀಣ ಭಾಗದಲ್ಲಿ ಅದರದೇ ಆದ ಸೊಗಸಿನ ಚಿತ್ತಾರವಿರುತ್ತದೆ. ರಂಗು ರಂಗಿನ ವ್ಯಕ್ತಿಗಳಿರುತ್ತಾರೆ. ಅಂತಹ ರಂಗಿನ ವ್ಯಕ್ತಿ ರಂಗನ ಕಥೆಯಲ್ಲಿ ಕಚಗುಳಿ ಇಡುವ ನಗು ಉಲ್ಲಾಸ ಎರಡೂ ಇರುತ್ತದೆ..
ನಾ ಕೋಳಿಕೆ ರಂಗ ಎಂದ ತಕ್ಷಣವೇ ನೆನಪಾಗುವುದು ಕನ್ನಡದ ನಾಟಕ ಪ್ರಪಂಚದ ದಿಗ್ಗಜ ಟಿ.ಪಿ.ಕೈಲಾಸಂ. ಆದರೆ ಇಲ್ಲಿನ ರಂಗ ಮುಗ್ಧ, ಅಮಾಯಕ ಮತ್ತು ಮಾನವ ಪ್ರೇಮದ ಸಂಕೇತ.
ಹಾಗಾಗಿ ಆತ ಸಾಕಿರುವ ಕೋಳಿ ಸುಕ್ಕನ ಮೇಲೆ ಅತೀವ ಪ್ರೇಮ ಮತ್ತು ಒಂದು ಕ್ಷಣವೂ ಬಿಟ್ಟಿರಲಾರದ ಮಮಕಾರ. ಹೀಗಿದ್ದಾಗಲೇ ಹಳ್ಳಿಯಲ್ಲಿ ನಿತ್ಯವೂ ವೈವಿಧ್ಯಮಯ ಘಟನಾವಳಿಗಳು ನಡೆಯುತ್ತವೆ. ಆ ಘಟನೆಗಳ ಕೇಂದ್ರಬಿಂದು ರಂಗ ಮತ್ತು ಆತನ ಸುಕ್ಕ..
ಗ್ರಾಮೀಣ ಭಾಗಗಳಲ್ಲಿ ಸೋಮಾರಿಯಾಗಿ ದಿನಗಳನ್ನು ಕಳೆಯುವ ಯುವಕರಿಗೆ ಅಮ್ಮನ ಮುದ್ದು ಹೆಚ್ಚು. ಅಂತಹ ಅಮ್ಮನ ಪಡೆದ ರಂಗನ ವಿವಿಧ ವಿನೋದಾವಳಿಗೆ ಕೆಲ ಸ್ನೇಹಿತರ ರಂಗಿನಾಟವೂ ಜೊತೆಯಾಗಿರುತ್ತದೆ.
ಮೊದಲರ್ಧ ತಮಾಷೆಯಿಂದ ಎಲ್ಲವೂ ಸಾಗುತ್ತದೆ. ದುಬೈ ಶೆಖ್ ಕಲ್ಪನೆಯ ಬ್ರೇನ್ ಲೆಸ್ ಕಾಮಿಡಿಯ ಝಲಕ್ ಎನಿಸುತ್ತದೆ. ಅದಕ್ಕೆ ಕಾಮಿಡಿ ಕಿಲಾಡಿಗಳ ಕಲಾವಿದರು ಸಾಕ್ಷಿಯಾಗುತ್ತಾರೆ.
ಉತ್ತರಾರ್ಧದಲ್ಲಿ ಸೆಂಟಿಮೆಂಟ್ ಗೆ ಜಾರುವುದರಿಂದ ಕೊಂಚ ಹಿಡಿತ ಜಾರುತ್ತದೆ. ಸುಕ್ಕ ಮತ್ತು ಅಮ್ಮ ಇಬ್ಬರ ನಡುವಿನ ಭಾವುಕತೆಯ ಜೊತೆಗೆ ಗ್ರಾಮದ ದೇವತೆ; ಹಬ್ಬ ನಂಬಿಕೆಗಳು ಜೊತೆಯಾಗಿ ಸುಖಾಂತವಾಗುತ್ತವೆ.
ಸುಮ್ಮನೆ ಕುಳಿತು ಒಮ್ಮೆ ಹಾಸ್ಯದ ಸವಿಯುಂಡು ಬರುವಷ್ಟು ನೀಟಾಗಿದೆ ಚಿತ್ರ. ಇಲ್ಲಿ ಗಮನ ಸೆಳೆಯುವುದು ರಾಜು ಎಮ್ಮಿಗನೂರು ಸಂಗೀತ ಮತ್ತು ಹಾಡುಗಳು. ಪುನೀತ್ ರಾಜ್ ಕುಮಾರ್ ಹಾಡಿರುವ ಶೀರ್ಷಿಕೆ ಗೀತೆ ಹಾಗೂ ’ಮರೆಯೋದುಂಟೆ ಮೈಸೂರು ದೊರೆಯ..’ ಹಾಡುಗಳು ಚಿತ್ರದ ಹೈಲೈಟ್.
ಮುಖ್ಯ ಪಾತ್ರದಲ್ಲಿರುವ ಮಾಸ್ಟರ್ ಆನಂದ್ ನಟನೆಯಲ್ಲಿ ತಮ್ಮ ಎಂದಿನ ಸಾಮರ್ಥ್ಯ ಮೆರೆದಿದ್ದಾರೆ. ಉಳಿದಂತೆ ಅಮ್ಮನಾಗಿ ಭವ್ಯ, ಪ್ರೀತಿ ತೋರುವ ರಾಜೇಶ್ವರಿ, ಡಾನ್ ಶೋಭರಾಜ್ ಹಾಗೂ ಇತರರ ನಟನೆ ಗಮನ ಸೆಳೆಯುತ್ತದೆ.
ಮರೆಯಾಗಿರುವ ಕರುನಾಡಿನ ಗ್ರಾಮೀಣ ಸಂಸ್ಕೃತಿಯ ಸೊಗಡು ಎದ್ದು ಕಾಣುವ ವಿರಳ ಚಿತ್ರಗಳಲ್ಲಿ ’ನಾ ಕೋಳಿಕೆ ರಂಗ’ ಕೂಡ ನಿಲ್ಲುತ್ತದೆ ಎಂಬುದು ಅತಿಶಯೋಕ್ತಿ ಅಲ್ಲ.
****