ಪ್ರಾಣೇಶ ತಹಶೀಲ್ದಾರ್ ಕನಸು****
ಸುಂದರ ಬದುಕು ಕಟ್ಟಿಕೊಳ್ಳಲು ನಾವುಗಳು ಜೀವನಪೂರ್ತಿ ಕಷ್ಟಪಡ ಬೇಕಾಗುತ್ತದೆ. ಅದೇ ಅದೃಷ್ಟ ಖುಲಾಯಿಸಿದರೆ ಎಲ್ಲವು ಅಂದುಕೊಂಡಂತೆ ಆಗುತ್ತದೆ ಎಂಬುದನ್ನು ‘ರಾಜಯೋಗ’ ಚಿತ್ರದಲ್ಲಿ ಹಾಸ್ಯದ ಮೂಲಕ ತೋರಿಸಲಾಗಿದೆ. ಮೂಲ ನಕ್ಷತ್ರದಲ್ಲಿ ಹುಟ್ಟಿದವರು ಅಪ್ಪ ಅಮ್ಮನಿಗೆ ಕಂಟಕವಾಗುತ್ತದೆ ಎಂದು ಜ್ಯೋತಿಷ ಹೇಳಿದ ಮಾತನ್ನು ಬಲವಾಗಿ ನಂಬುವ ಆತ ಚಿಕ್ಕಂದಿನಿಂದಲೇ ಮಗನ ಮೇಲೆ ಅಷ್ಟೋಂದು ಪ್ರೀತಿಯನ್ನು ತೋರಿಸುವುದಿಲ್ಲ. ಕೊನೆಗೆ ಪ್ರಾಣಕ್ಕೆ ಕುತ್ತು ಬಂದಾಗ ಮಗನೇ ಅಪ್ಪನನ್ನು ಉಳಿಸಿದಾಗ ಜ್ಘಾನೋದಯವಾಗುವ ಕಥೆಯನ್ನು ಗ್ರಾಮೀಣ ಸೊಗಡಿನಲ್ಲಿ ಹೇಳಿರುವುದು ಚೆನ್ನಾಗಿದೆ.
ಪ್ರಾಣೇಶ ದಡ್ಡನಲ್ಲದಿದ್ದರೂ ಮಹಾನ್ ತತ್ವಜಾನಿ. ಒಳ್ಳೆದನ್ನೇ ಮಾಡಿದರೂ ಜನರಿಗೆ ಅರ್ಥವಾಗೋಲ್ಲ. ಪರೀಕ್ಷೆಯಲ್ಲಿ ಪಾಸ್ ಆಗದಿದ್ದರೂ, ಮರಳಿ ಯತ್ನವ ಮಾಡು ಎನ್ನುವಂತೆ ಪ್ರಯತ್ನದಿಂದ ಹಿಂದೆ ಸರಿಯುವುದಿಲ್ಲ. ಮದುವೆ ಮಾಡಿದರೆ ಸರಿ ಹೋಗಬಹುದೇನೋ ಎಂಬ ಸಲಹೆಯನ್ನು ಕೇಳಿದ ಅಪ್ಪನು ಅದನ್ನು ಮಾಡಿಸುತ್ತಾನೆ. ಆಕೆ ಬಂದರೂ ಬಟ್ಟೆ ಹೊಲಿದುಕೊಂಡು ಜೀವನ ಸಾಗಿಸುತ್ತಾನೆ. ಮುಂದೆ ತಂದೆಗೆ ಆರೋಗ್ಯದಲ್ಲಿ ವ್ಯತ್ಯಯ ಕಂಡುಬರುತ್ತದೆ. ಆಗ ಸಂಬಂಧಿಗಳು ದೂರ ಹೋಗುತ್ತಾರೆ. ಇತ್ತ ಕಡೆ ಪ್ರಾಣೇಶ ತಹಶೀಲ್ದಾರ್ ಹುದ್ದೆಗೆ ಆಯ್ಕೆಯಾದ ಸುದ್ದಿ ಬರುತ್ತದೆ. ಆದರೆ ತಂದೆಯ ಚಿಕಿತ್ಸೆಗೆ ಹಣ ನೀಡುವ ಆಫರ್ ಬರುತ್ತದೆ. ಅದು ಎಂತಹ ಆಫರ್. ಕೊನೆಗೆ ಎರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಅದಕ್ಕೆ ಉತ್ತರ ಚಿತ್ರಮಂದಿರಕ್ಕೆ ಬರಬೇಕು.
ಪೋಷಕ ಪಾತ್ರಗಳಲ್ಲಿ ಮಿಂಚಿದ್ದ ಧರ್ಮಣ್ಣಕಡೂರು ಇಡೀ ಚಿತ್ರವನ್ನು ಪ್ರಾಣೇಶನಾಗಿ ಆವರಿಸಿಕೊಂಡು ಪ್ರೇಕ್ಷಕರನ್ನು ನಗಿಸುತ್ತಾ ಕ್ಲೈಮಾಕ್ಸ್‌ದಲ್ಲಿ ಕಣ್ಣನ್ನು ಒದ್ದೆ ಮಾಡಿಸುತ್ತಾರೆ, ನಾಯಕಿ ನಿರೀಕ್ಷರಾವ್ ಅವರಿಗೆ ಮೊದಲ ಚಿತ್ರವಾದರೂ ಸೈಕಲ್ ಓಡೆದಿಲ್ಲ. ಅಪ್ಪನಾಗಿ ನಾಗೇಂದ್ರಷಾ, ಕೃಷ್ಣಮೂರ್ತಿ, ಉಷಾ ಮುಂತಾದವರು ತಮಗೆ ನೀಡಿದ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಲಿಂಗರಾಜ ಉಚ್ಚಂಗಿದುರ್ಗ ನಿರ್ದೇಶನದಲ್ಲಿ ಸನ್ನಿವೇಶಗಳು ಹೂ ಪೋಣಿಸಿದಂತೆ ಅದ್ಬುತವಾಗಿ ಮೂಡಿಬಂದಿದೆ. ಈ ಚಿತ್ರದಿಂದ ಎಲ್ಲರಿಗೂ ಲೈಫ್ ಸಿಗಬಹುದು ಅಂತ ಘಂಟಾಘೋಷವಾಗಿ ಹೇಳಬಹುದು.
****