ಮಾತು ಮರೆತು ಮೂಕಗೊಳಿಸುವ ಪ್ರೇಮ ಕತೆ
ಚಿತ್ರ: ಒಂದು ಸರಳ ಪ್ರೇಮ ಕತೆ
ನಿರ್ದೇಶನ: ಸಿಂಪಲ್ ಸುನಿ
ನಿರ್ಮಾಣ: ಮೈಸೂರು ರಮೇಶ್
ತಾರಾಗಣ: ವಿನಯ್ ರಾಜ್ ಕುಮಾರ್, ಸ್ವಾತಿಷ್ಟ, ಮಲ್ಲಿಕಾ ಸಿಂಗ್ ಮತ್ತಿತರರು.
ಚಿತ್ರದಲ್ಲಿ ವಿನಯ್ ರಾಜ್ ಕುಮಾರ್ ಪಾತ್ರದ ಹೆಸರು ಅತಿಶಯ್. ಆದರೆ ತೀರ ಅತಿಶಯವೇ ಇರದಂಥ ಸಾಮಾನ್ಯ ವ್ಯಕ್ತಿತ್ವದ ಯುವಕ.
ಅತಿಶಯ್ ಸಂಗೀತ ನಿರ್ದೇಶಕನಾಗುವ ಕನಸು ಕಾಣುತ್ತಿರುತ್ತಾನೆ. ಜತೆಯಲ್ಲೇ ತನ್ನನ್ನು ಕಾಡುವ ಕಂಠದ ಯುವತಿಯನ್ನೇ ಮದುವೆಯಾಗುವ ಗುರಿಯೂ ಈತನದಾಗಿರುತ್ತದೆ.
ಚಿತ್ರದಲ್ಲಿ ಇಬ್ಬರು ನಾಯಕಿಯರು. ಸಂಬಂಧಿಯಂತೆ ಮನೆಯಲ್ಲೇ ಇರುವ ಯುವತಿಯಾಗಿ, ಜಗಳಗಂಟಿಯಾಗಿ ಕಾಡುವ ಅನುರಾಗ ಪಾತ್ರದಲ್ಲಿ ಸ್ವಾತಿಷ್ಟ ಅಭಿನಯಿಸಿದ್ದಾರೆ. ಧ್ವನಿಯಿಂದಲೇ ಮನ ಸೆಳೆಯುವ ಯುವತಿಯಾಗಿ, ಗಾಯನ ಲೋಕದ ಸುಂದರಿ ಮಧುರಾ ಪಾತ್ರದಲ್ಲಿ ಮಲ್ಲಿಕಾ ಸಿಂಗ್ ನಟಿಸಿದ್ದಾರೆ.
ಅನುರಾಗ ಟಿವಿ ವಾಹಿನಿಯಲ್ಲಿ ಕೆಲಸ ಮಾಡುವವಳು. ಸ್ಟಿಂಗ್ ಆಪರೇಶನ್ ಕೂಡ
ಮಾಡುತ್ತಿರುತ್ತಾಳೆ. ಮಧುರಾ ಗಾಯಕಿಯಾಗಿ ಹೆಸರು ಮಾಡುತ್ತಿರುವ ಹುಡುಗಿ. ಅತಿಶಯ್ ಆಕೆಯ ಪ್ರತಿಭೆಗೆ ಹೊಸ ಅವಕಾಶಗಳನ್ನು ಮಾಡಿಕೊಡುತ್ತಾನೆ.
ಇಬ್ಬರು ಯುವತಿಯರಲ್ಲಿ ನಾಯಕನ ಮನಸು ಯಾರತ್ತ ಎನ್ನುವುದು ಪ್ರೇಕ್ಷಕರಿಗೆ ಅರ್ಥವಾಗಿರುತ್ತದೆ. ಆದರೆ ಚಿತ್ರದ ಮಧ್ಯಂತರಕ್ಕೂ ಮೊದಲೇ ನಾಯಕನ ಪಾಲಿಗೆ ಒಲ್ಲದ ಮದುವೆ ನಡೆದುಬಿಡುತ್ತದೆ. ಹಾಗಾದರೆ ನಾಯಕನ ಮನಸು ಕದ್ದ ಹಾಡುಗಾರ್ತಿಯ ಕಥೆ ಏನು? ಮುಂದೆ ಈ ಜೋಡಿ ಒಂದಾಗುತ್ತಾ? ಇದನ್ನು ತಿಳಿಯಬೇಕಾದರೆ ಸಿನಿಮಾ ನೋಡಬೇಕು.
ಅತಿಶಯ್ ಪಾತ್ರದಲ್ಲಿ ವಿನಯ್ ರಾಜ್ ಕುಮಾರ್ ಅವರದ್ದು ಅತಿಶಯವಿಲ್ಲದ ಅಭಿನಯ. ನಾಯಕಿಯರಲ್ಲಿ ಸ್ವಾತಿಷ್ಟ ಸಿಕ್ಕ ಅವಕಾಶದಲ್ಲಿ ಪಾತ್ರದೊಳಗೆ ಹೊಕ್ಕು ನಟಿಸಿದ್ದಾರೆ. ಮಲ್ಲಿಕಾ ಸಿಂಗ್ ಆಕರ್ಷಕವಾಗಿದ್ದಾರೆ. ಸುನಿ ನಿರ್ದೇಶನದ ಜತೆಗೆ ಎಂದಿನಂತೆ ತಮ್ಮ ಸರಳವಾದ ಆದರೆ ನಗು ತರಿಸುವ ಸಂಭಾಷಣೆಯ ಮೂಲಕವೂ ಮನಸೆಳೆಯುತ್ತಾರೆ. ಪ್ರೇಕ್ಷಕರ ಪಾಲಿಗೆ ಒಂದೊಳ್ಳೆಯ ಪ್ರೇಮಚಿತ್ರ ಚಿತ್ರತಂಡ ಯಶಸ್ಸಾಗಿದೆ.