ಚಿತ್ರ: ಕಾಟೇರ *****
ನಿರ್ದೇಶಕ: ತರುಣ್ ಸುಧೀರ್
ನಿರ್ಮಾಣ: ರಾಕ್ಲೈನ್ ವೆಂಕಟೇಶ್
ತಾರಾಗಣ: ದರ್ಶನ್, ಆರಾಧನ
ಕಾಟೇರ ಎನ್ನುವ ವ್ಯಕ್ತಿಯು 15 ವರ್ಷಗಳ ಜೈಲು ಶಿಕ್ಷೆ ಮುಗಿಸಿ ಬಿಡುಗಡೆಯಾಗುವ ದೃಶ್ಯದ ಮೂಲಕ, ಆತನ ಫ್ಲ್ಯಾಶ್ ಬ್ಯಾಕ್ ಕತೆ ರಿವೀಲಾಗುತ್ತಾ ಸಾಗುತ್ತದೆ.
ಅದು ಎಂಬತ್ತರ ದಶಕದ ಕತೆ. ಕಾಟೇರ ವೃತ್ತಿಯಲ್ಲಿ ಕಮ್ಮಾರ. ಆತನಿರುವ ಹಳ್ಳಿಯಲ್ಲಿ ಜಮೀನ್ದಾರಿ ಪದ್ಧತಿ, ಜಾತಿ ಪದ್ಧತಿ ನಡೆಯುತ್ತಿರುತ್ತದೆ. ಇಂಥ ವಾತಾವರಣದಲ್ಲೂ ಊರ ಶಾನುಭೋಗರ ಮಗಳು ಪ್ರಭಾವತಿ ಕಾಟೇರನನ್ನು ಪ್ರೀತಿಸುತ್ತಿರುತ್ತಾಳೆ. ಆದರೆ ಈ ಪ್ರೀತಿಗೆ ಎದುರಾಗಬಹುದಾದ ಕಷ್ಟಗಳನ್ನು ಅರಿತೇ ಕಾಟೇರ ಆಕೆಯ ಪ್ರೀತಿಗೆ ಪುರಸ್ಕಾರ ನೀಡುವುದಿಲ್ಲ.
ಇಂಥ ಸಂದರ್ಭದಲ್ಲಿ ಇಂದಿರಾಗಾಂಧಿ ಅನುಷ್ಠಾನಗೊಳಿಸಿದ ’ಉಳುವವನೇ ಭೂಮಿಯ ಒಡೆಯ’ ಕಾಯ್ದೆ ಕ್ರಾಂತಿ ತರುತ್ತದೆ. ಈ ಕಾಯ್ದೆಯ ಬಗ್ಗೆ ಪ್ರಭಾವತಿ, ಕಾಟೇರ ಸೇರಿದಂತೆ ಉಳುವವರಿಗೆ ಮಾಹಿತಿ ನೀಡುತ್ತಾಳೆ. ಕಾಟೇರ ಜಮೀನ್ದಾರಿ ಸಮುದಾಯದ ವಿರುದ್ಧ ತಿರುಗಿ ನಿಲ್ಲುತ್ತಾನೆ. ಮುಂದೇನಾಗುತ್ತದೆ? ಪ್ರಭಾವತಿಯ ಪ್ರೀತಿಯನ್ನು ಒಪ್ಪುತ್ತಾನ? ಅವರಿಬ್ಬರ ಮದುವೆ ನೆರವೇರುತ್ತದೆಯೇ? ಈ ಕುತೂಹಲಗಳಿಗೆ ಉತ್ತರಗಳನ್ನು ಪರದೆಯ ಮೇಲೆ ವೀಕ್ಷಿಸಿಯೇ ಪಡೆಯುವುದು ಉತ್ತಮ.
ಚಿತ್ರದ ಟ್ರೇಲರ್ ನಲ್ಲಿ ತೋರಿಸಲಾದ ಅಸ್ಥಿಪಂಜರಗಳ ಹಿಂದೆ ಇಡೀ ಕತೆಯ ಅಸ್ತಿತ್ವವೇ ಇದೆ. ಇದಕ್ಕೂ ಕಾಟೇರನಿಗೂ ಏನು ಸಂಬಂಧ ಎನ್ನುವುದು ಕೂಡ ಕತೆಯಲ್ಲಿದೆ. ಕಲಾ ನಿರ್ದೇಶಕರು ಎಂಬತ್ತರ ಕಾಲಘಟ್ಟವನ್ನು ಕಟ್ಟಿಕೊಡುವಲ್ಲಿ ಗೆದ್ದಿದ್ದಾರೆ.
ಕಾಟೇರನಾಗಿ ನಟಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್, ನೈಜ ನಟನೆ ನೀಡಿದ್ದಾರೆ. ಜಾತಿ, ಜಮೀನ್ದಾರಿ ಪದ್ಧತಿ ವಿರುದ್ಧ ಹೋರಾಡುವ ಸಾಮಾಜಿಕ ಕಾಳಜಿಯ ಪಾತ್ರವನ್ನು ನಿಭಾಯಿಸಿದ್ದಾರೆ. ಪ್ರಭಾವತಿಯಾಗಿ ಆರಾಧನಾ ನಟನೆ ಅದ್ಭುತ. ಈಕೆಗೆ ಇದು ಮೊದಲ ಚಿತ್ರ ಎಂದು ಹೇಳುವುದು ಕಷ್ಟ.
ಅಸ್ಥಿಗಳ ಪರಿಶೀಲಕಿಯಾಗಿ, ಫೊರೆನ್ಸಿಕ್ ತಜ್ಞೆಯಾಗಿ ಶ್ವೇತಾ ಪ್ರದೀಪ್ ನೈಜ ನಟನೆ ನೀಡಿದ್ದಾರೆ. ಕಾಟೇರನ ಅಕ್ಕನ ಪಾತ್ರದಲ್ಲಿ ಶ್ರುತಿ ಒಂದು ಗ್ಯಾಪ್ ಬಳಿಕ, ಸೆಂಟಿಮೆಂಟ್ ಪ್ಲೇ ಮಾಡಿದ್ದಾರೆ. ಕುಮಾರ್ ಗೋವಿಂದ್, ರವಿ ಚೇತನ್ ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದಾರೆ. ಖಳನಾಗಿ ವಿನೋದ್ ಆಳ್ವ, ಜಗಪತಿ ಬಾಬು ಅಬ್ಬರಿಸಿದ್ದಾರೆ. ಚೋಂಗ್ಲನಾಗಿ ಬಿರಾದಾರ್ ಮನರಂಜನೆ ನೀಡಿದ್ದಾರೆ. ವಿ ಹರಿಕೃಷ್ಣ ಸಂಗೀತ ಆಪ್ಯಾಯವೆನಿಸುತ್ತದೆ.
ಈ ಎಲ್ಲ ಕಾರಣಗಳಿಂದ ಸಿನಿಮಾ ಮಾಸ್, ಕ್ಲಾಸ್ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ.