ನೀರಿಲ್ಲದ ಊರಿನಲ್ಲಿ ಕುತಂತ್ರ ನರಿಗಳು *****
‘ಕರಟಕ ದಮನಕ’ ಚಿತ್ರದಲ್ಲಿ ಇಬ್ಬರು ಸ್ಟಾರ್ ನಟರು ಮತ್ತು ನಿರ್ದೇಶಕ ಇದ್ದಾರೆಂದು ಸುದ್ದಿ ಬಂದಾಗ ನಿರೀಕ್ಷೆ ಹೆಚ್ಚಾಗಿತ್ತು. ಅದರಂತೆ ಸಿನಿಮಾವು ಚೆನ್ನಾಗಿ ಮೂಡಿಬಂದಿದೆ. ಎರಡು ಕುತಂತ್ರ ನರಿಗಳ ಸುತ್ತ ಕಥೆಯು ಸಾಗುತ್ತದೆ. ಕಳ್ಳತನವನ್ನೇ ಜೀವನ ಅಂತ ತಿಳಿದುಕೊಂಡಿರುತ್ತಾರೆ. ಉತ್ತರ ಕರ್ನಾಟಕದ ಹಳ್ಳಿಯೊಂದರಲ್ಲಿ ನೀರಿಗಾಗಿ ಜನರು ಕಷ್ಟಪಡುತ್ತಿರುತ್ತಾರೆ. ಹೀಗಿರುವಾಗ ಆ ಊರಿಗೆ ನಾಯಕರಿಬ್ಬರ ಪ್ರವೇಶ ಆಗುತ್ತದೆ. ಇವರಿಬ್ಬರ ಕರಾಮತ್ತಿನಿಂದ ಊರಿನ ಜನರಿಗೆ ನೀರು ಸಿಗುತ್ತದಾ? ಎನ್ನುವುದಕ್ಕೆ ಉತ್ತರ ಚಿತ್ರಮಂದಿರದಲ್ಲಿ ಸಿಗುತ್ತದೆ.
ಶಿವರಾಜ್‌ಕುಮಾರ್ ೬೦+, ಪ್ರಭುದೇವ ೫೦+ ಆದರೂ ಇಬ್ಬರು ಲೀಲಜಾಲವಾಗಿ ಅಭಿನಯಿಸಿ ಡ್ಯಾನ್ಸ್‌ದಲ್ಲೂ ಸೈ ಅನಿಸಿಕೊಂಡಿದ್ದಾರೆ. ಇವರಿಬ್ಬರ ಎನರ್ಜಿಗೆ ನಮ್ಮ ಕಡೆಯಿಂದ ಸಲ್ಯೂಟ್. ನಿರ್ದೇಶಕ ಯೋಗರಾಜ್‌ಭಟ್ ಈ ಬಾರಿ ವಿನೂತನ ಕಥೆಯನ್ನು ಆರಿಸಿಕೊಂಡಿರುವುದು ವಿಶೇಷ. ಅದನ್ನು ಅಚ್ಚುಕಟ್ಟಾಗಿ ತೆರೆ ಮೇಲೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಬಹುದು. ಹೇಗಿದ್ದರೂ ಈಗ ನೀರಿನ ಅಭಾವ ಜಾಸ್ತಿ ಇರುವುದರಿಂದ ನೋಡುಗರಿಗೆ ಸಿನಿಮಾವು ಕನೆಕ್ಟ್ ಆಗುತ್ತದೆ. ನಾಯಕಿಯರಾದ ಪ್ರಿಯಾಆನಂದ್ ಮತ್ತು ನಿಶ್ವಿಕಾನಾಯ್ಡು ಸಿಕ್ಕ ಅವಕಾಶದಲ್ಲಿ ಎಲ್ಲವನ್ನು ತೋರಿಸಿದ್ದಾರೆ. ಜೈಲರ್ ರುದ್ರೇಶ್ ಆಗಿ ರಾಕ್‌ಲೈನ್‌ವೆಂಕಟೇಶ್ ಇದ್ದಾರೆ. ತೆಲುಗು ಚಿತ್ರರಂಗದ ಹಿರಿಯ ನಟ ತನಿಕೆಲ್ಲಭರಣಿ ಇಷ್ಟವಾಗುತ್ತಾರೆ. ಕಾಮಿಡಿ ಕಿಲಾಡಿಗಳ ತಂಡವು ಪರದೆ ಮೇಲೆ ಕಾಣಿಸಿಕೊಂಡಿದ್ದಾರೆ. ವಿ.ಹರಿಕೃಷ್ಣ ಸಂಗೀತದಲ್ಲಿ ಹಾಡುಗಳು ಪರವಾಗಿಲ್ಲ. ಹಿನ್ನಲೆ ಶಬ್ದ ಚೆನ್ನಾಗಿದೆ. ಕ್ಲೈಮಾಕ್ಸ್‌ದಲ್ಲಿ ಹೇಳಿರುವ ಸಂದೇಶವು ಅರ್ಥಪೂರ್ಣವಾಗಿದೆ.
*****