ವಿನೂತನ ಪ್ರೇಮ ಕಥನ ****
ಅಮರ ಮಧುರ ಪ್ರೇಮದಲ್ಲಿ ಬಿದ್ದ ಮೇಲೆ ಕಾಡುವ ನೆನಪುಗಳು ಎಣಿಸಲಾಗದಷ್ಟು ಇರುತ್ತದೆ. ಅಂತಹ ನಿಟ್ಟಿನಲ್ಲಿ ನೈಜ ಪ್ರೀತಿಗೆ ಅರ್ಥ ಕಲ್ಪಿಸುವ ಕಥೆ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದಲ್ಲಿ ನವಿರಾಗಿ ತೋರಿಸಲಾಗಿದೆ. ಕಥಾನಾಯಕ ಸಿದ್ ಯುವ ಉದ್ಯಮಿ. ಸಂಪ್ರದಾಯಸ್ಥ ಕುಟುಂಬದವನಾಗಿದ್ದರಿಂದ ಸಂಬಂದಿ ರಾಧಾ ಜೊತೆ ಮದುವೆ ಮಾಡಲು ಮನೆಯವರು ಇಷ್ಟಪಟ್ಟಿರುತ್ತಾರೆ. ಆದರೆ ಆತನ ಮನಸ್ಸು ಅನಾಹಿತಳ ಮೇಲೆ ಇರುತ್ತದೆ. ಮುಂಗೋಪಿಯಾಗಿದ್ದರಿಂದ ಅವಳ ಪ್ರೀತಿಯಲ್ಲಿ ಬಿರುಕು ಮೂಡಿರುತ್ತದೆ. ಮುಂದೆ ಹಿಂದಿನ ಘಟನೆಗಳು ತೆರೆದುಕೊಳ್ಳುತ್ತದೆ. ಅಮ್ಮನಿಗೆ ಮಗ ದೊಡ್ಡ ಕ್ರಿಕೆಟ್ ಆಟಗಾರ ಆಗಬೇಕೆಂದು ಬಯಸಿರುತ್ತಾಳೆ. ತಾಯಿಯ ಆಸೆಯಂತೆ ಅದೇ ದಾರಿಯಲ್ಲಿ ಸಾಗುತ್ತಿರುತ್ತಾನೆ. ಮುಂದೆ ಅದರಿಂದಲೂ ದೂರವಾಗುತ್ತಾನೆ. ಇದಕ್ಕೆಲ್ಲಾ ಕಾರಣ ಯಾರು. ಇಬ್ಬರು ಹುಡುಗಿರಾ. ಅಂತಿಮವಾಗಿ ಯಾರಿಗೆ ಒಲಿಯುತ್ತಾನೆ ಎಂಬುದು ಚಿತ್ರಮಂದಿರಕ್ಕೆ ತಿಳಿಯುತ್ತದೆ.
ಎರಡನೇ ಚಿತ್ರದಲ್ಲಿ ನಾಯಕ ವಿಹಾನ್ ಲವ್ವರ್‌ಬಾಯ್ ಆಗಿ ಚೆಂದ ಕಾಣಿಸುತ್ತಾರೆ. ಧಾರವಾಹಿಯಲ್ಲಿ ಮಿಂಚಿದ್ದ ನಾಯಕಿ ಅಂಕಿತಾಅಮರ್ ಹಾಗೂ ಮಯೂರಿ ಇಬ್ಬರು ಜಿದ್ದಿಗೆ ಬಿದ್ದವರಂತೆ ಚೆನ್ನಾಗಿ ನಟಿಸಿದ್ದಾರೆ. ಇವರಿಗೆ ಬೆನ್ನಲುಬಾಗಿ ಗಿರಿಜಾಶೆಟ್ಟರ್, ಶಂಕರ್‌ಮೂರ್ತಿ ಮುಂತಾದವರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಇದಕ್ಕೆ ಇಂಬುಕೊಟ್ಟಂತೆ ಮೆಲೋಡಿ ಹಾಡುಗಳು ನೋಡುಗರನ್ನು ಆವರಿಸಿಕೊಳ್ಳುತ್ತದೆ. ಒಟ್ಟಾರೆ ಕುಟುಂಬಸಮೇತ ನೋಡಬಹುದಾದ ಚಿತ್ರ ಅಂತ ಖಡಾಖಂಡಿತವಾಗಿ ಹೇಳಬಹುದು.
****