ಸತ್ಯ ಸುಖ ಸುಳ್ಳು ಕಷ್ಟ****
ಸತ್ಯಹರಿಶ್ಚಂದ್ರ ಹೆಸರು ಇಟ್ಟುಕೊಂಡು ಬಾಯಿಬಿಟ್ಟರೆ ಸುಳ್ಳಿನ ಸರಮಾಲೆ. ಆತನಿಗೊಂದಿಷ್ಟು ಗೆಳೆಯರು. ಹಳ್ಳಿ ಸುತ್ತುತ್ತಾ ಜಾಲಿ ಜಾಲಿ ಎನ್ನುತ್ತಿದ್ದ ಅವನಿಗೆ ಅದೇ ಸುಳ್ಳು ಭಯ ತರಿಸುವಂತ ಘಟನೆಯೊಂದು ನಡೆಯುತ್ತದೆ. ಮುಂದೆ ಬಂಕ್ ಸೀನನಾಗಿ ನಿಜ ಹೇಳುತ್ತಿರುತ್ತಾನೆ. ಅಷ್ಟಕ್ಕೂ ಅಲ್ಲಿ ನಡೆದುದಾದರೂ ಏನು? ಅದನ್ನು ತಿಳಿಯಲು ‘ಯಲಾಕುನ್ನಿ’ ಚಿತ್ರ ನೋಡಬೇಕು.
ಕೋಮಲ್‌ಕುಮಾರ್ ಎಂದರೆ ಅಲ್ಲಿ ನಗು ಇದ್ದೆ ಇರಬೇಕು, ಇರುತ್ತದೆ. ಇಲ್ಲಿಯೂ ಅದು ಮುಂದುವರೆದಿದೆ. ಹಳ್ಳಿಯಲ್ಲಿ ನಡೆಯುವ ಕಥೆಯು ರಾಜಕೀಯ, ಪಂಚಾಯ್ತಿ, ಚುನಾವಣೆ, ಇನ್ನು ಹಲವು ಲೆಕ್ಕಚಾರದೊಂದಿಗೆ ಸಿನಿಮಾವು ಸಾಗುತ್ತದೆ. ಸನ್ನಿವೇಶಗಳೇ ಕಾಮಿಡಿ ತರಿಸುತ್ತದೆ. ಎರಡನೇ ಗೆಟಪ್‌ದಲ್ಲಿ ಕೋಮಲ್ ವಜ್ರಮುನಿಯಾಗಿ ಕಾಣಿಸಿಕೊಂಡಿರುವುದು ವಿಶೇಷ. ಕೇಡಿ ನಾಗಪ್ಪ ಉರುಫ್ ವಜ್ರಮುನಿಯಾಗಿ ಕಥೆ ಬಿಚ್ಚಿಕೊಳ್ಳುತ್ತದೆ.
ಊರಿನ ಹೆಣ್ಣೋಬ್ಬಳ ಮೇಲೆ ಅತ್ಯಾಚಾರ ನಡೆಸಿದ ಫಲವಾಗಿ ಹುಟ್ಟಿದ ಮಗನೇ ಸತ್ಯಹರಿಶ್ಚಂದ್ರ. ಅಪ್ಪನ ದುಷ್ಟಚಟಗಳು ಕೆಂಗಟ್ಟ ಜನರಿಂದ ಹೊಡೆಸಿಕೊಂಡು ಅನಾಥವಾಗಿ ಸತ್ತು ಹೋಗುತ್ತಾನೆ. ಮುಂದೆ ನಿಜ ಬಯಲಾಗುತ್ತದಾ? ಸತ್ಯ ಬದಲಾಗಿ ಊರಿನ ಜನರ ಹಿತ ಕಾಪಾಡಲು ಪಣ ತೊಡುತ್ತಾನಾ? ಅಥವಾ ತಂದೆಯಂತೆ ಸಾಯುತ್ತಾನಾ? ಎಲ್ಲದಕ್ಕೂ ಉತ್ತರ ಚಿತ್ರಮಂದಿರಕ್ಕೆ ಬಂದರೆ ಸಿಗುತ್ತದೆ.
ಎನ್.ಆರ್.ಪ್ರದೀಪ್ ನಿರ್ದೇಶಕರಾಗಿ ಭವಿಷ್ಯವಿದೆ. ಕೋಮಲ್‌ಕುಮಾರ್ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ನಗು ತರಿಸುವ ದೃಶ್ಯಗಳು, ಥಿಯೇಟರ್‌ನಿಂದ ಹೊರಬರುವಾಗ ವಜ್ರಮುನಿ ಕಣ್ಣ ಮುಂದೆ ಬರುತ್ತಾರೆ. ಅಂತಹ ಮನೋಜ್ಞ ಅಭಿನಯ ಕಣ್ಣಿಗೆ ತಂಪು ಕೊಡುತ್ತದೆ. ಉಳಿದಂತೆ ನಿಸರ್ಗಅಪ್ಪಣ್ಣ, ಮಹಾಂತೇಶ್, ಮಿತ್ರ, ಜಯಸಿಂಗಮುಸೂರಿ, ಮಯೂರ್‌ಪಟೇಲ್, ಯತಿರಾಜ್, ವಜ್ರಮುನಿ ಮೊಮ್ಮಗ ಆಕರ್ಶ್ ಸತ್ಯನ ಬಾಲ್ಯದ ಪಾತ್ರದಲ್ಲಿ ನಟಿಸದ್ದಾರೆ. ಟೈಮ್ ಪಾಸ್‌ಗೆ ಚಿತ್ರ ಮೋಸ ಮಾಡುವುದಿಲ್ಲ.
****