Bagheera.Reviews

Thursday, October 31, 2024

42

ಧರ್ಮ ಮತ್ತು ಅಧರ್ಮ ನಡುವಿನ ಬಘೀರ****

       ಸಮಾಜದಲ್ಲಿ ಜನರಿಗೆ ತೊಂದರೆ ಆದರೆ ರಕ್ಷಣೆ ನೀಡಬೇಕಾದುದು ಪೋಲೀಸ್. ಆದರೆ ಕರ್ತವ್ಯ ನಿಭಾಯಿಸಲು ಹೋದಾಗ ಅಡೆತಡೆಗಳು ಬರುತ್ತವೆ. ಆಗ ಸಾರ್ವಜನಿಕರ ಹಿತ ಕಾಪಾಡಲು ಆತ ಬೇರೆ ಮಾರ್ಗ ಹುಡುಕಿಕೊಂಡು ಹೇಗೆ ಒಳಿತನ್ನು ಮಾಡುತ್ತಾನೆ ಎಂಬುದನ್ನು ‘ಬಘೀರ’ ಚಿತ್ರದಲ್ಲಿ ತೋರಿಸಲಾಗಿದೆ. ಪುಟ್ಟ ಹುಡುಗನೊಬ್ಬ ಒಳ್ಳೆಯದನ್ನು ಮಾಡಬೇಕೆಂದು ಕನಸು ಕಂಡಿರುತ್ತಾನೆ. ಮುಂದೆ ಅಮ್ಮ, ಅಪ್ಪನ ಸ್ಪೂರ್ತಿಯಿಂದ ಪೋಲೀಸ್ ಅಧಿಕಾರಿ ಆಗುತ್ತಾನೆ. ಸಹಾಯಕ ಆಯುಕ್ತನಾಗಿ ಮಂಗಳೂರು ಕಛೇರಿಗೆ ಬರುತ್ತಾನೆ. ಹಣದ ಸಹಾಯದಿಂದ ಇಲಾಖೆಯವರನ್ನೇ ತನ್ನ ಕಪಿಮುಷ್ಟಿಯಲ್ಲಿಟ್ಟುಕೊಂಡಿದ್ದ ದುರುಳರು, ಅಪ್ಪನೇ ಲಂಚ ನೀಡಿ ತನ್ನನ್ನು ಕೆಲಸಕ್ಕೆ ಸೇರಿಸಿರೋದು ತಿಳಿಯುತ್ತದೆ. ಅಧಿಕಾರದಲ್ಲಿದ್ದರೂ ಏನೂ ಮಾಡಲಾಗದ ಸ್ಥಿತಿಗೆ ಬಂದಾಗ, ಅನ್ಯ ದಾರಿ ಕಡೆಗೆ ಗಮನ ಹರಿಸುತ್ತಾನೆ. ಅದು ಏನು? ಕಥೆಗಾರ ಪ್ರಶಾಂತ್ ನೀಲ್ ಡಾನ್‌ಗಳು ಇಂಟರ್ ನ್ಯಾಷನಲ್ ಲೆವೆಲ್‌ದಲ್ಲಿ ನಡೆಸುವ ಹ್ಯೂಮರ್ ಟ್ರಾಫಿಕ್ ಸುತ್ತ ನಡೆಯುವ ಅಂಶಗಳನ್ನು ತೆರೆದಿಟ್ಟಿದ್ದಾರೆ.

        ‘ಲಕ್ಕಿ’ ಎಂಬ ಹಾಸ್ಯ ಚಿತ್ರ ನಿರ್ದೇಶನ ಮಾಡಿದ್ದ ಡಾ.ಸೂರಿ, ಈ ಬಾರಿ ಸಿಸ್ಟಮ್ ಕುರಿತಾದ ಕಥೆಯನ್ನು ಆಯ್ಕೆ ಮಾಡಿಕೊಂಡು ಅದರಲ್ಲೂ ಸಪಲರಾಗಿದ್ದಾರೆ. ಶ್ರೀ ಮುರಳಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡು ಆಕ್ಷನ್‌ದಲ್ಲಿ ಹೆಚ್ಚು ಮಿಂಚಿದ್ದಾರೆ. ರುಕ್ಮಿಣಿವಸಂತ್‌ಗೆ ಹೆಚ್ಚು ಅವಕಾಶ ಸಿಕ್ಕಿಲ್ಲ. ಸಿಬಿಐ ಅಧಿಕಾರಿಯಾಗಿ ಪ್ರಕಾಶ್‌ರಾಜ್, ಪೇದೆಯಾಗಿ ರಂಗಾಯಣರಘು, ತಂದೆ-ತಾಯಿ ಪಾತ್ರದಲ್ಲಿ ಅಚ್ಯುತಕುಮಾರ್, ಸುಧಾರಾಣಿ, ಕೇಂದ್ರ ಮಂತ್ರಿಯಾಗಿ ಶರತ್‌ಲೋಹಿತಾಶ್ವ, ಪತ್ರಕರ್ತನಾಗಿ ಅಶ್ವಿನ್‌ಹಾಸನ್, ಖಳನಾಗಿ ಗರುಡರಾಮ್ ಎಲ್ಲರೂ ತಮಗೆ ದೊರೆತ ಪಾತ್ರವನ್ನು ಚೆನ್ನಾಗಿ ನಿಭಯಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತದಲ್ಲಿ ಹಾಡುಗಳಿಗಿಂತ ಹಿನ್ನಲೆ ಶಬ್ದ ಇಷ್ಟವಾಗುತ್ತದೆ. ಎ.ಜೆ.ಶೆಟ್ಟಿ ಛಾಯಾಗ್ರಹಣ ಚೆನ್ನಾಗಿದೆ. ಹೊಂಬಾಳೆ ಫಿಲ್ಸ್ಮ್ ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದೆ.

****

 

Copyright@2018 Chitralahari | All Rights Reserved. Photo Journalist K.S. Mokshendra,