ಶೋಷಿತರಿಗೆ ಆಸರೆಯಾದ ಭೈರತಿ ರಣಗಲ್****
‘ಮಫ್ತಿ’ ಸಿನಿಮಾ ನೋಡಿದವರಿಗೆ ‘ಭೃರತಿ ರಣಗಲ್’ ಹೆಸರು ಅಚ್ಚಳಿಯದೆ ಇರುತ್ತದೆ. ಅದನ್ನು ಯಶಸ್ವಿಯಾಗಿ ನಿಭಾಯಿಸಿರುವುದು ಓನ್ ಅಂಡ್ ಹೋನ್ಲಿ ಶಿವರಾಜ್‌ಕುಮಾರ್. ಇದೇ ಹೆಸರಿನಲ್ಲಿ ಬಂದ ಚಿತ್ರವು ಪ್ರೀಕ್ವೆಲ್ ಆಗಿ ಮೂಡಿ ಬಂದಿರುವುದು ವಿಶೇಷ. ರೋಣಾಪುರದ ಗ್ರಾಮದ ಮುಗ್ದ ಜನರಿಗೆ ಒಳ್ಳೆಯದು ಮಾಡಬೇಕೆಂದು ಪಣತೊಟ್ಟು, ಅಲ್ಲಿನ ವ್ಯವಸ್ಥೆಯ ವಿರುದ್ದ ಸಿಡಿದು ನಿಂತಾಗ ಹಾದಿಯಲ್ಲಿ ಏನೆಲ್ಲಾ ಅಡೆತಡೆಗಳು ಬರುತ್ತದೆ. ಅದನ್ನೆಲ್ಲಾವನ್ನು ಯಾವ ನಿಭಾಯಿಸಿ ಯಶಸ್ವಿಯಾಗುತ್ತಾನೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಇದರಲ್ಲಿ ತಂಗಿಯ ಭಾವನೆಗಳ ಜತೆಗೆ ಬಡವರ ಸಂಕಷ್ಟಗಳು ಏನು ಅಂತ ತೋರಿಸಿರುವುದು ಮನ ಮುಟ್ಟುತ್ತದೆ. ಜೈಲಿನಲ್ಲಿದ್ದು ಕೊಂಡು ಲಾ ಮುಗಿಸಿದ ಭೈರತಿ, ಗಣಿಗಾರಿಕೆ ಆರಂಭಿಸುವ ಪರಾಂಡೆ ವಿರುದ್ದ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತಾನೆ. ಆದರೆ ಆತನ ಹಣದ ಮುಂದೆ ಎಲ್ಲವು ವ್ಯರ್ಥವಾಗುತ್ತದೆ. ಕೊನೆಗೆ ಎಲ್ಲವನ್ನು ಹೇಗೆ ಬಗೆಹರಿಸುತ್ತಾನೆ ಎಂಬುದನ್ನು ಕ್ಲಾಸ್, ಮಾಸ್ ಆಗಿ ತೋರಿಸಲಾಗಿದೆ. ಇದನ್ನು ನಾವು ಹೇಳುವುದಕ್ಕಿಂತ ತೆರೆ ಮೇಲೆ ನೋಡುವುದೇ ಚೆಂದ ಅನಿಸುತ್ತದೆ.
ನಿರ್ದೇಶಕ ನರ್ತನ್ ಈ ಬಾರಿ ಶಿವಣ್ಣನ ಇಮೇಜ್‌ಗೆ ತಕ್ಕಂತೆ ಚಿತ್ರಕಥೆಯನ್ನು ರೂಪಿಸಿ ಯಶಸ್ವಿಯಾಗಿದ್ದಾರೆ. ಶೀರ್ಷಿಕೆ ಹೆಸರಿನಲ್ಲಿ ಹ್ಯಾಟ್ರಿಕ್ ಹೀರೋ ಅಬ್ಬರಿಸಿ ಅಭಿಮಾನಿಗಳಿಗೆ ಬಾಡೂಟ ನೀಡಿದ್ದಾರೆ. ರುಕ್ಮಿಣಿವಸಂತ್ ನಾಯಕಿಯಾಗಿ ಅವಕಾಶ ಕಡಿಮೆ. ಹಿರಿಯ ನಟ ಅವಿನಾಶ್ ಹಿಂದೆಂದೂ ಕಾಣದಂತ ಪಾತ್ರದಲ್ಲಿ ಇರುವುದು ವಿಶೇಷ. ಇವರೊಂದಿಗೆ ದೇವರಾಜ್, ಗೋಪಾಲಕೃಷ್ಣದೇಶಪಾಂಡೆ, ಪರಾಂಡೆ ಆಗಿ ಬಾಲಿವುಡ್ ನಟ ರಾಹುಲ್‌ಬೋಸ್, ತಂಗಿಯಾಗಿ ಛಾಯಾಸಿಂಗ್ ಎಲ್ಲರೂ ಗಮನ ಸೆಳೆದಿದ್ದಾರೆ.
ರವಿಬಸ್ರೂರು ಸಂಗೀತದೊಂದಿಗೆ, ನವೀನ್‌ಕುಮಾರ್ ಕ್ಯಾಮಾರ ಕೆಲಸ ಅಚ್ಚುಕಟ್ಟಾಗಿದೆ. ಸನ್ನಿವೇಶಗಳು ಮಣಿ ಪೋಣಿಸಿದಂತೆ ಇರುವುದರಿಂದ ನೋಡುಗರಿಗೆ ಬೋರ್ ಅನಿಸದೆ ಕೊನೆ ತನಕ ಸೀಟಿನಲ್ಲಿ ಇರುವಂತೆ ಮಾಡಿದೆ. ಗೀತಾಶಿವರಾಜ್‌ಕುಮಾರ್ ಎರಡನೇ ಬಾರಿ ನಿರ್ಮಾಪಕಿಯಾಗಿ ಉತ್ತಮ ಸಿನಿಮಾ ನೀಡಿದ್ದಾರೆ ಎನ್ನಬಹುದು.
****