ಶೋಷಿತರ ದನಿಯಾದ ಭಗತ್ರಾಯ್****
ಗತಕಾಲದಿಂದಲೂ ಬಡವ, ಶ್ರೀಮಂತರ ನಡುವೆ ಘರ್ಷಣೆ ನಡೆಯುತ್ತಲೇ ಇದೆ. ೧೯೭೦ರ ದಶಕದಲ್ಲಿ ಭೂಮಿ ಸುಧಾರಣೆ ಕಾಯ್ದೆ ಜಾರಿಗೆ ಬರುತ್ತದೆ. ಉಳುವವನೇ ಭೂಮಿಯ ಒಡೆಯ ಎಂಬ ಸರ್ಕಾರದ ಸುತ್ತೋಲೆಯಿಂದ, ಹಿಂದುಳಿದವರು ತಮ್ಮ ಹಕ್ಕು, ನ್ಯಾಯಕ್ಕಾಗಿ ಕಾನೂನಾತ್ಮಕವಾಗಿ ಹೋರಾಟ ನಡೆಸಿದ ಅಂಶಗಳನ್ನು ಬಳಸಿಕೊಂಡು ‘ಧೀರ ಭಗತ್‌ರಾಯ್’ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ನರಗುಂದದಲ್ಲಿ ಒಂದಷ್ಟು ರೈತರಿಗೆ ಭೂಮಿ ಸಿಗುತ್ತದೆ. ಆದರೆ ಅಲ್ಲಿನ ಭೂಮಾಲೀಕ ಜನರಿಗೆ ಸರಿಯಾಗಿ ಸವಲತ್ತು ಸಿಗದಂತೆ ಮಾಡಿ ಜಮೀನನ್ನು ಕಬ್ಜ ಮಾಡಿರುತ್ತಾನೆ. ಅದನ್ನು ನಾಯಕನಾದವನು ಹೇಗೆ ಹೋರಾಡುತ್ತಾನೆ. ಅಂತಿಮವಾಗಿ ಜನರಿಗೆ ತಲುಪುವಂತೆ ಮಾಡುವಲ್ಲಿ ಸಪಲನಾಗುತ್ತಾನಾ? ಎನ್ನುವುದು ಕಥಾ ಹಂದರ.
ನಿರ್ದೇಶಕ ಕಣ್ಣನ್ ಸನ್ನಿವೇಶಗಳನ್ನು ಸಂಶೋಧನೆ ನಡೆಸಿ, ಅದನ್ನು ದೃಶ್ಯರೂಪಕ್ಕೆ ತರುವಲ್ಲಿ ಅವರ ಶ್ರಮ ಪರದೆ ಮೇಲೆ ಕಾಣಿಸಿದೆ. ರಂಗಭೂಮಿ ಪ್ರತಿಭೆ ನಾಯಕ ರಾಜೇಶ್ ದಳವಾಯಿ ಇಡೀ ಸಿನಿಮಾವನ್ನು ಹೆಗಲಮೇಲೆ ಹೊತ್ತುಕೊಂಡಿದ್ದಾರೆ. ನಾಯಕಿ ಸುಚಾರಿತಾ ಚೆಂದ ಕಾಣಿಸುತ್ತಾರೆ. ಖಳನಾಗಿ ಶರತ್‌ಲೋಹಿತಾಶ್ವ ಇವರೊಂದಿಗೆ ಪ್ರವೀಣ್ ಹಗಡೂರು, ಮಠಕೊಪ್ಪಳ, ಸುಧೀರ್‌ಕುಮಾರ್ ಮುರೊಳ್ಳಿ, ಶಶಿಕುಮಾರ್, ಫಾರೂಕ್ ಅಹ್ಮದ್, ಚಂದ್ರಿಕಾಗೌಡ, ನಯನ, ಸಿದ್ದಾರ್ಥ್‌ಗೋವಿಂದ್, ಅನಿಲ್ ಹೊಸಕೊಪ್ಪ, ಪ್ರೊಫೆಸರ್ ಹರಿರಾಮ್, ಪಿ.ಮೂರ್ತಿ, ಹಮಾನುಷ್‌ಗೌಡ ಮುಂತಾದವರು ತಮಗೆ ನೀಡಿದ ಅವಕಾಶಕ್ಕೆ ನ್ಯಾಯ ಒದಗಿಸಿದ್ದಾರೆ.
ಪೂರ್ಣಚಂದ್ರತೇಜಸ್ವಿ ಸಾಹಿತ್ಯ ಮತ್ತು ಸಂಗೀತ ಅಲ್ಲಲ್ಲಿ ಕೆಲಸ ಮಾಡಿದೆ. ಶ್ರೀ ಓಂ ಸಿನಿ ಎಂಟರ್‌ಟೈನ್‌ಮೆಂಟ್ ಹಾಗೂ ವೈಟ್ ಲೋಟಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿದೆ.
****