ಮ್ಯಾಕ್ಸ್ ಮ್ಯಾಕ್ಸಿಮಮ್ ಮನರಂಜನೆ****
ಎರಡು ವರ್ಷಗಳ ನಂತರ ಸುದೀಪ್ ಅಭಿನಯದ ‘ಮ್ಯಾಕ್ಸ್’ ಚಿತ್ರವು ಒಂದು ರಾತ್ರಿಯಲ್ಲಿ ನಡೆಯುವ ಆಕ್ಷನ್ ಥ್ರಿಲ್ಲರ್ ಕಥೆಯನ್ನು ಹೊಂದಿದೆ. ಇದರಲ್ಲಿ ರಾಜಕೀಯ ಜಿದ್ದಾಜಿದ್ದಿ, ಮಾಫಿಯಾ ವ್ಯಾಪಿಸಿದೆ. ಅನ್ಯಾಯಕ್ಕೆ ಕೊನೆಯೇ ಇಲ್ಲ. ಒಳ್ಳೆಯವರಿಗೆ ಒಳ್ಳೆಯ ಕಾಲ ಬರುವುದಿಲ್ಲ. ಅಂತಹ ಸಮಯದಲ್ಲಿ ಅದೇ ವ್ಯಾಪ್ತಿಗೆ ಬರುವ ಖಡಕ್ ಪೋಲೀಸ್ ಅಧಿಕಾರಿ ಅರ್ಜುನ್ ಮಹಾಕ್ಷಯ್ ಉರುಫ್ ಮ್ಯಾಕ್ಸ್ ಡ್ಯೂಟಿಗೆ ಹಾಜರಾಗುತ್ತಾರೆ. ಇವರ ಪ್ರಾಮಾಣಿಕತೆಯೇ ಸ್ಟೇಷನ್‌ನಿಂದ ಸ್ಟೇಷನ್‌ಗೆ ವರ್ಗಾವಣೆ ಆಗೋದು, ಅಮಾನತು ಗೊಳ್ಳೋದು ಆಗಿಬಿಟ್ಟಿರುತ್ತದೆ. ಹೀಗೆ ಅಮಾನತು ಅವಧಿ ಮುಗಿಸಿಕೊಂಡು ಇಲ್ಲಿಗೆ ಕರ್ತವ್ಯಕ್ಕೆ ಹಾಜರಾಗಲು ಅಮ್ಮನೊಂದಿಗೆ ಊರಿಗೆ ಬರುತ್ತಾರೆ. ಆದರೆ ಹಿಂದಿನ ದಿನ ರಾತ್ರಿಯೇ ಹಲವು ನಿರೀಕ್ಷಿಸದ, ಅನಿರೀಕ್ಷಿತ, ಆಕಸ್ಮಿಕ ಘಟನೆಗಳು ನಡೆದು ಹೋಗಿರುತ್ತದೆ.
ಇದನ್ನು ಮಾಡಿದವರ ಮೇಲೆ ಹೆಡೆಮುರಿ ಕಟ್ಟಿ ಲಾಕಪ್‌ಗೆ ಹಾಕುತ್ತಾನೆ. ಇದರ ಮಧ್ಯೆ ಠಾಣೆಯಲ್ಲಿ ಬಂದನವಾಗಿದ್ದ ಇಬ್ಬರು ಸಾವನ್ನಪ್ಪಿರುತ್ತಾರೆ, ಇದರಿಂದ ಉದ್ರೇಕಗಂಡ ದುರುಳರ ಪಡೆಗಳು ಅರ್ಜುನ್ ಮೇಲೆ ಸೇಡು ತೀರಿಸಲು ಮುಂದಾಗುತ್ತಾರೆ. ಕೊನೆಗೆ ಎಲ್ಲವನ್ನು ಅರ್ಜುನೆ ಹೇಗೆ ಎದುರಿಸುತ್ತಾನೆ? ಎಂಬುದನ್ನು ಮಾಸ್ ಆಗಿ ತೋರಿಸಲಾಗಿದೆ. ಸೆಕೆಂಡ್ ಹಾಫ್ ಸಾಕಷ್ಟು ತಿರುವುಗಳು ಇರುವುದು ಪ್ಲಸ್ ಪಾಯಿಂಟ್ ಆಗಿದೆ.
ಕಿಚ್ಚ ಸುದೀಪ್ ಎಲ್ಲರ ಪರವಾಗಿ ಇಡೀ ಚಿತ್ರವನ್ನು ಹೆಗಲಮೇಲೆ ಹೊತ್ತುಕೊಂಡಿರುವುದು ಪರದೆ ಮೇಲೆ ಕಾಣಿಸುತ್ತದೆ. ಅಭಿಮಾನಿಗಳನ್ನು ರಂಜಿಸಲು ಏನೇನು ಬೇಕೋ ಅವೆಲ್ಲವು ತುಂಬಿಕೊಂಡಿದೆ. ನೆಗಟೀವ್ ರೋಲ್‌ದಲ್ಲಿ ವರಲಕ್ಷೀ ಶರತ್‌ಕುಮಾರ್ ಮಿಂಚಿದ್ದಾರೆ. ರಾಜಕಾರಣಿಯಾಗಿ ಶರತ್‌ಲೋಹಿತಾಶ್ವ, ಖಳನಾಗಿ ತೆಲುಗಿನ ಸುನಿಲ್, ಉಳಿದಂತೆ ಉಗ್ರಂಮಂಜು, ಸಂಯುಕ್ತಾ ಹೊರನಾಡು, ಸುಕೃತಾವಾಗ್ದೆ, ಗೋವಿಂದೇಗೌಡ, ವಿಜಯ್‌ಚೆಂಡೂರು ತಮಗೆ ನೀಡಿದ ಅವಕಾಶಕ್ಕೆ ನ್ಯಾಯ ಒದಗಿಸಿದ್ದಾರೆ.
ನಿರ್ದೇಶಕ ವಿಜಯ್ ಕಾರ್ತಿಕೇಯ ಸನ್ನಿವೇಶಗಳನ್ನು ಹೂ ಪೋಣಿಸಿದಂತೆ ಸೃಷ್ಟಿಸಿರುವುದರಿಂದ ಎಲ್ಲಿಯೂ ಬೋರ್ ಅನಿಸುವುದಿಲ್ಲ. ಅಜನೀಶ್ ಲೋಕನಾಥ್ ಅಬ್ಬರದ ಸಂಗೀತ ಸಿನಿಮಾಕ್ಕೆ ಶಕ್ತಿ ಬಂದಿದೆ ಎನ್ನಬಹುದು. ಕತ್ತಲಿನ ದೃಶ್ಯಗಳನ್ನು ಅಷ್ಟೇ ಚೆನ್ನಾಗಿ ಶೇಖರ್‌ಚಂದ್ರ ಸೆರೆಹಿಡಿದಿದ್ದಾರೆ. ಕೊರತೆಗಳೂ ಇದ್ದರೂ ಅದನ್ನು ಬದಿಗಿಟ್ಟರೆ ಒಟ್ಟಾರೆ ಸಿನಿಮಾ ಪೈಸಾ ವಸೂಲ್ ಆಗಿದೆ. ಕಲೈಪುಲಿ.ಎಸ್.ಧನು ನಿರ್ಮಾಣ ಮಾಡಿದ್ದಾರೆ.
****